×
Ad

ಕೇಂದ್ರ ಸರಕಾರ ರೈತ ವಿರೋಧಿ: ಸಿದ್ದರಾಮಯ್ಯ

Update: 2017-02-07 19:59 IST

ಬೆಂಗಳೂರು, ಫೆ.7: ರಾಜ್ಯದಲ್ಲಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸದೆ ಕೇಂದ್ರ ಸರಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ಬರಗಾಲದ ಮೇಲೆ ನಡೆದ ಚರ್ಚೆಗೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಉತ್ತರಿಸಿದ ಬಳಿಕ, ವಿಪಕ್ಷಗಳ ಸದಸ್ಯರು ರೈತರ ಸಾಲ ಮನ್ನಾ ಕುರಿತು ಪ್ರಸ್ತಾಪಿಸಿದ್ದಕ್ಕೆ ಅವರು ಪ್ರತಿಕ್ರಿಯಿಸಿದರು.

ಶೇ.80ರಷ್ಟು ರೈತರು ವಾಣಿಜ್ಯಬ್ಯಾಂಕುಗಳಿಂದ ಸಾಲ ಪಡೆದಿದ್ದಾರೆ. ಕೇಂದ್ರ ಸರಕಾರ ವಾಣಿಜ್ಯ ಬ್ಯಾಂಕುಗಳ ಸಾಲವನ್ನು ಮನ್ನಾ ಮಾಡಿದರೆ, ನಾನು ಸಹಕಾರ ಸಂಘಗಳ ಮೂಲಕ ಪಡೆದಿರುವ ರೈತರ ಸಾಲ ಮನ್ನಾ ಮಾಡಲು ಸಿದ್ಧನಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.

ಕೇಂದ್ರ ಸರಕಾರದ ಬಜೆಟ್ ಇತ್ತೀಚೆಗೆ ತಾನೆ ಮಂಡನೆಯಾಗಿದೆ. ರೈತರ ಸಾಲ ಮನ್ನಾ ಕುರಿತು ಮಾತನಾಡುವ ಬಿಜೆಪಿಯವರು, ಕೇಂದ್ರ ಹಣಕಾಸು ಸಚಿವರನ್ನು ವೈಯಕ್ತಿಕ ಭೇಟಿ ಮಾಡಿ ಅಥವಾ ಪತ್ರ ಬರೆದು, ರಾಜ್ಯದ ರೈತರ ನೆರವಿಗೆ ಧಾವಿಸುವಂತೆ ಮನವಿ ಮಾಡಿದ್ದೀರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡುವಂತೆ ಪ್ರಧಾನಿಯನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಆದರೆ, ಯಾವುದೆ ಪ್ರಯೋಜನ ವಾಗಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯವರು ಪ್ರಧಾನಿ ಮೇಲೆ ಒತ್ತಡ ಹೇರಿ ರೈತರ ಸಾಲ ಮನ್ನಾ ಮಾಡಿಸಲಿ, ಅದನ್ನು ಬಿಟ್ಟು ರೈತರನ್ನು ರಾಜ್ಯ ಸರಕಾರದ ವಿರುದ್ಧ ಎತ್ತಿಕಟ್ಟುವ ಕೆಲಸಕ್ಕೆ ಕೈ ಹಾಕಿದ್ದಾರೆ. ನೀವು ಅಧಿಕಾರದಲ್ಲಿದ್ದಾಗ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ನಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಆ ಭರವಸೆಯನ್ನು ಈಡೇರಿಸಿದ್ದೇವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಪರಸ್ಪರ ವಾಗ್ವಾದ ನಡೆಯಿತು. ರೈತರ ಸಾಲ ಮನ್ನಾ ಮಾಡುವ ಕುರಿತು ಸ್ಪಷ್ಟವಾದ ಹೇಳಿಕೆ ನೀಡದ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಬಿಜೆಪಿ ಸದಸ್ಯರು ಸಭಾತ್ಯಾಗ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News