ಎನ್.ಆರ್.ಪುರ ಭಾಗದಲ್ಲಿ ತುಂಗಾ ತಿರುವು ಯೋಜನೆ
ಹಲವು ಹಳ್ಳಿವಾಸಿಗರಿಗೆ ಎತ್ತಂಗಡಿ ಭೀತಿ
ಚಿಕ್ಕಮಗಳೂರು, ಜ.31: ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ ನೀರು ತುಂಬಿಸಲು ತುಂಗಾ ತಿರುವು ಯೋಜನೆ ಕೈಗೆತ್ತಿಕೊಂಡಿರುವ ಸರಕಾರ ಕಾಮಗಾರಿ ಆರಂಭಿಸಿದೆ.
ಕಾಮಗಾರಿ ಹಿನ್ನೆಲೆಯಲ್ಲಿ ಎನ್‌ಆರ್‌ಪುರ ತಾಲೂಕಿನ ಸಾತ್ಕೋಳಿ ಅರಣ್ಯ ಪ್ರದೇಶದಲ್ಲಿ ಸರಕಾರ ಮರಗಳನ್ನು ಕಡಿದು ಉರುಳಿಸುತ್ತಿರುವುದಕ್ಕೆ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತ ಪಡಿಸುತ್ತಿದ್ದಾರೆ.
ಬಯಲು ಸೀಮೆಯ ಜನರ ನೀರಿನ ದಾಹ ನೀಗಿಸಲು ಈ ಭಾಗದ ಜನರು ಹಿಂದೆ ತಮ್ಮ ಮನೆ, ಮಠ, ಆಸ್ತಿ, ಪಾಸ್ತಿಗಳ ಸಹಿತ ಹಳ್ಳಿಗಳನ್ನು ಭದ್ರಾ ಜಲಾಶಯಕ್ಕೆ ಬಲಿಕೊಟ್ಟು ನಿರಾಶ್ರಿತರ ಹಣೆಪಟ್ಟಿ ಕಟ್ಟಿಕೊಂಡಿದ್ದರು.
ಈಗ ಸರಕಾರ ಅದೇ ಜನರನ್ನು ಇನ್ನೊಂದು ಯೋಜನೆಗೆ ಬಲಿ ಕೊಡಲು ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡಿರುವ ಆರೋಪ ಸ್ಥಳೀಯರಿಂದ ಕೇಳಿ ಬರತೊಡಗಿದೆ. ಸಾತ್ಕೋಳಿ ಪರಿಸರದಲ್ಲಿ ನೂರಾರು ವರ್ಷಗಳಿಂದ ಎದ್ದು ನಿಂತಿರುವ ಬೃಹತ್ ಗಾತ್ರದ ಬೆಲೆಬಾಳುವ ಮರಗಳನ್ನು ನೆಲಕ್ಕುರುಳಿಸಲಾಗುತ್ತಿದೆ. ಇದನ್ನು ವಿರೋಧಿಸಿರುವ ಜನರು ಮತ್ತೊಂದೆಡೆ ಉಳಿದಿರುವ ಮರಗಳನ್ನು ಅಪ್ಪಿಕೊಂಡು ‘ಅಪ್ಪಿಕೋ, ಅಪ್ಪಿಕೋ’ ಚಳವಳಿ ನಡೆಸುವ ಮೂಲಕ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಸಾತ್ಕೋಳಿ ಅರಣ್ಯ ವ್ಯಾಪ್ತಿಯಲ್ಲಿ ಸರಕಾರ ಭದ್ರಾ ಡ್ಯಾಂಗೆ ನೀರು ತುಂಬಿಸಲು ಭದ್ರಾ ಮೇಲ್ದಂಡೆ ಯೋಜನೆ ಮೂಲಕ ತುಂಗಾ ತಿರುವು ಯೋಜನೆ ಕೈಗೆತ್ತಿಕೊಂಡು ಕಾಮಗಾರಿ ಆರಂಭಿಸಿದೆ. ಎನ್‌ಆರ್‌ಪುರ ತಾಲೂಕಿನ ಕುಸುಬೂರು ಗ್ರಾಮದ ಸ.ನಂ.58ರಲ್ಲಿರುವ ತೂಬಿನಕೆರೆ ಬಲಭಾಗದಲ್ಲಿ ಪೂರ್ವ ದಿಕ್ಕಿನ ಕಡೆಗೆ ಯೋಜನೆಯು ಹಾದು ಹೋಗುವಂತೆ ಗುರುತಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಬರುವ ಸಾತ್ಕೋಳಿ, ಮಾರಿದಿಬ್ಬ, ಕುಸುಬೂರು ಸೇರಿದಂತೆ ಅನೇಕ ಹಳ್ಳಿಗಳ ಮನೆಗಳು ಹಾಗೂ ರೈತರ ಜಮೀನುಗಳು ಬಲಿಯಾಗುತ್ತಿದೆ ಎಂದು ಹಳ್ಳಿವಾಸಿಗರು ಆರೋಪಿಸಿದ್ದಾರೆ.
ಜೊತೆಗೆ ಈ ವ್ಯಾಪ್ತಿಯಲ್ಲಿ ಬರುವ ಸಮೃದ್ಧವಾದ ಅರಣ್ಯ ಪ್ರದೇಶವೂ ನಾಶವಾಗುವ ಅಪಾಯಕ್ಕೆ ಸಿಲುಕಿದೆ. ಈ ಯೋಜನೆಯ ಜಾರಿಯಿಂದ ಸುಮಾರು 22 ಸಾವಿರಕ್ಕೂ ಹೆಚ್ಚು ಮರಗಳು ನೆಲಕಚ್ಚಲಿರುವ ಆತಂಕ ಸ್ಥಳೀಯರನ್ನು ಕಂಗಾಲಾಗುವಂತೆ ಮಾಡಿದೆ.
ಈಗಾಗಲೇ ನೀರಾವರಿ ಇಲಾಖೆಗೆ ಸ್ಥಳೀಯ ಗ್ರಾಮಸ್ಥರು ಬದಲಿ ಮಾರ್ಗವನ್ನು ಸೂಚಿಸಿದ್ದು, ಅರಣ್ಯ ಸಂಪತ್ತು ನಾಶಪಡಿಸದಂತೆ ಮರಗಳನ್ನು ಅಪ್ಪಿಕೊಂಡು ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.
ಸರಕಾರ ಇಲ್ಲಿನ ಜನರನ್ನು ನಿರಾಶ್ರಿತರನ್ನಾಗಿ ಮಾಡುವ ಬದಲು ಗ್ರಾಮಸ್ಥರ ಅಭಿಪ್ರಾಯದಂತೆ ನಡೆದರೆ ಯಾವ ಹಾನಿಯೂ ಆಗುವುದಿಲ್ಲ.
ಸರಕಾರಿ ಅಧಿಕಾರಿಗಳು ಗುರುತಿಸಿರುವ ತೂಬಿನಕೆರೆ ಬಲಭಾಗದಲ್ಲಿ ಪೂರ್ವ ದಿಕ್ಕಿಗೆ ಕಾಲುವೆ ಹಾದು ಹೋಗುವ ಬದಲು, ಕಾಲುವೆಯನ್ನು ತೂಬಿನಕೆರೆಯ ಎಡಭಾಗದಲ್ಲಿ ಪೂರ್ವ ದಿಕ್ಕಿನ ಮಾರ್ಗವಾಗಿ ತೆಗೆದುಕೊಂಡು ಹೋದಲ್ಲಿ ಗ್ರಾಮಗಳಿಗೆ ತೊಂದರೆಯಾಗದು.
ಅಲ್ಲದೆ ಆ ಪ್ರದೇಶ ಬಯಲು ಪ್ರದೇಶವಾಗಿರುವುದರಿಂದ ಕಾಡನ್ನು ಕಡಿಯುವುದು ಉಳಿಯುತ್ತದೆ. ಜೊತೆಗೆ 4 ಕಿ.ಮೀ ಅಂತರ ಕಡಿಮೆಯಾಗುತ್ತದೆ.
ಪ್ರಕಾಶ್, ಯುವ ಮುಖಂಡ