ರೈತನ ಕುಟುಂಬಕ್ಕೆ ಸರಕಾರದಿಂದ ಪರಿಹಾರ
ಚಿಕ್ಕಮಗಳೂರು, ಫೆ.5: ಅಡಿಕೆ ತೋಟದ ಹಳದಿ ಎಲೆ ರೋಗ ಮತ್ತು ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಕೊಪ್ಪ ತಾಲೂಕು ಕಲ್ಲುಗುಡ್ಡೆ ಗ್ರಾಮದ ದಾರಿಮನೆ ತಿಮ್ಮಪ್ಪಯ್ಯನ ಕುಟುಂಬಕ್ಕೆ ಸರಕಾರ ಪರಿಹಾರಧನವನ್ನು ಬಿಡುಗಡೆ ಮಾಡಿದೆ ಎಂದು ಕೆಪಿಸಿಸಿ ಕಿಸಾನ್ ಖೇಟ್ ಮಜ್ದೂರ್ ಸಭಾದ ರಾಜ್ಯಾಧ್ಯಕ್ಷ ಸಚಿನ್ ಮೀಗಾ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ಕಂದಾಯ ಮತ್ತು ಕೃಷಿ ಅಧಿಕಾರಿಗಳನ್ನು, ಜಿಲ್ಲಾಧಿಕಾರಿಯು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳದಿದ್ದರೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಅಡಿಕೆ ಎಲೆ ಹಳದಿ ರೋಗ, ಅನಾವೃಷ್ಟಿ, ಅತಿವೃಷ್ಟಿ, ಬೆಳೆನಾಶ ಮುಂತಾದ ಗಂಭೀರ ಸಮಸ್ಯೆಗಳಿಂದ ರೈತರು ತೊಂದರೆಗೆ ಒಳಗಾದಾಗ ಸಂಬಂಧಪಟ್ಟ ಇಲಾಖಾಧಿಕಾರಿ ಸ್ಥಳ ಪರಿಶೀಲನೆಯಿಂದ ವಾಸ್ತವಾಂಶಗಳನ್ನು ಕ್ರೋಡೀಕರಿಸಿ ಸರಕಾರಕ್ಕೆ ವರದಿ ಸಲ್ಲಿಸಿ ರೈತರಿಗೆ ಸೂಕ್ತ ಪರಿಹಾರ ಕೊಡಿಸುವಂತೆ ಆಗ್ರಹಿಸುವುದಾಗಿ ತಿಳಿಸಿದ್ದಾರೆ.
ಗೋಷ್ಠಿಯಲ್ಲಿ ಕಿಸಾನ್ ಸೆಲ್‌ನ ರಾಜ್ಯ ಸಂಚಾಲಕ ತುಳಸೀದಾಸ್, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಪಿ.ಕುಮಾರ್, ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷ ರಾಘವೇಂದ್ರ, ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ನವೀನ್‌ಕುಮಾರ್, ಕಿಸಾನ್ ಸೆಲ್‌ನ ಕೊಪ್ಪ ತಾಲೂಕು ಘಟಕಾಧ್ಯಕ್ಷ ಅಶೋಕ್ ನಾರ್ವೆ ಉಪಸ್ಥಿತರಿದ್ದರು.