‘ಕಂಬಳ’ಕ್ಕೆ ವಿಧೇಯಕ ಮಂಡನೆ: ಮುಖ್ಯಮಂತ್ರಿ ಸಿದ್ದರಾಮಯ್ಯ
Update: 2017-02-07 20:05 IST
ಬೆಂಗಳೂರು, ಫೆ. 7: ಕಂಬಳ ಕ್ರೀಡೆ ನಡೆಸುವ ಸಂಬಂಧ ಪ್ರಸಕ್ತ ಅಧಿವೇಶನದಲ್ಲೆ ವಿಧೇಯಕ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಪ್ರಕಟಿಸಿದ್ದಾರೆ.
ಮಂಗಳವಾರ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸಚೇತಕ ಸುನೀಲ್ ಕುಮಾರ್‌ಗೆ ಉತ್ತರ ನೀಡಿದ ಅವರು, ನೀವು ಆಗ್ರಹಿಸುವ ಮೊದಲೆ ‘ಕಂಬಳ’ ಕ್ರೀಡೆ ನಡೆಸಲು ಅವಕಾಶ ಕಲ್ಪಿಸುವ ವಿಧೇಯಕವನ್ನು ಜಾರಿಗೆ ತರಲು ಸರಕಾರ ನಿರ್ಧರಿಸಿದೆ ಎಂದರು.
ಬಿಜೆಪಿ ಸದಸ್ಯರು ಕೇಲವ ಪ್ರಚಾರಕ್ಕಾಗಿ ‘ಕಂಬಳ’ ಕ್ರೀಡೆಗೆ ಅವಕಾಶ ನೀಡಬೇಕು ಎಂದು ಭಿತ್ತಿಪತ್ರ ಪ್ರದರ್ಶನ ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪಿಸಿದರು. ಬಳಿಕ ಮಾತನಾಡಿದ ಸುನೀಲ್ ಕುಮಾರ್, ಕಂಬಳ ಸಂಬಂಧ ವಿಧೇಯಕ ಮಂಡನೆ ಸ್ವಾಗತಾರ್ಹ. ಶೀಘ್ರದಲ್ಲೆ ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.