ಸಮವಸ್ತ್ರ ವಿವಾದ : ಶಿವಮೊಗ್ಗದ ಇತರೆ ಕಾಲೇಜುಗಳಿಗೂ ಕಾಲಿಟ್ಟ 'ಕೇಸರಿ ಶಾಲು' !
ಶಿವಮೊಗ್ಗ, ಫೆ. 6: ಸಮವಸ್ತ್ರ ಧರಿಸುವಿಕೆಗೆ ಸಂಬಂಧಿಸಿದಂತೆ ಇತ್ತೀಚೆಗೆ ನಗರದ ಸಹ್ಯಾದ್ರಿ ಕಾಲೇಜ್‌ನಲ್ಲಿ ನಡೆದ ಪ್ರತಿಭಟನೆಯು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಕಾಲೇಜ್‌ನಲ್ಲಿ ಬುರ್ಖಾ ಧರಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಎಬಿವಿಪಿ ಸಂಘಟನೆ ವಿದ್ಯಾರ್ಥಿಗಳು, ಕೇಸರಿ ಶಾಲು ಧರಿಸಿ ಪ್ರತಿಭಟಿಸಿದ್ದರು. ಇದಕ್ಕೆ ಪ್ರತಿಯಾಗಿ ಮುಸ್ಲಿಂ ವಿದ್ಯಾರ್ಥಿಗಳು ಬುರ್ಖಾ ಬೆಂಬಲಿಸಿ ಪ್ರತಿ ಪ್ರತಿಭಟಿಸಿದ್ದರು. ಸದ್ಯಕ್ಕೆ ಆ ಕಾಲೇಜ್‌ನಲ್ಲಿ ಈ ವಿವಾದ ತಣ್ಣಗಾಗಿದೆ. ಈ ನಡುವೆ ’ಕೇಸರಿ ಶಾಲು’ ಇತರೆ ಕಾಲೇಜುಗಳಿಗೂ ಕಾಲಿಡಲಾರಂಭಿಸಿದೆ! ಸೋಮವಾರ ಶಿವಮೊಗ್ಗ ನಗರದ ಎರಡು ಕಾಲೇಜುಗಳಲ್ಲಿ ಎಬಿವಿಪಿ ಸಂಘಟನೆ ಬೆಂಬಲಿತ ಕೆಲ ವಿದ್ಯಾರ್ಥಿಗಳು ’ಕೇಸರಿ ಶಾಲು’ ಧರಿಸಿ ಕಾಲೇಜ್‌ಗೆ ಆಗಮಿಸಿದ್ದರು. ಸಮವಸ್ತ್ರ ಕಡ್ಡಾಯಗೊಳಿಸಬೇಕು, ಕಾಲೇಜ್‌ನಲ್ಲಿ ಬುರ್ಖಾ ಧರಿಸುವುದಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದ ಘಟನೆ ವರದಿಯಾಗಿದೆ.
ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ (ಎಟಿಎನ್‌ಸಿಸಿ) ಹಾಗೂ ಬಾಪೂಜಿ ನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಈ ಘಟನೆಗಳು ನಡೆದಿವೆ. ಕೆಲ ವಿದ್ಯಾರ್ಥಿಗಳು ’ಕೇಸರಿ ಶಾಲು’ ಧರಿಸಿ ಕಾಲೇಜ್‌ಗೆ ಆಗಮಿಸಿದ್ದ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಕಾಲೇಜ್‌ಗಳಿಗೆ ಭೇಟಿಯಿತ್ತು ಪರಿಶೀಲನೆ ನಡೆಸಿದರು. ಎರಡು ಕಾಲೇಜುಗಳಲ್ಲಿ ಬಿಗಿ ಪೊಲೀಸ್ ಪಹರೆಯ ವ್ಯವಸ್ಥೆ ಮಾಡಿದರು.
ಮಾತಿನ ಚಕಮಕಿ: ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳು ಹಾಗೂ ಕೆಲ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆಯೂ ನಡೆದಿದೆ ಎಂದು ಹೇಳಲಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎಂದು ಕಾಲೇಜು ಮೂಲಗಳು ಹೇಳಿವೆ.
ಕೇಸರಿ ಶಾಲು - ಬುರ್ಖಾ ವಿವಾದವು ಶಿವಮೊಗ್ಗ ನಗರದಲ್ಲಿ ದಿನದಿಂದ ದಿನಕ್ಕೆ ಕಾವೇರ ತೊಡಗಿದ್ದು ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಕಾನೂನು - ಸುವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತಿದೆ. ಸಹ್ಯಾದ್ರಿ ಕಾಲೇಜ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಕೆಲ ಕಿಡಿಗೇಡಿಗಳು ಬುರ್ಖಾ ಪರ - ವಿರುದ್ದದ ವೀಡಿಯೋಗಳನ್ನು ಸಾಮಾಜಿಕ ಸಂಪರ್ಕ ಜಾಲ ತಾಣಗಳಲ್ಲಿ ಹರಿಬಿಟ್ಟಿದ್ದರು. ಇದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು.
ಈ ಹಿನ್ನೆಲೆಯಲ್ಲಿಯೇ ಪೊಲೀಸ್ ಇಲಾಖೆಯು ನಗರದ ಆಯಕಟ್ಟಿನ ಜಾಗಗಳಲ್ಲಿ ಬಿಗಿ ಪೊಲೀಸ್ ಪಹರೆಯ ವ್ಯವಸ್ಥೆ ಕೂಡ ಮಾಡಿತ್ತು. ಈ ನಡುವೆ ನಗರದ ಇತರೆ ಕಾಲೇಜ್‌ಗಳಲ್ಲಿಯೂ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಆಗಮಿಸುತ್ತಿರುವುದು ಸಂಬಂಧಿಸಿದ ಕಾಲೇಜು ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆಯ ನಿದ್ದೆಗೆಡುವಂತೆ ಮಾಡಿದೆ.
ಆತಂಕ: ಇತ್ತೀಚೆಗೆ ಕ್ಯಾಂಪಸ್‌ಗಳಲ್ಲಿ ಶುರುವಾಗಿರುವ ’ಕೇಸರಿ ಶಾಲು’ ವಿದ್ಯಮಾನವು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಉಂಟು ಮಾಡಿದೆ. ಎಲ್ಲಿ ತಮ್ಮ ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರಲಿದೆಯೋ ಎಂಬ ಆತಂಕ ಪೋಷಕರ ವಲಯದಲ್ಲಿದೆ. ಮತ್ತೊಂದೆಡೆ ವಿದ್ಯಾರ್ಥಿಗಳಲ್ಲಿಯೂ ಗೊಂದಲ ಸೃಷ್ಟಿಯಾಗುವಂತಾಗಿದೆ. ಕ್ಯಾಂಪಸ್‌ಗಳಲ್ಲಿ ಈ ರೀತಿಯ ಬೆಳವಣಿಗೆಗಳಿಗೆ ಆಸ್ಪದ ನೀಡಬಾರದು. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂಬುವುದು ಕೆಲ ಪೋಷಕರ ಮನವಿಯಾಗಿದೆ.
ಕಾಲೇಜ್‌ಗಳಿಗೆ ಭದ್ರತೆ ನೀಡುವ ಸ್ಥಿತಿ...!
ಶಿವಮೊಗ್ಗ ನಗರದಲ್ಲಿ ಕಾಲೇಜುಗಳಿಗೆ ಪೊಲೀಸ್ ಭದ್ರತೆ ಒದಗಿಸುವಂತಹ ಸ್ಥಿತಿ ನಿರ್ಮಾಣವಾಗಿದೆ! ಸಮವಸ್ತ್ರ ವಿವಾದಕ್ಕೆ ಸಂಬಂಧಿಸಿದಂತೆ ನಗರದ ಕೆಲ ಕಾಲೇಜುಗಳಿಗೆ ಪೊಲೀಸ್ ಪಹರೆಯ ವ್ಯವಸ್ಥೆ ಮಾಡಲಾಗಿದೆ. ಕಾಲೇಜುಗಳಿಗೆ ಪೊಲೀಸ್ ಭದ್ರತೆ ಒದಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ. ಈ ರೀತಿಯ ಬೆಳವಣಿಗೆಗಳು ಶಿಕ್ಷಣ ಕ್ಷೇತ್ರದಲ್ಲಾಗಬಾರದು ಎಂದು ಉಪನ್ಯಾಸಕರೋರ್ವರು ಅಭಿಪ್ರಾಯಪಡುತ್ತಾರೆ.
ಸಹ್ಯಾದ್ರಿ ಕಾಲೇಜ್‌ಗೆ ಮುಂದುವರಿದ ರಜೆ...
ಕಳೆದ ಗುರುವಾರ ಹಾಗೂ ಶುಕ್ರವಾರ ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಸಹ್ಯಾದ್ರಿ ಕಾಲೇಜ್‌ನಲ್ಲಿ ವಿದ್ಯಾರ್ಥಿ ಗುಂಪುಗಳ ನಡುವೆ ಪ್ರತಿಭಟನೆ ನಡೆದಿತ್ತು. ಇದು ಎರಡು ದಿನಗಳ ಕಾಲ ಕಾಲೇಜ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಸಿತ್ತು. ಬಿಗಿ ಪೊಲೀಸ್ ಪಹರೆಯ ವ್ಯವಸ್ಥೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಕಾಲೇಜ್‌ಗೆ ರಜೆ ನೀಡಲಾಗಿತ್ತು. ಮತ್ತೊಂದೆಡೆ ಈ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸೋಮವಾರ ಕೂಡ ಕಾಲೇಜ್‌ಗೆ ರಜೆ ಘೋಷಿಸಲಾಗಿತ್ತು. ಕಾಲೇಜು ಆವರಣದಲ್ಲಿ ಬಿಗಿ ಪೊಲೀಸ್ ಪಹರೆಯ ವ್ಯವಸ್ಥೆ ಮಾಡಲಾಗಿದೆ. ಮಂಗಳವಾರದಿಂದ ಕಾಲೇಜು ಪುನಾರಂಭಗೊಳ್ಳುವ ಸಾಧ್ಯತೆಯಿದೆ ಎಂದು ಕಾಲೇಜು ಮೂಲಗಳು ಮಾಹಿತಿ ನೀಡಿವೆ.