×
Ad

​ಜಗಳ ಬಿಡಿಸಲು ಹೋದ ವ್ಯಕ್ತಿಗೆ ಚೂರಿ ಇರಿತ

Update: 2017-01-31 22:55 IST

ಹರಿಹರ, ಜ.31: ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ಜಗಳವಾಡುತ್ತಿದ್ದ ಇಬ್ಬರನ್ನು ಬಿಡಿಸಲು ಹೋದ ಮೂರನೆ ವ್ಯಕ್ತಿಗೆ ಚಾಕುವಿನಿಂದ ಇರಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಗ್ರಾಮದ ರಸ್ತೆ ಬದಿ ಚಹಾ ಹೊಟೇಲ್‌ನ ನಾಗರಾಜ್(26) ಎಂಬಾತನೇ ಚಾಕು ಇರಿತಕ್ಕೆ ಒಳಗಾಗಿ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕ.
ಘಟನೆ ವಿವರ: ಹೊಸಪೇಟೆ ಬಳಿಯ ಹುಲಗಿ ದೇವಸ್ಥಾನಕ್ಕೆ ದಾವಣಗೆರೆಯಿಂದ ಬೊಲೆರೊ ವಾಹನದಲ್ಲಿ ತೆರಳುತ್ತಿದ್ದ ಕುಟುಂಬದ ಐದಾರು ಜನರು ಬೆಳಗ್ಗೆ 5ಕ್ಕೆ ಚಹಾ ಕುಡಿಯಲು ಹೋಟೆಲ್‌ಗೆ ಬಂದಿದ್ದಾರೆ. ಚಹಾ ಕುಡಿದ ನಂತರ ವಾಹನ ಮುಂದೆ ಸಾಗಿಸುವಾಗ ಲಾರಿಯೊಂದು ಅಡ್ಡಲಾಗಿ ನಿಂತಿತ್ತು. ಆ ಲಾರಿಯನ್ನು ಮುಂದೆ ಸಾಗಿಸುವ ಕುರಿತು ಬೊಲೆರೊ ವಾಹನದಲ್ಲಿದ್ದವರಿಗೂ ಲಾರಿ ಚಾಲಕನ ಜೊತೆ ವಾಗ್ವಾದ ನಡೆದಿದೆ. ಇವರ ಜಗಳ ಬಿಡಿಸಲು ಹೋಟೆಲ್‌ನ ನಾಗರಾಜ್ ಮಧ್ಯ ಪ್ರವೇಶಿಸಿದ್ದಾರೆ. ಆಗ ಬೊಲೆರೊ ವಾಹನದಲ್ಲಿದ್ದ ಓರ್ವ ವ್ಯಕ್ತಿ ಚಾಕುವಿನಿಂದ ನಾಗರಾಜ್‌ನ ಎದೆ, ಹೊಟ್ಟೆ, ಪಕ್ಕೆಲುಬಿಗೆ ಮೂರು ಕಡೆ ತಿವಿದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ನಾಗರಾಜನನ್ನು ಕೂಡಲೇ ಗ್ರಾಮಸ್ಥರು ಆಸ್ಪತ್ರೆಗೆ ಸಾಗಿಸಿದರು.
   ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಠಾಣೆ ಪೊಲೀಸರು ಬೊಲೆರೊ ವಾಹನದಲ್ಲಿದ್ದವರ ಪೈಕಿ ಅಜಯ್, ಕಿರಣ್ ಮತ್ತು ಪ್ರವೀಣ್‌ರನ್ನು ವಶಕ್ಕೆ ಪಡೆದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News