ಕಾರವಾರ: ಹೊಸ ಮೀನು ಮಾರುಕಟ್ಟೆಗೆ ಅನುಮೋದನೆ
ಕಾರವಾರ, ಫೆ.7: ಇಲ್ಲಿನ ಹಳೇ ಮೀನು ಮಾರುಕಟ್ಟೆಯು ತೆರವಾಗಿದ್ದ ಸ್ಥಳದಲ್ಲೇ 12 ಗುಂಟೆ ವ್ಯಾಪ್ತಿಯಲ್ಲಿ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಹೊಸ ಮೀನು ಮಾರುಕಟ್ಟೆ ನಿರ್ಮಾಣದ ನೀಲ ನಕ್ಷೆಗೆ ನಗರಸಭೆ ಸರ್ವ ಸದಸ್ಯರು, ಶಾಸಕ ಸತೀಶ ಸೈಲ್ ಉಪಸ್ಥಿತಿಯಲ್ಲಿ ಅನುಮೋದನೆ ನೀಡಿದರು.
ಶೀಘ್ರವೇ ಸುತ್ತಮುತ್ತಲಿನ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯ ಆರಂಭಿಸಬೇಕು ಎನ್ನುವ ಬಗ್ಗೆ ನಗರಸಭೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ನೂತನ ಮೀನು ಮಾರುಕಟ್ಟೆಯ ನಿರ್ಮಾಣಕ್ಕೆ ಶೀಘ್ರವೇ ಟೆಂಡರ್ ಕರೆಯಬೇಕು. ಹಾಗೂ ಸಚಿವ ಆರ್. ವಿ. ದೇಶಪಾಂಡೆ ಅವರಿಂದ ಗುದ್ದಲಿ ಪೂಜೆಯನ್ನು ನೆರವೇರಿಸಲು ದಿನಾಂಕವನ್ನು ನಿಗದಿ ಪಡಿಸಬೇಕು ಎನ್ನುವ ವಿಷಯಗಳ ಬಗ್ಗೆ ಚರ್ಚೆಗಳಾದವು. ಹಳೇ ಮೀನು ಮಾರುಕಟ್ಟೆಯ ಬಳಿ ಸರ್ವೇ ನಂಬರ್ 52 ರಲ್ಲಿ ಸೆಂಟನಟಿ ಬಿಲ್ಡಿಂಗ್, ಮೀನು ಮಾರುಕಟ್ಟೆ, ಗಾಂಧಿ ಮಾರುಕಟ್ಟೆಯ ಕಟ್ಟಡಗ ಳಿವೆ. ಆದಷ್ಟು ಬೇಗ ಮೀನು ಮಾರುಕಟ್ಟೆ ನಿರ್ಮಾಣವಾಗಬೇಕಾಗಿದ್ದರಿಂದ ಹಾಗೂ ಅನುದಾನದ ಕೊರತೆ ಇರುವುದರಿಂದ ಗಾಂಧಿ ಮಾರುಕಟ್ಟೆ ತೆರವು ಯೋಜನೆಯನ್ನು ಎರಡನೆ ಹಂತದಲ್ಲಿ ನಡೆಸಲು ಯೋಜಿಸಲಾ
ಗಿದೆ. ಮೊದಲ ಹಂತದಲ್ಲಿ ಒಂದು ಮಹಡಿಯ ಮೀನು ಮಾರುಕಟ್ಟೆ ನಿರ್ಮಾಣ ಮಾಡಲು ಯೋಜಿಸಲಾಗಿದ್ದು, ರಸ್ತೆಯಿಂದ ಪಾರ್ಕಿಂಗ್‌ಗಾಗಿ ಸುಮಾರು 15 ಅಡಿಯಷ್ಟು ಜಾಗ ಬಿಡಲಾಗುತ್ತಿದೆ. ಮೀನು ಮಾರುಕಟ್ಟೆಯ ನೆಲ ಮಹಡಿಯಲ್ಲಿ 350ರಷ್ಟು ಮೀನುಗಾರ ಮಹಿಳೆಯರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗುತ್ತಿದೆ. ಕಟ್ಟದ ಮೊದಲ ಮಹಡಿಯಲ್ಲಿ ಒಣ ಮೀನು ಮಾರುಕಟ್ಟೆ ಹಾಗೂ ಅಂಗಡಿಗಳಿಗೆ ಅವಕಾಶ ನೀಡಲಾಗುವುದು ಎಂದು ಸೈಲ್ ಸಭೆಗೆ ತಿಳಿಸಿದರು.