ಅಳಿಯನ ಅಕ್ರಮ ಆಸ್ತಿ ಉಳಿಸಲು ಎಸ್.ಎಂ.ಕೃಷ್ಣ ನಾಟಕ: ಹಿರೇಮಠ ಆರೋಪ
ಹುಬ್ಬಳ್ಳಿ, ಫೆ.4: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಎರಡನೆಯ ರಾಜಕೀಯ ನಾಟಕವಾಡುತ್ತಿದ್ದಾರೆ. ಕೃಷ್ಣ ಅವರ ರಾಜೀನಾಮೆ ಹಿಂದೆ ಕುತಂತ್ರ ಅಡಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಆಪಾದಿಸಿದ್ದಾರೆ. ಶನಿವಾರ ಹುಬ್ಬಳ್ಳಿ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಇಳಿ ವಯಸ್ಸಿನಲ್ಲಿ ಎರಡನೆಯ ರಾಜಕೀಯ ನಾಟಕವಾಡುತ್ತಿದ್ದಾರೆ. ಅವರ ಅಳಿಯ ಸಿದ್ಧಾರ್ಥರ ಅಕ್ರಮ ಆಸ್ತಿ ರಕ್ಷಿಸುವ ಹುನ್ನಾರದಿಂದ ಪಕ್ಷಾಂತರ ನಾಟಕವಾಡುತ್ತಿದ್ದಾರೆ. ಕೃಷ್ಣ ಅವರ ಇಂತಹ ನಡೆಯನ್ನು ಈ ಹಿಂದೆ ಜಯಲಲಿತಾ ಹಾಗೂ ಬಿ.ಎಸ್. ಯಡಿಯೂರಪ್ಪಅನುಸರಿಸಿದ್ದರು ಎಂದು ಆರೋಪಿದರು.
ಕೃಷ್ಣ ಚಾಣಾಕ್ಷತನದಿಂದ ಹೆಜ್ಜೆಯಿಟ್ಟು ಜನರಿಗೆ ವಂಚನೆ ಮಾಡುತ್ತಿದ್ದಾರೆ. ಕೇಂದ್ರ ಸರಕಾರದ ಕಾಳಧನದ ಕತ್ತಿಯಿಂದ ತಪ್ಪಿಸಿಕೊಳ್ಳಲು ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕೃಷ್ಣ ನಡೆ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಒಂದೇ ಕಲ್ಲಿನಿಂದ ಎರಡು ಹಕ್ಕಿಗಳನ್ನು ಹೊಡೆಯುವ ಗುರಿ ಹೊಂದಿದ್ದಾರೆ. ಇಳಿ ವಯಸ್ಸಿನಲ್ಲಿ ಸಮಯ ಅವಕಾಶವನ್ನು ಬಳಸಿಕೊಂಡು ತನ್ನ ಅಳಿಯ ಸಿದ್ದಾರ್ಥ ಅವರ ಅಕ್ರಮ ಆಸ್ತಿ ಉಳಿಸಿಕೊಳ್ಳುವ ತಂತ್ರ ರೂಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಎಸ್.ಎಂ. ಕೃಷ್ಣ ಹಾಗೂ ಅವರ ಅಳಿಯ ವಿ.ಜಿ. ಸಿದ್ದಾರ್ಥ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪತಾಲೂಕಿನ 180 ಎಕರೆ ಅರಣ್ಯ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿದ್ದು, ಈ ಸಂಬಂಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಸಮಾಜ ಪರಿವರ್ತನಾ ಸಮುದಾಯದ ನಿರ್ಧಾರ ಮಾಡಿದೆ ಎಂದರು.