×
Ad

ಕ್ರಿಕೆಟ್ ಬೆಟ್ಟಿಂಗ್ ದಂಧೆ : ಸಿ.ಟಿ.ರವಿ ಪರಮಾಪ್ತ ಕಾಯಿ ರವಿ ಸಹಿತ 6 ಮಂದಿ ಬಂಧನ

Update: 2017-02-05 18:10 IST

ಚಿಕ್ಕಮಗಳೂರು, ಫೆ.5: ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ 8 ಮಂದಿ ಆರೋಪಿಗಳಲ್ಲಿ ಶಾಸಕ ಸಿ.ಟಿ.ರವಿಯ ಪರಮಾಪ್ತ ಎನ್ನಲಾದ ವ್ಯಕ್ತಿಯೋರ್ವನ ಸಹಿತ ಆರು ಮಂದಿ ಆರೋಪಿಗಳನ್ನು ಚಿಕ್ಕಮಗಳೂರು ಡಿಸಿಐಬಿ ಪೊಲೀಸರು ಬಂಧಿಸಿದ್ದು, ಇಬ್ಬರು ಪರಾರಿಯಾಗಿದ್ದಾರೆ.

ಆನ್‌ಲೈನ್ ಮೂಲಕ ಕ್ರಿಕೆಟ್ ದಂಧೆ ನಡೆಸುತ್ತಿದ್ದ ಆರೋಪಿ ಚಿಕ್ಕಮಗಳೂರು ನಗರಸಭಾ ಮಾಜಿ ಉಪಾಧ್ಯಕ್ಷ ರವಿಕುಮಾರ್ ಅಲಿಯಾಸ್ ಕಾಯಿ ರವಿ ಸೇರಿದಂತೆ ಅಭಿಲಾಷ್, ಪ್ರಶಾಂತ್, ವೆಂಕಟೇಶ್, ಅಫ್ಝಲ್ ಹಾಗೂ ಮೋಹನ್‌ನನ್ನು ಪೊಲೀಸರು ವಶಕ್ಕೆ ಪಡೆಯುವ ಮೂಲಕ ಆರೋಪಿಗಳಿಂದ ಬ್ಯಾಂಕ್‌ನ ಚೆಕ್‌ಬುಕ್, ಮೊಬೈಲ್, ಲ್ಯಾಪ್ ಟಾಪ್ ವಶಕ್ಕೆ ಪಡೆದಿದ್ದಾರೆ.

ಈ ಜಾಲದ ಪ್ರಮುಖ ಕಿಂಗ್ಪಿನ್ ಪ್ರಮುಖ ಆರೋಪಿಯಾಗಿರುವ ನಗರಸಭಾ ಮಾಜಿ ಉಪಾಧ್ಯಕ್ಷ ಕಾಯಿ ರವಿ ಎಂಬಾತ ಶಾಸಕ ಸಿಟಿ ರವಿ ಬಲಗೈ ಬಂಟ ಎನ್ನುವುದು ವಿಶೇಷ.

ಐಪಿಎಲ್ ಕ್ರಿಕೆಟ್ ಟೂರ್ನಿ ಆರಂಭವಾದರೆ ಸಾಕು. ಎಲ್ಲೆಡೆಯೂ ಕ್ರಿಕೆಟ್ ಬೆಟ್ಟಿಂಗ್ ದಂಧೆ ವ್ಯಾಪಕವಾಗಿ ತಲೆ ಎತ್ತುತ್ತದೆ. ಚಿಕ್ಕಮಗಳೂರಿನಲ್ಲಿ ಬೆಟ್ಟಿಂಗ್ ದಂಧೆ ಅವಿರತವಾಗಿ ನಡೆಯಲು ಈ ಆರೋಪಿಗಳು ಮೂಲ ಕಾರಣರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

 ಹೇಳಿಕೊಳ್ಳಲು ಬಿಜೆಪಿಯಿಂದ ಗೆದ್ದಿದ್ದ ಕಾಯಿ ರವಿ ನಗರಸಭಾಮಾಜಿ ಉಪಾಧ್ಯಕ್ಷನಾಗಿದ್ದಾನೆ. ಅಷ್ಟೆ ಅಲ್ಲಾ ಕ್ರಿಕೆಟ್ ಬೆಟ್ಟಿಂಗ್ ದಂಧೆ ವಿರುದ್ಧ ಕಂಡ, ಕಂಡಲ್ಲಿ ಭಾಷಣ ಬಿಗಿಯುವ ಶಾಸಕ ಸಿ.ಟಿ.ರವಿಯವರ ಬಲಗೈ ಬಂಟನಾಗಿದ್ದಾನೆ.

ಈತನ ವ್ಯವಹಾರ ಮುಂಬೈ, ದಿಲ್ಲಿಯವರೆಗೂ ಬೆಟ್ಟಿಂಗ್ ದಂಧೆ ವ್ಯಾಪಿಸಿದೆ. ಇಂತಹ ಅಡ್ಡೆ ಮೇಲೆ ದಾಳಿ ಮಾಡಿರುವ ಚಿಕ್ಕಮಗಳೂರು ಡಿಸಿಐಬಿ ಪೊಲೀಸರು ಬೆಟ್ಟಿಂಗ್‌ಗೆ ಬಳಸುತ್ತಿದ್ದ ಟಿವಿ, ಲ್ಯಾಪ್‌ಟಾಪ್, ಮೊಬೈಲ್ ಪೋನ್ ಹಾಗೂ ಲಕ್ಷಾಂತರ ರೂ.ಗಳ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

ಚಿಕ್ಕಮಗಳೂರು ಮನೆಯೊಂದರ ಮೇಲೆ ದಾಳಿ ನಡೆಸಿರುವ ಡಿಸಿಐಬಿ ಪೊಲೀಸರು ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

 ವಿಶೇಷಯಂದರೆ ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಪ್ರಕರಣದಲ್ಲಿ ಇದೇ ಕಾಯಿ ರವಿ ಹೆಸರೂ ಕೂಡ ಕೇಳಿ ಬಂದಿತ್ತು. ಸಿಐಡಿ ಅಧಿಕಾರಿಗಳು ತನಿಖೆ ಕೂಡ ನಡೆಸಿದ್ದರು.

 ಬೆಟ್ಟಿಂಗ್ ದಂಧೆಯ ವಿರುದ್ಧ ಅರವಿಂದ್ ಕೂದುವಳ್ಳಿ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳ ಮೇಲೆ ಎಫ್‌ಐಆರ್ ದಾಖಲಾಗಿದೆ.

ಬೆಟ್ಟಿಂಗ್ ಕಟ್ಟುತ್ತಿದ್ದವರಲ್ಲಿ ಬಹುತೇಕರು ರಾಜಕಾರಣಿಗಳು ಎನ್ನುವುದನ್ನು ತನಿಖೆ ವೇಳೆ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುವುದು. ಬೆಟ್ಟಿಂಗ್ ದಂಧೆ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಯಾರೇ ಬೆಟ್ಟಿಂಗ್‌ನಲ್ಲಿ ತೊಡಗಿದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಬ್ರೇಕ್ ಹಾಕಲು ಇಲಾಖೆ ಬದ್ಧವಾಗಿದೆ.

(ಕೆ. ಅಣ್ಣಾಮಲೈ, ಎಸ್ಪಿ, ಚಿಕ್ಕಮಗಳೂರು)

Writer - ಅಝೀಝ್ ಕಿರುಗುಂದ

contributor

Editor - ಅಝೀಝ್ ಕಿರುಗುಂದ

contributor

Similar News