×
Ad

ರಾಜ್ಯದಲ್ಲಿ ನೀಟ್ ಗೊಂದಲ :50 ಸಾವಿರ ವಿದ್ಯಾರ್ಥಿಗಳಿಗೆ 4 ಪರೀಕ್ಷಾ ಕೇಂದ್ರಗಳು!

Update: 2017-02-04 20:56 IST

ಬೆಂಗಳೂರು,ಫೆ.4: ಎಂಬಿಬಿಎಸ್ ಹಾಗೂ ಬಿಡಿಎಸ್ ಕೋರ್ಸ್‌ಗಳ ಪ್ರವೇಶಾತಿಗಾಗಿನ ‘ನೀಟ್’ ಪರೀಕ್ಷೆಯನ್ನು ಮೇ 7ರಂದು ರಾಜ್ಯದ ಕೇವಲ ನಾಲ್ಕು ಕೇಂದ್ರಗಳಲ್ಲಿ ನಡೆಸುವ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯ ನಿರ್ಧಾರಕ್ಕೆ ರಾಜ್ಯದ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ರಾಜ್ಯದಲ್ಲಿನ 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಅವರು ಪರೀಕ್ಷೆ ಬರೆಯಲು ಬೆಂಗಳೂರು, ಮಂಗಳೂರು, ಬೆಳಗಾವಿ ಹಾಗೂ ಕಲಬುರ್ಗಿ, ಈ ನಾಲ್ಕು ಕೇಂದ್ರಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ಇದರಿಂದಾಗಿ ಬೀದರ್, ಮೈಸೂರು,ಶಿವಮೊಗ್ಗ ನಗರಗಳು ಹಾಗೂ ಆಸುಪಾಸಿನ ಪ್ರದೇಶಗಳ ವಿದ್ಯಾರ್ಥಿಗಳು, ಪರೀಕ್ಷಾ ಕೇಂದ್ರವನ್ನು ತಲುಪಬೇಕಾದರೆ 280 ಕಿ.ಮೀ.ವರೆಗೂ ಪ್ರಯಾಣಿಸಬೇಕಾಗಿದೆ. ರಾಜ್ಯದಲ್ಲಿ ಕೇವಲ ನಾಲ್ಕು ನೀಟ್ ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸಿರುವುದು ಬಡಕುಟುಂಬಗಳಿಗೆ ಭಾರೀ ತೊಂದರೆ ಯಾಗಲಿದೆಯೆಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿದ್ಯಾರ್ಥಿಗಳು ಆಹಾರ, ಪ್ರಯಾಣ ಹಾಗೂ ವಸತಿಗಾಗಿ ತುಂಬಾ ಹಣವನ್ನು ವ್ಯಯಿಸಬೇಕಾಗುತ್ತದೆಯಂದು ಅವರು ಹೇಳಿದ್ದಾರೆ.

ಸಿಇಟಿ ಪರೀಕ್ಷೆಗಳನ್ನು ಆಯೋಜಿಸುತ್ತಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತಾಲೂಕು ಮಟ್ಟದಲ್ಲಿಯೂ ಪರೀಕ್ಷಾ ಕೇಂದ್ರಗಳನ್ನು ಹೊಂದಿದ್ದು, ನೀಟ್‌ನಲ್ಲೂ ಅದೇ ರೀತಿಯ ವ್ಯವಸ್ಥೆಯಿರಬೇಕೆಂದು ಅಧಿಕಾರಿ ತಿಳಿಸಿದ್ದಾರೆ. ಪ್ರತಿವರ್ಷವೂ 50 ಸಾವಿರ ವಿದ್ಯಾರ್ಥಿಗಳು ಸಿಇಟಿ ವೈದ್ಯಕೀಯ ಪರೀಕ್ಷೆಗೆ ಹಾಜರಾಗುತ್ತಿದ್ದರು. ಇದೀಗ ಕೇವಲ ನಾಲ್ಕು ನಗರಗಳಲ್ಲಿ ನೀಟ್ ಪರೀಕ್ಷೆಯನ್ನು ನಡೆಸುವ ಸಿಬಿಎಸ್‌ಇನ ನಿರ್ಧಾರವು ಬಹುತೇಕ ವಿದ್ಯಾರ್ಥಿಗಳಿಗೆ ಸಮಸ್ಯೆಗಳನ್ನು ತಂದೊಡ್ಡಲಿದೆಯೆಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News