ಲಂಚ ಸ್ವೀಕಾರ: ಕಸಬಾ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ
ಚಿಕ್ಕಮಗಳೂರು,ಫೆ.1: ಫಾರಂ ನಂ.53ರ ಅಡಿಯಲ್ಲಿ ಸಲ್ಲಿಸಿದ್ದ ಅರ್ಜಿ ವಿಲೇವಾರಿಗೆ ಸಂಬಂಧಿಸಿದಂತೆ ಸಾಗುವಳಿದಾರರೋರ್ವರಿಂದ ಲಂಚ ಕೇಳಿ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಕಂದಾಯ ನಿರೀಕ್ಷಕನನ್ನು ವಶಕ್ಕೆ ತೆಗೆದುಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ಸಮೀಪದ ಇಂದಾವರ ಗ್ರಾಮದ ನಾಸಿರ್ ಖಾನ್ ಫಾರಂ ನಂ.53ರ ಅಡಿಯಲ್ಲಿ 1998-99ರಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಲೇವಾರಿಗೆ ಸಂಬಂಧಿಸಿದಂತೆ ಕಸಬಾ ಕಂದಾಯ ನಿರೀಕ್ಷಕ ಹೇಮಂತ್‌ಕುಮಾರ್ 25 ಸಾವಿರ ರೂ.ಗೆ ಲಂಚದ ರೂಪದಲ್ಲಿ ಬೇಡಿಕೆಯನ್ನು ಮುಂದಿಟ್ಟಿದ್ದರು. ಅಷ್ಟು ಪ್ರಮಾಣದ ಹಣ ಹೊಂದಿಸಲು ಸಾಧ್ಯವಿಲ್ಲ ಎಂದು ವಿನಂತಿಸಿಕೊಂಡರೂ ಅಧಿಕಾರಿಯು ಕಿವಿಗೊಟ್ಟಿರಲಿಲ್ಲ.
ಇದರಿಂದ ಬೇಸತ್ತು ಹೋದ ನಾಸಿರ್ ಖಾನ್ ನಗರದ ಎಸಿಬಿ ಅಧಿಕಾರಿಗಳಿಗೆ ವಿಷಯ ತಿಳಿಸಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ನಾಸಿರ್ ಖಾನ್‌ಕಸಬಾ ಕಂದಾಯ ನಿರೀಕ್ಷಕರ ಕಚೇರಿಯಲ್ಲಿ 15 ಸಾವಿರ ರೂ. ಲಂಚದ ಹಣ ನೀಡುತ್ತಿದ್ದಾಗ ಚಿಕ್ಕಮಗಳೂರು ಎಸಿಬಿ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ದಾಳಿ ನಡೆಯುತ್ತಿದ್ದಂತೆ ಕಸಬಾ ಕಂದಾಯ ನಿರೀಕ್ಷಕ ಹೇಮಂತ್ ಕುಮಾರ್ ಕುಸಿದು ಬಿದ್ದರು. ತಕ್ಷಣ ಅವರನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.