ಡ್ರಾಪ್ ಕೊಡುತ್ತೇನೆಂದು ನಂಬಿಸಿ ಸರ ಅಪಹರಣ
Update: 2017-02-01 22:45 IST
ಹೊನ್ನಾವರ, ಫೆ.1: ಮಹಿಳೆಗೆ ಡ್ರಾಪ್ ಕೊಡುತ್ತೇನೆಂದು ಹೇಳಿ ಅವಳನ್ನು ಬೈಕ್ ಮೇಲೆ ಹತ್ತಿಸಿಕೊಂಡ ವ್ಯಕ್ತಿ ನಂತರ ಆಕೆಯ ಕತ್ತಿನಲ್ಲಿದ್ದ ಸರ ಅಪಹರಿಸಿದ ಘಟನೆ ತಾಲೂಕಿನ ಹೊದ್ಕೆಶಿರೂರ ಸಮೀಪ ನಡೆದಿದೆ.
ಸರ ಕಳೆದುಕೊಂಡ ಮಹಿಳೆ ಹೊದ್ಕೆಶಿರೂರಿನ ದುರ್ಗಮ್ಮ ನಾರಾಯಣ ನಾಯ್ಕ ಪೋಲಿಸರಿಗೆ ದೂರು ನೀಡಿದ್ದಾರೆ.
ಘಟನೆಯ ವಿವರ: ಹೊದ್ಕೆಶಿರೂರಿನ ಕಣಿವೆಕ್ರಾಸ್ ಬಳಿ ನಡೆದುಕೊಂಡು ಹೋಗುತ್ತಿದ್ದ ದುರ್ಗಮ್ಮ ಅವರ ಬಳಿ ಬಂದ ಅಪರಿಚಿತ ಬೈಕ್ ಸವಾರ ಆಕೆಯ ಹತ್ತಿರ ತಾನು ಬೈಕ್ ಮೇಲೆ ಕುಮಟಾಕ್ಕೆ ಡ್ರಾಪ್ ಕೊಡುತ್ತೇನೆಂದು ಹೇಳಿ ಹತ್ತಿಸಿಕೊಂಡಿದ್ದಾನೆ. ದಾರಿಯ ಮಧ್ಯೆ ಆಕೆಯ ಕತ್ತಿನಲ್ಲಿದ್ದ 15 ಗ್ರಾಂ ತೂಕದ ಬಂಗಾರದ ಸರ ಹಾಗೂ 6 ಗ್ರಾಂ ತೀಕದ ಬಂಗಾರ ತೂಕದ ಮಾಂಗಲ್ಯ ಕಸಿದುಕೊಂಡು ಪರಾರಿಯಾಗಿದ್ದಾನೆ.
ಈ ಕುರಿತು ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.