×
Ad

ಪ್ರಚೋದನಕಾರಿ ಸಂದೇಶ ಹರಿಬಿಟ್ಟರೆ ಕಠಿಣ ಕ್ರಮ: ಎಸ್ಪಿ ಅಭಿನವ್ ಖರೆ

Update: 2017-02-05 21:38 IST

ಶಿವಮೊಗ್ಗ, ಫೆ. 5: ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಬುರ್ಕಾ ಧರಿಸುವುದಕ್ಕೆ ನಿಷೇಧ ಹೇರಬೇಕು ಎಂದು ಎವಿಬಿಪಿ ಕಾರ್ಯಕರ್ತರು ಕೇಸರಿ ಶಾಲು ಧರಿಸಿ ಪ್ರತಿಭಟಿಸಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಮುಸ್ಲಿಮ್ ವಿದ್ಯಾರ್ಥಿನಿಯರು ಪ್ರಾಂಶುಪಾಲರಿಗೆ ಮನವಿ ಅರ್ಪಿಸಿ, ಬುರ್ಕಾ ಧರಿಸುವುದು ನಮ್ಮ ಸಂಸ್ಕೃತಿ. ನಿಷೇಧ ಹೇರಬಾರದು ಎಂದು ಆಗ್ರಹಿಸಿದ್ದರು.

ಈ ಘಟನೆಯು ಕಾಲೇಜು ಆವರಣದಲ್ಲಿ ಎರಡು ದಿನಗಳ ಕಾಲ ಉದ್ವಿಗ್ನ ಸ್ಥಿತಿ ಸೃಷ್ಟಿಸಿತ್ತು. ಈ ಹಿನ್ನಲೆಯಲ್ಲಿ ಕ್ಯಾಂಪಸ್ ಆವರಣದಲ್ಲಿ ಎರಡು ದಿನಗಳ ಕಾಲ ಬಿಗಿ ಪೊಲೀಸ್ ಪಹರೆಯ ವ್ಯವಸ್ಥೆ ಕೂಡ ಮಾಡಲಾಗಿತ್ತು. ಪ್ರಸ್ತುತ ವಿದ್ಯಾರ್ಥಿಗಳ ಪ್ರತಿಭಟನೆಯ ಕಾವು ಬಹುತೇಕ ತಣ್ಣಗಾಗಿದೆ. ಸಮವಸ್ತ್ರ ಕಡ್ಡಾಯವಲ್ಲ. ಬೇಕಿದ್ದರೆ ಸಮವಸ್ತ್ರ ಧರಿಸಿ ಕಾಲೇಜಿಗೆ ವಿದ್ಯಾರ್ಥಿಗಳು ಬರಬಹುದು. ಅವರ ಇಚ್ಛೆಗೆ ಬಿಟ್ಟಿದ್ದಾಗಿದೆ ಎಂದು ಪ್ರಾಂಶುಪಾಲರು ಸ್ಪಷ್ಟಪಡಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದರು.

ಆದರೆ ಬುರ್ಖಾ ಪರ-ವಿರುದ್ಧವಾಗಿ ಸಾಮಾಜಿಕ ಜಾಲತಾಣ ವ್ಯಾಟ್ಸಾಪ್‌ನಲ್ಲಿ ಶನಿವಾರ ರಾತ್ರಿಯಿಂದ ಕೋಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡುವ ಎರಡು ವೀಡಿಯೊಗಳು ಹರಿದಾಡಲಾರಂಭಿಸಿದ್ದು, ತಣ್ಣಗಾಗಿದ್ದ ವಿವಾದ ಮತ್ತೆ ಭುಗಿಲೇಳುವಂತೆ ಮಾಡಿದೆ.

ಈ ವೀಡಿಯೊಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿರುವುದು ಹಾಗೂ ವೈರಲ್ ಆಗುತ್ತಿರುವುದನ್ನು ಮನಗಂಡ ಜಿಲ್ಲಾ ಪೊಲೀಸ್ ಇಲಾಖೆಯು, ಕೋಮು ಸೌಹಾರ್ದತೆ ಹಾಗೂ ಸಮಾಜದ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ತರುವ ಸಂದೇಶ-ವೀಡಿಯೊ ರವಾನಿಸುವವರ ವಿರುದ್ಧ ಕಠಿಣ ಕ್ರಮ ಜರಗಿಸುವುದಾಗಿ ಎಚ್ಚರಿಕೆ ನೀಡಿದೆ.

ವ್ಯಾಟ್ಸಾಪ್ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಪ್ರಚೋದನಕಾರಿ ಸಂದೇಶ, ವೀಡಿಯೊ ಹರಿಬಿಟ್ಟರೆ ಕಠಿಣ ಕ್ರಮ ಜರಗಿಸುವುದಾಗಿ’ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ರವಿವಾರ ನಗರದಲ್ಲಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಶಾಂತಿ ಸೃಷ್ಟಿಸುವ ವ್ಯಾಟ್ಸಾಪ್ ಸಂದೇಶ ಹಾಕಿದರೆ ಐಪಿಸಿ ದಂಡಸಹಿತೆ ಅನ್ವಯ ಕ್ರಮ ಜರಗಿಸಲಾಗುವುದು. ವ್ಯಾಟ್ಸಾಪ್ ಗ್ರೂಪ್‌ಗಳಲ್ಲಿ ಸಂದೇಶ- ವೀಡಿಯೊ ಹಾಕಿದರೆ ಅಡ್ಮಿನ್ ವಿರುದ್ಧ ಕ್ರಮ ಜರಗಿಸಲಾಗುವುದು. ದುಬೈನಿಂದ ವ್ಯಾಟ್ಸಾಪ್ ವೀಡಿಯೊ ಮೂಲಕ ಧಮ್ಕಿ ಹಾಕಿದ ಯುವಕರಿಗೆ ಲುಕೌಟ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಈಗಾಗಲೇ ಹರಿದಾಡುತ್ತಿರುವ ಎರಡು ವ್ಯಾಟ್ಸಾಪ್ ವೀಡಿಯೊಗಳಿಗೆ ಸಂಬಂಧಿಸಿದಂತೆ ಇಲಾಖೆಯು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಎಸ್ಪಿ ಇೇ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.

ಕಿಡಿಗೇಡಿಗಳ ವೀಡಿಯೊ ತಂದಿಟ್ಟ ತಲೆನೋವು: ದೂರು ದಾಖಲು

ಕಿಡಿಗೇಡಿಗಳು ರವಾನಿಸಿದ ಎರಡು ವ್ಯಾಟ್ಸಾಪ್ ವೀಡಿಯೋಗಳು ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡುವಂತಿದ್ದು, ಇದು ಪೊಲೀಸ್ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸುವಂತೆ ಮಾಡಿದೆ. ದುಬೈನಲ್ಲಿರುವ ಶಿವಮೊಗ್ಗ ಟಿಪ್ಪುನಗರ ಮೂಲದ ಇಬ್ಬರು ಯುವಕರು ಬುರ್ಖಾ ಪರವಾಗಿ ಪ್ರಚೋದನಕಾರಿಯಾಗಿ ಮಾತನಾಡುವ ವೀಡಿಯೊವನ್ನು ವ್ಯಾಟ್ಸಾಪ್ ಮೂಲಕ ಹರಿಬಿಟ್ಟಿದ್ದಾರೆ. ಈ ವೀಡಿಯೊಗೆ ಪ್ರತಿಯಾಗಿ ಶಿವಮೊಗ್ಗ ನಗರದ ಗಾಡಿಕೊಪ್ಪ ಬಡಾವಣೆಯ ಯುವಕನೋರ್ವ ಬುರ್ಖಾ ವಿರುದ್ಧ್ದವಾಗಿ ಮಾತನಾಡುವ, ಪ್ರಚೋದನಕಾರಿ, ಆಕ್ಷೇಪಾರ್ಹ ಮಾತುಗಳನ್ನೊಳಗೊಂಡ ವೀಡಿಯೊ ಹರಿಬಿಟ್ಟಿದ್ದಾನೆ. ಈ ಎರಡು ವೀಡಿಯೋಗಳು ಸಾಮಾಜಿಕ ಸಂಪರ್ಕ ಜಾಲ ತಾಣಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು, ಈ ವೀಡಿಯೊಗಳು ಹರಿದಾಡುವುದನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಹರಸಾಹಸ ಪಡುವಂತಾಗಿದೆ.

ಶಿವಮೊಗ್ಗ ನಗರದಲ್ಲಿ ಪೊಲೀಸ್ ಪಥಸಂಚಲನ

ಪ್ರಚೋದನಕಾರಿ ವೀಡಿಯೊಗಳು ಸಾಮಾಜಿಕ ಸಂಪರ್ಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ ಜಿಲ್ಲಾ ಪೊಲೀಸ್ ಇಲಾಖೆಯು ಮುನ್ನೆಚ್ಚರಿಕೆ ಕ್ರಮವಾಗಿ ಶಿವಮೊಗ್ಗ ನಗರದಲ್ಲಿ ರವಿವಾರದಿಂದ ಬಿಗಿ ಪೊಲೀಸ್ ಪಹರೆಯ ವ್ಯವಸ್ಥೆ ಮಾಡಿದೆ. ರವಿವಾರ ಸಂಜೆ ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಪಥ ಸಂಚಲನ ನಡೆಸಿದರು. ನಾಗರಿಕರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಿದ್ದಾರೆ. ಮತ್ತೊಂದೆಡೆ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಪಹರೆ ಹೆಚ್ಚಿಸಲಾಗಿದ್ದು, ಗಸ್ತು ವ್ಯವಸ್ಥೆ ಬಿಗಿಗೊಳಿಸಲಾಗಿದೆ.

ತಲೆಮರೆಸಿಕೊಂಡ ಆರೋಪಿ: ಲುಕ್‌ಔಟ್ ನೋಟೀಸ್

ಪ್ರಚೋದನಕಾರಿ ವೀಡಿಯೊಗಳ ಕುರಿತಂತೆ ಜಿಲ್ಲಾ ಪೊಲೀಸ್ ಇಲಾಖೆಯು ಆರೋಪಿಗಳ ವಿರುದ್ಧ ಸ್ವಯಂಪ್ರೇರಿತವಾಗಿ ಎರಡು ಪ್ರತ್ಯೇಕ ದೂರುಗಳನ್ನು ದಾಖಲಿಸಿಕೊಂಡಿದೆ. ದುಬೈನಲ್ಲಿ ಕುಳಿತು ವೀಡಿಯೊ ಹರಿಬಿಟ್ಟ ಇಬ್ಬರು ಆರೋಪಿಗಳ ಬಂಧನಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಲುಕ್‌ಔಟ್ ನೋಟೀಸ್ ಜಾರಿಗೊಳಿಸಿದೆ. ಮತ್ತೊಂದೆಡೆ ಶಿವಮೊಗ್ಗದ ಗಾಡಿಕೊಪ್ಪದ ಯುವಕ ವೀಡಿಯೊ ಹರಿಬಿಟ್ಟು ಅದು ವಿವಾದಕ್ಕೆ ಎಡೆ ಮಾಡಿಕೊಡುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದಾನೆ. ಈತನ ಬಂಧನಕ್ಕೆ ಪೊಲೀಸರು ವ್ಯಾಪಕ ಜಾಲ ಬೀಸಿದ್ದು, ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇಷ್ಟೆಲ್ಲ ರಾದ್ದಾಂತ ಸೃಷ್ಟಿಗೆ ಕಾರಣವಾಗಿದ್ದು ಎಬಿವಿಪಿ?

ಸಹ್ಯಾದ್ರಿ ಕಾಲೇಜಿನಲ್ಲಿ ಗುರುವಾರ ಎಬಿವಿಪಿ ಸಂಘಟನೆ ಬೆಂಬಲಿತ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಕಾಲೇಜ್‌ನಲ್ಲಿ ಬುರ್ಖಾ ಧರಿಸುವುದನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಕೇಸರಿ ಶಾಲು ಧರಿಸಿ ಪ್ರತಿಭಟನೆ ನಡೆಸಿದ್ದೆ ಇಷ್ಟೆಲ್ಲ ವಿಾದದ ಮೂಲ ಕೇಂದ್ರ ಬಿಂಧುವಾಗಿದೆ.

ಇದಕ್ಕೆ ಪ್ರತಿಯಾಗಿ ಆ ದಿನವೇ ಮುಸ್ಲಿಮ್ ವಿದ್ಯಾರ್ಥಿನಿಯರು ಪ್ರಾಂಶುಪಾಲರಿಗೆ ಮನವಿ ಅರ್ಪಿಸಿ, ಬುರ್ಖಾ ಧರಿಸುವುದು ನಮ್ಮ ಸಂಸ್ಕೃತಿಯಾಗಿದೆ. ಕಾಲೇಜಿಗೆ ಬುರ್ಖಾ ಧರಿಸಿ ಆಗಮಿಸುವುದಕ್ಕೆ ಅವಕಾಶ ನೀಡಬೇಕು. ಯಾವುದೇ ಕಾರಣಕ್ಕೂ ನಿಷೇಧ ಹೇರಬಾರದು ಎಂದು ಆಗ್ರಹಿಸಿದ್ದರು. ಈ ನಡುವೆ ಕುವೆಂಪು ವಿಶ್ವ ವಿದ್ಯಾನಿಲಯವು ಸಹ್ಯಾದ್ರಿ ಕಾಲೇಜಿನಲ್ಲಿ ಸಮವಸ್ತ್ರ ಧರಿಸುವುದನ್ನು ಕಡ್ಡಾಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News