ಜಿಲ್ಲೆಯ ಕಾಫಿ ತೋಟಗಳಲ್ಲಿ ಬಾಲ ಕಾರ್ಮಿಕರು !

Update: 2017-02-06 16:24 GMT

ಚಿಕ್ಕಮಗಳೂರು, ಫೆ. 6: ಜಿಲ್ಲೆಯಲ್ಲಿ ಕಾಫಿ ಕೊಯ್ಲು ಆರಂಭವಾಗುತ್ತಿದ್ದಂತೆ ಬಾಲ ಕಾರ್ಮಿಕರು ತೋಟಗಳಲ್ಲಿ ಕಾಣಿಸಿಕೊಳ್ಳುವುದು ಸರ್ವೇಸಾಮಾನ್ಯ ಸಂಗತಿ ಎನ್ನುವಂತಾಗಿದೆ. ಒಂದು ಕಡೆೆ ಕಾಫಿ ತೋಟಗಳ ಮಾಲಕರು ಸಾವಿರಾರು ಕೋಟಿಯ ಒಡೆಯರಾಗಿ ಮೆರೆೆಯುತ್ತಿದ್ದರೆ, ಇನ್ನೊಂದೆಡೆ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿಯಲ್ಲಿರುವ ಜನರು ತಮ್ಮ ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ದುಡಿಮೆಗೆ ಇಳಿಸಿ ಅಷ್ಟಿಷ್ಟು ಸಂಪಾದಿಸುವತ್ತ ಹೆಜ್ಜೆ ಇಡುತ್ತಿದ್ದಾರೆ. ಒಂದು ಕಡೆ ಕಡು ಬಡತನದಿಂದ ಅದೆಷ್ಟೋ ಮಕ್ಕಳು ಶಿಕ್ಷಣ ವಂಚಿತರಾಗಿದ್ದರೆ, ಇನ್ನು ಕೆಲವರು ಶಿಕ್ಷಣದ ನಡುವೆ ಬಾಲ ಕಾರ್ಮಿಕರಾಗಿ ಬೆಳೆಯುತ್ತಿರುವುದು ದಂಗು ಬಡಿಸುತ್ತಿದೆ. ಚಿಕ್ಕಮಗಳೂರು ಜಿಲ್ಲೆಗೆ ದೇಶದ ಹಾಗೂ ರಾಜ್ಯದ ನಾನಾ ಭಾಗಗಳಿಂದ ಕಾರ್ಮಿಕರು ಕೂಲಿ ಅರಸಿಕೊಂಡು ಬರುತ್ತಿದ್ದಾರೆ. ಹೀಗೆ ಕೆಲಸ ಅರಸಿಕೊಂಡು ಗುಳೆ ಬಂದಿರುವ ಕಾರ್ಮಿಕ ಕುಟುಂಬವೊಂದರ 13 ವರ್ಷದ ಹುಡುಗಿ ಒಬ್ಬಳು ಅನುಮಾನಾಸ್ಪದವಾಗಿ ಸಾವನಪ್ಪಿರುವುದು ಆತಂಕದಾಯಕ ಅಂಶವಾಗಿದೆ.

ಲ್ಲಿನ ಕಾಫಿ ಎಸ್ಟೇಟ್‌ಗಳ ನೂರಾರು ಮಾಲಕರು ಸಾವಿರಾರು ಕೋಟಿ ಒಡೆಯರಾಗಿದ್ದಾರೆ. ಹೀಗಿರುವಾಗ ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ಕಾರ್ಮಿಕ ವರ್ಗದ ಜನರದ್ದಾಗಿರುವುದು ದುರಂತವೇ ಸರಿ. ಜನರು ಕಾರ್ಮಿಕ ವೃತ್ತಿಯನ್ನು ಅನುಸರಿಸಿಕೊಂಡು ಪ್ರತಿನಿತ್ಯ ಕಾಫಿ ಎಸ್ಟೇಟ್‌ಗಳಲ್ಲಿ ಅವಿರತ ದುಡಿಮೆಯಲ್ಲಿ ತೊಡಗಿದ್ದಾರೆ. ಆಶ್ಚರ್ಯ ಎಂದರೆ ಶಾಲೆಗೆ ಹೋಗಬೇಕಾದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಕಾಫಿ ಎಸ್ಟೇಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಕೂಲಿ ಅರಸಿಕೊಂಡು ಬಂದಿರುವ ಕಾರ್ಮಿಕರ ಮಕ್ಕಳು ತಮ್ಮ ಪೋಷಕರ ಜತೆಗೆ ಕಾಫಿ ಕೀಳುತ್ತ ಅಷ್ಟಿಷ್ಟು ಸಂಪಾದಿಸುವ ಆಸೆಯಿಂದ ದುಡಿಮೆಯಲ್ಲಿ ತೊಡಗಿದ್ದಾರೆ.

ಇನ್ನು ಬಾಲಕಾರ್ಮಿಕರಿಂದ ಬೆಳಗ್ಗೆಯಿಂದ ಸಂಜೆಯರೆಗೂ ಕೆಲಸ ಮಾಡಿಸಿಕೊಳ್ಳುವ ಕಾಫಿ ಎಸ್ಟೇಟ್ ಮಾಲಕರು ಕೇವಲ 100 ರೂ. ನ್ನಷ್ಟೇ ನೀಡುತ್ತಾರೆ. ಕೆಲವು ಎಸ್ಟೇಟ್ ಮಾಲಕರು ಶಾಲಾ ಮಕ್ಕಳನ್ನು ಕೆಲಸಕ್ಕೆ ಕರೆದೊಯ್ಯುತ್ತಿರುವ ಮಾತುಗಳಿವೆೆ. ಜಿಲ್ಲೆಯಲ್ಲಿ ಅಪಾರ ಮಕ್ಕಳು ಶಾಲೆ ಬಿಟ್ಟು ಕೂಲಿಗೆ ತೆರಳುತ್ತಿದ್ದರೂ ಬಾಲಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾಡಳಿತ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಇಂತಹ ಮಕ್ಕಳನ್ನು ಗುರುತಿಸಿ ಬಾಲ ಕಾರ್ಮಿಕ ಇಲಾಖೆಯವರು ಶಿಕ್ಷಣ ಕೊಡಿಸುವ ಕೆಲಸ ಮಾಡುತ್ತಿಲ್ಲ. ಇವರೆಲ್ಲರ ನಿರ್ಲಕ್ಷದಿಂದ ಆಡಿ ಬೆಳೆಯಬೇಕಿದ್ದ ಬಾಲಕಿ ಸಾವನಪ್ಪಿರುವುದು ದುರಂತವೇ ಸರಿ.

ಭವಿಷ್ಯದಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡುವ ಯೋಜನೆ ಮೂಲಕ ಬಾಲ ಕಾರ್ಮಿಕರನ್ನಾಗಿ ಮಾಡುವವರಿಗೆ ಸರಿಯಾದ ಶಿಕ್ಷೆ ಆಗಬೇಕಿದೆ. ಸರಿಯಾದ ತನಿಖೆ ನಡೆಸಿದರೆ ಮಾತ್ರ ಬಾಲಕಿ ಸಾವಿಗೆ ನಿಜವಾದ ಕಾರಣಗಳು ಸತ್ಯಾಸತ್ಯತೆಗಳು ಹೊರ ಬರಲಿದೆ ಎನ್ನುವುದು ಸ್ಥಳೀಯರ ಆಶಯ.


ಕಾಫಿಗೆ ಸಿಂಪಡಿಸಲು ಸಂಗ್ರಹಿಸಿಟ್ಟಿದ್ದ ಔಷಧ ಸೇವನೆ

ಕಳಸ ವ್ಯಾಪ್ತಿಯ ಕಾಫಿ ಎಸ್ಟೇಟೊಂದರಲ್ಲಿ ಬಾಲ ಕಾರ್ಮಿಕಳಾಗಿ ದುಡಿಯುತ್ತಿದ್ದ ಬಾಲಕಿಯೋರ್ವಳು ಮೃತಪಟ್ಟಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.

ಬಾಲಕಿಯನ್ನು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ರಮೇಶ್ ಎಂಬವರ ಪುತ್ರಿ ವನಜಾಕ್ಷಿ(13) ಎಂದು ಗುರುತಿಸಲಾಗಿದೆ. ಈಕೆಯ ಪೋಷಕರು ಕಳಸ ವ್ಯಾಪ್ತಿಗೆ ಸೇರಿದ ಕಾಫಿ ಎಸ್ಟೇಟ್ ಒಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ರಜೆ ಇದ್ದಿದ್ದರಿಂದ ಕಾರ್ಮಿಕರು ಬೇರೆ ಸರ್ನಣ ಹಿಡುವಳಿದಾರ ವೆಂಕಟೇಶ್ ಎಂಬವರಿಗೆ ಸೇರಿದ ತೋಟದಲ್ಲಿ ಕೆಲಸಕ್ಕೆ ತೆರಳಿದ್ದರು. ಈ ಸಮಯದಲ್ಲಿ ಕಾಫಿಗೆ ಸಿಂಪಡಿಸಲು ಸಂಗ್ರಹಿಸಿಟ್ಟಿದ್ದ ಔಷಧ ಸೇವನೆಯಿಂದ ವನಜಾಕ್ಷಿ ತೀವ್ರ ಅಸ್ವಸ್ಥಗೊಂಡಿದ್ದಳು.

ತಕ್ಷಣ ಆಕೆಯನ್ನು ಕಳಸ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸೆ ಬಳಿಕ ಮಂಗಳೂರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ. ಬಾಲಕಿಯ ಮೂಗಿನಲ್ಲಿ ರಕ್ತ ಸುರಿಯುತ್ತಿದ್ದು, ಬಾಯಿಂದ ನೊರೆ ಬರುತ್ತಿರುವುದು ಅನುಮಾನಕ್ಕೀಡು ಮಾಡಿಕೊಟ್ಟಿದೆ. ಕಳಸದ ಪೊಲೀಸ್ ಠಾಣೆಯಲ್ಲಿ ಬಾಲಕಿ ಸಾವು ಪ್ರಕರಣ ದಾಖಲಿಸಲಾಗಿದೆಯಾದರೂ ತೋಟದ ಮಾಲಕರ ಮೇಲೆ ಅಥವಾ ಬೇರೆ ಯಾರ ಮೇಲೂ ದೂರು ದಾಖಲಿಸಿಲ್ಲ.

Writer - ಅಝೀಝ್ ಕಿರುಗುಂದ

contributor

Editor - ಅಝೀಝ್ ಕಿರುಗುಂದ

contributor

Similar News