ವಿವಿಧೆಡೆ ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ
ಚಿಕ್ಕಮಗಳೂರು, ಫೆ.6: ಕೇಂದ್ರ ಸರಕಾರ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವ ಧೋರಣೆಯನ್ನು ವಿರೋಧಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್ ಕಾರ್ಯಕರ್ತೆಯರು ಆಝಾದ್ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಿದರು.
ಕೇಂದ್ರ ಮಂತ್ರಿ ಅರುಣ್ ಜೇಟ್ಲಿ ಇತ್ತೀಚೆಗೆ ಸಂಸತ್‌ನಲ್ಲಿ ಮಂಡಿಸಿರುವ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಮಸ್ಯೆಗಳನ್ನು ಕಡೆಗಣಿಸಿ ಕಾರ್ಮಿಕ ವಿರೋಧಿ ನಿಲುವು ತಾಳಿರುವುದು ಖಂಡನೀಯ ಕ್ರಮವಾಗಿದೆ.
ದೇಶದ ಆರ್ಥಿಕ ಉತ್ಪಾದನೆ ಹಾಗೂ ಸಂಸತ್ತಿನ ನಿಜವಾದ ಮಾಲಕರು ಆಗಿರುವ ರೈತರು,ಕಾರ್ಮಿಕರು ಎದುರಿಸುತ್ತಿರುವ ಸಂಕಷ್ಟಗಳ ಪರಿಹಾರಕ್ಕೆ ಯಾವುದೇ ಯೋಜನೆಯನ್ನೂ ರೂಪಿಸಿಲ್ಲ. ದುಡಿಯುವ ವರ್ಗದ ಜನರ ವಿರುದ್ಧವಾಗಿ ಸರಕಾರ ನಡೆದುಕೊಂಡಿದೆ ಎಂದು ಆರೋಪಿಸಿದ್ದಾರೆ.
ಖಾಸಗಿ ಬಂಡವಾಳ ಶಾಹಿಗಳ ಹಾಗೂ ಕಾರ್ಪೊರೇಟ್ ವಲಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಸರಕಾರ ರೈತರ ಸಾಲ ಮನ್ನಾ ಮಾಡುವ, ಗುತ್ತಿಗೆ ಪದ್ಧತಿ ರದ್ದುಗೊಳಿಸುವ, ಅಸಂಘಟಿತ ಹಾಗೂ ಗೌರವ ಧನದ ಆಧಾರದಲ್ಲಿ ದುಡಿಯುತ್ತಿರುವ ಕಾರ್ಮಿಕರ ಕನಿಷ್ಠ ವೇತನ ನಿಗದಿಗೊಳಿಸುವ, ಉದ್ಯೋಗದ ಭದ್ರತೆಯಂತಹ ಗಂಭೀರ ವಿಷಯಗಳ ಬಗ್ಗೆ ಪ್ರಸ್ತಾಪಿಸದೇ ಇರುವುದು,ರೈತ-ಕಾರ್ಮಿಕರ ಪರ ಕಾಳಜಿ ತೋರದಿರುವುದು ಕಂಡು ಬರುತ್ತದೆ ಎಂದು ಮನವಿಯಲ್ಲಿ ದೂರಿದ್ದಾರೆ.
ಕೇವಲ ಭಾಷಣಗಳಲ್ಲಿ ಮಾತ್ರ ಮಹಿಳಾ ಸಬಲೀಕರಣದ ಕುರಿತು ಕಾಳಜಿ ವ್ಯಕ್ತಪಡಿಸುವ ನರೇಂದ್ರ ಮೋದಿ ಸರಕಾರ ಬಜೆಟ್ ಮಂಡನೆಯ ಸಂದಭರ್ದಲ್ಲಿ ಅಂಗನವಾಡಿ ಮಹಿಳಾ ಉದ್ಯೋಗಿಗಳ ಸಮಸ್ಯೆ ಮತ್ತು ಬೇಡಿಕೆಗಳ ಪರಿಹಾರಕ್ಕಾಗಿ ಕಿಂಚಿತ್ತೂ ಗಮನ ಕೊಡದಿರುವುದು ಮೋದಿ ಮಹಿಳಾ ವಿರೋಧಿ ಧೋರಣೆಗೆ ಹಿಡಿದ ಕೈಗನ್ನಡಿಯಾಗಿದೆ. ಮಕ್ಕಳ ಉತ್ತಮ ಭವಿಷ್ಯವೇ ಭಾರತದ ಭವಿಷ್ಯ ಎಂಬ ತತ್ವದಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಲ್ಲಿ 1975ರಲ್ಲಿ ಆರಂಭವಾದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ರಾಜ್ಯದಲ್ಲಿ 65 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ 1.25 ಲಕ್ಷ ಮಹಿಳೆಯರು ಸೇರಿದಂತೆ ದೇಶದಲ್ಲಿ 14 ಲಕ್ಷ ಅಂಗನವಾಡಿಗಳಲ್ಲಿ ಸುಮಾರು 25 ಲಕ್ಷ ರೂ.ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಅಂಗನವಾಡಿ ಸಿಬ್ಬಂದಿಗಳಿಗೆ ಕನಿಷ್ಠ 18 ಸಾವಿರ ಮಾಸಿಕ ವೇತನವನ್ನು ಜಾರಿಗೊಳಿಸಬೇಕು.ದುಡಿಮೆಗೆ ತಕ್ಕಫಲ ನೀಡಬೇಕು. ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಸಿ ಮತ್ತು ಡಿ ದರ್ಜೆಯ ನೌಕರನ್ನಾಗಿ ಪರಿಗಣಿಸಬೇಕು,ನಿವೃತ್ತಿಗೊಂಡವರಿಗೆ ಮಾಸಿಕ 3 ಸಾವಿರ ಪಿಂಚಣಿ ನೀಡಬೇಕು,ಮಿನಿ ಅಂಗನವಾಡಿಯನ್ನು ಮೇಲ್ದರ್ಜೆಗೇರಿಸಬೇಕು, ಮಿಷನ್ ಮೋಡ್ ಹೆಸರಲ್ಲಿ ಅಂಗನವಾಡಿಗಳನ್ನು ಖಾಸಗಿಗೊಳಿಸುವ ಪ್ರಕ್ರಿಯೆ ಕೈಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷೆ ರಾಧಾ ಸುಂದರೇಶ್,ಜಿಲ್ಲಾ ಕಾರ್ಯದರ್ಶಿ ಬಿ.ಅಮ್ಜದ್, ರಾಜ್ಯ ಉಪಾಧ್ಯಕ್ಷೆ ಎಸ್.ಮಂಗಳಾ,ಗೌರವಾಧ್ಯಕ್ಷೆ ಗ್ರೇಟಾ ಫೆರ್ನಾಂಡಿಸ್, ತಾಲೂಕು ಕಾರ್ಯದರ್ಶಿ ಜಯಶೇಖರ್ ಮತ್ತಿತರರಿದ್ದರು.ಮಕ್ಕಳ ಉತ್ತಮ ಭವಿಷ್ಯವೇ ಭಾರತದ ಭವಿಷ್ಯ ಎಂಬ ತತ್ವದಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಲ್ಲಿ 1975ರಲ್ಲಿ ಆರಂಭವಾದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ರಾಜ್ಯದಲ್ಲಿ 65 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ 1.25 ಲಕ್ಷ ಮಹಿಳೆಯರು ಸೇರಿದಂತೆ ದೇಶದಲ್ಲಿ 14 ಲಕ್ಷ ಅಂಗನವಾಡಿಗಳಲ್ಲಿ ಸುಮಾರು 25 ಲಕ್ಷ ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಅಂಗನವಾಡಿ ಸಿಬ್ಬಂದಿಗಳಿಗೆ ಕನಿಷ್ಠ 18 ಸಾವಿರ ವೇತನವನ್ನು ಮಾಸಿಕ ಜಾರಿಗೊಳಿಸಬೇಕು ದುಡಿಮೆಗೆ ತಕ್ಕಫಲ ನೀಡಬೇಕು.
ರಾಧಾ ಸುಂದರೇಶ್ ಎಐಟಿಯುಸಿ ಜಿಲ್ಲಾಧ್ಯಕ್ಷೆ
ತರೀಕೆರೆ: ಪ್ರತಿಕೃತಿ ಸುಟ್ಟು ಆಕ್ರೋಶ
ತರೀಕೆರೆ, ಫೆ.6: ಕೇಂದ್ರ ಸರಕಾರವು ತುರ್ತಾಗಿ 18ಸಾವಿರ ರೂ.ಗಳ ಕನಿಷ್ಠ ವೇತನವನ್ನು ಜಾರಿ ಮಾಡಬೇಕು. 3ಸಾವಿರ ರೂ.ಗಳ ಮಾಸಿಕ ಪಿಂಚಣಿ ಮತ್ತು ಇಎಸ್‌ಐ ಹಾಗೂ ಪಿಎಫ್‌ಗ್ರಾಚ್ಯುಯಿಟಿ ಯೋಜನೆಗಳನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಷನ್ ವತಿಯಿಂದ ಪಟ್ಟಣದ ಸಾಲುಮರದಮ್ಮ ದೇವಸ್ಥಾನದಿಂದ ಹೊರಟು ಗಾಂಧಿ ವೃತ್ತದ ಬಳಿ ಸರಕಾರದ ಪ್ರತಿಕೃತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಕೆೇಂದ್ರ ಸರಕಾರವು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಬೇಡಿಕೆಗಳಿಗೆ ಈ ಸಾರಿಯ ಬಜೆಟ್‌ನಲ್ಲಿ ಸ್ಪಂದಿಸದಿರುವುದು ದುರದೃಷ್ಟಕರ.ರಾಜ್ಯಾದ್ಯಂತ ಕೇಂದ್ರ ಸರಕಾದ ವಿರುದ್ಧ ಪ್ರತಿಭಟಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಈಗಲಾದರೂ ಸರಕಾರ ನಮ್ಮ ನೆರವಿಗೆ ಬರಲಿ ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯ ನೇತೃತ್ವವನ್ನು ಫೆಡರೇಷನ್ ರಾಷ್ಟ್ರೀಯ ಮಂಡಳಿ ಸದಸ್ಯೆ ವಿಜಯಕುಮಾರಿ, ತಾಲೂಕು ಪ್ರಧಾನ ಕಾರ್ಯದರ್ಶಿ ಕಲಾ.ಬಿ.ಪಿ. ಕಾರ್ಯದರ್ಶಿ ನಳಿನಾ, ಖಜಾಂಚಿ ಸರೋಜಾ ವಹಿಸಿದ್ದರು.
‘ಮಹಿಳೆಯರ ಕಣ್ಣಲ್ಲಿ ನೀರು ತರಿಸಿದರೆ ಕೇಂದ್ರ ಸರಕಾರ ವಿನಾಶದಂಚಿಗೆ’
ಮೂಡಿಗೆರೆ, ಫೆ.6: ಮಹಿಳೆಯರ ಕಣ್ಣಲ್ಲಿ ನೀರು ಬರುವಂತೆ ನಡೆದುಕೊಂಡರೆ ರಾಜಕಾರಣದ ವ್ಯವಸ್ಥೆಯೇ ವಿನಾಶದಂಚಿಗೆ ಹೋಗುತ್ತದೆ ಎಂದು ಸಿಪಿಐ ಮುಖಂಡ ಮಡ್ಡಿಕೆರೆ ಹರೀಶ್ ಹೇಳಿದರು.
ಅವರು ಸೋಮವಾರ ಪಟ್ಟಣದ ಲಯನ್ಸ್ ವೃತ್ತದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ನಡೆಸಿದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಅಂಗನವಾಡಿ ಕಾರ್ಯಕರ್ತೆಯರನ್ನು ಎಸ್‌ಡಿಸಿ ಹಾಗೂ ಆಯಾಗಳನ್ನು ಡಿ.ದರ್ಜೆ ಯ ನೌಕರರೆಂದು ಪರಿಗಣಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಸುಪ್ರೀಂಕೋರ್ಟ್ ಆದೇಶಿಸಿದ್ದರೂ ಕಳೆದ 10ವರ್ಷಗಳಿಂದ ಸರಕಾರಗಳು ಕಡೆಗಣಿಸುತ್ತಿವೆ.
ಕೇಂದ್ರ ಸರಕಾರ ಅದಾನಿ,ಅಂಬಾನಿಯಂತಹ ಶ್ರೀಮಂತರ ಪರ ವಹಿಸುತ್ತಿದ್ದು,ಬಡವರು ಹಾಗೂ ಮಹಿಳೆಯರನ್ನು ಸಂಪೂರ್ಣವಾಗಿ ಕಡೆಗಣಿಸುತ್ತದೆ.
ಮಾತು-ಮಾತಿಗೂ ಮಹಿಳೆಯರನ್ನು ಮಾತೆಯರು ಎಂದು ಹೇಳುವ ಸರಕಾರ ನಿಜವಾಗಿಯೂ ಮಹಿಳೆಯರ ಮೇಲೆ ಗೌರವವಿದ್ದರೆ ಅಂಗನವಾಡಿ ಕಾರ್ಯಕರ್ತರ ಬೇಡಿಕೆಗಳನ್ನು ಈಡೇರಿಸಿ ಮಾತೃ ವಾತ್ಸಲ್ಯ ತೋರಿಸಲಿ ಎಂದರು.
ಅಂಗನವಾಡಿ ಕಾರ್ಯಕರ್ತೇರ ಮತ್ತು ಸಹಾಯಕಿಯ ಫೆಡರೇಷನ್ ಅಧ್ಯಕ್ಷೆ ಬಲ್ಕಿಸ್‌ಬಾನು ಮಾತನಾಡಿ,ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಮೇಲ್ವಿಚಾರಕಿಯರ ಸೂಪರ್‌ವೈಸರ್ ಹುದ್ದೆಗಳಿಗೆ ಪೂರ್ಣವಾಗಿ ನೇಮಕಾತಿ ಮಾಡಿಕೊಳ್ಳಬೇಕು.ತಿಂಗಳಿಗೆ ಕನಿಷ್ಠ ಮೊತ್ತ ಹಾಗೂ ಸಹಾಯಕಿರಿಗೆ ತಲಾ 18 ಸಾವಿರ ರೂ. ವೇತನ ನೀಡಬೇಕು.ನಿವೃತ್ತಿಯ ನಂತರ ಕನಿಷ್ಠ 3.ಸಾವಿರ ಪಿಂಚಣಿ ಯೋಜನೆ ಜಾರಿ ತರಬೇಕು.ಕಾರ್ಯಕರ್ತೆಯರಿಗೆ ಹಿಡಿಗಂಟು 3ಲಕ್ಷ, ಸಹಾಯಕಿಯರಿಗೆ 2ಲಕ್ಷ ರೂ.ಗಳನ್ನು ಕೊಡಬೇಕು ಎಂದು ಆಗ್ರಹಿಸಿದರು.
ಸಿಡಿಪಿಓ ಕಚೇರಿಯಿಂದ ಮೆರವಣಿಗೆ ಮೂಲಕ ಟ್ಟಣದ ಲಯನ್ಸ್ ವೃತ್ತಕ್ಕೆ ಆಗಮಿಸಿ ಕೇಂದ್ರ ಸರಕಾರದ ಪ್ರತಿಕೃತಿ ದಹಿಸಿದರು. ಪ್ರತಿಭಟನೆ ವೇಳೆ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ, ತಹಶೀಲ್ದಾರ್ ಕಚೇರಿಗೆ ತೆರಳಿ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಫೆಡರೇಶನ್ ಉಪಾಧ್ಯಕ್ಷೆ ವನಜಾಕ್ಷಿ, ಕಾರ್ಯದರ್ಶಿ ಅನುಸೂಯ, ಮೀನಾಕ್ಷಿ, ಗುಲಾಬಿ ಜಾವಳಿ, ಸುಶೀಲಾ ನಂದೀಪುರ, ಗೌರಮ್ಮ, ಬೆಟ್ಟೆಗೆರೆ, ಹರಿಣಾಕ್ಷಿ ಬಣಕಲ್, ಸಾವಿತ್ರಿ ಗೋಣಿಬೀಡು, ಕಾತ್ಯಾಯಿಣಿ ಕಳಸ, ಇಂದಿರಾ ಸಂಸೆ ಮತ್ತಿತರರು ಭಾಗವಹಿಸಿದ್ದರು.
ಅಂಗನವಾಡಿ ಕಾರ್ಯಕರ್ತೆಯರನ್ನು ಎಸ್‌ಡಿಸಿ ಹಾಗೂ ಆಯಾಗಳನ್ನು ಡಿ.ದರ್ಜೆ ಯ ನೌಕರರೆಂದು ಪರಿಗಣಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಸುಪ್ರೀಂಕೋರ್ಟ್ ಆದೇಶಿಸಿದ್ದರೂ ಕಳೆದ 10ವರ್ಷಗಳಿಂದ ಸರಕಾರಗಳು ಕಡೆಗಣಿಸುತ್ತಿದೆ.ಕೇಂದ್ರ ಸರಕಾರ ಅಧಾನಿ, ಅಂಬಾನಿಯಂತಹ ಶ್ರೀಮಂತರ ಪರ ವಹಿಸುತ್ತಿದ್ದು, ಬಡವರು ಹಾಗೂ ಮಹಿಳೆಯರನ್ನು ಸಂಪೂರ್ಣವಾಗಿ ಕಡೆಗಣಿಸುತ್ತದೆ.
ಮಾತು-ಮಾತಿಗೂ ಮಹಿಳೆಯರನ್ನು ಮಾತೆಯರು ಎಂದು ಹೇಳುವ ಸರಕಾರ ನಿಜವಾಗಿಯೂ ಮಹಿಳೆಯರ ಮೇಲೆ ಗೌರವವಿದ್ದರೆ ಅಂಗನವಾಡಿ ಕಾರ್ಯಕರ್ತರ ಬೇಡಿಕೆಗಳನ್ನು ಈಡೇರಿಸಿ ಮಾತೃ ವಾತ್ಸಲ್ಯ ತೋರಿಸಲಿ ಮಡ್ಡಿಕೆರೆ ಹರೀಶ್, ಸಿಪಿಐ ಮುಖಂಡ