ಬುರ್ಕಾ ಧರಿಸಿದ್ದ ವಿದ್ಯಾರ್ಥಿನಿಯರ ಮೇಲೆ ಹಲ್ಲೆ : ಕಠಿಣ ಕ್ರಮಕ್ಕೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಆಗ್ರಹ
ಶಿವಮೊಗ್ಗ, ಫೆ. 8: ನಗರದ ಸಹ್ಯಾದ್ರಿ ಕಾಲೇಜ್‌ನಲ್ಲಿ ಇತ್ತೀಚೆಗೆ ಬುರ್ಕಾ ಧರಿಸಿದ್ದ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಿ, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ ಎಬಿವಿಪಿ ಸಂಘಟನೆಯ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಜರಗಿಸಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿ.ಎಫ್.ಐ.) ಸಂಘಟನೆಯ ಜಿಲ್ಲಾ ಉಸ್ತುವಾರಿ ಎ.ಎಂ.ಫಯಾಜ್‌ರವರು ಆಗ್ರಹಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಹಲ್ಲೆ ನಡೆದಿರುವುದಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ ಇಲ್ಲಿಯವರೆಗೂ ಪೊಲೀಸರು ಕೇಸ್ ದಾಖಲಿಸಿಕೊಂಡು ಕ್ರಮ ಜರುಗಿಸಿಲ್ಲ. ತಕ್ಷಣವೇ ಕೇಸ್ ದಾಖಲಿಸಿ, ಆರೋಪಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಗೊಂದಲ ಸೃಷ್ಟಿ: ಸಹ್ಯಾದ್ರಿ ಕಾಲೇಜ್‌ನಲ್ಲಿ ಕೆಲ ದಿನಗಳಿಂದ ವಸ್ತ್ರ ಸಂಹಿತೆ ವಿವಾದ ಉಂಟಾಗಿದೆ. ಇದರ ನೆಪದಲ್ಲಿ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲುಗಳನ್ನು ಹಾಕಿಕೊಂಡು ಬುರ್ಕಾ ನಿಷೇಧ ಮಾಡುವಂತೆ ಫೆ.2ರಂದು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳು ತರಗತಿಗಳಿಗೆ ನುಗ್ಗಿ ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ ಎಂದು ದೂರಿದ್ದಾರೆ.
ಕುವೆಂಪು ವಿಶ್ವ ವಿದ್ಯಾನಿಲಯವು ವಸ್ತ್ರ ನೀತಿ ಸಂಹಿತೆಯ ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿತ್ತು. ಇದರ ಹೊರತಾಗಿಯೂ ಎಬಿವಿಪಿ ಸಂಘಟನೆಯವರೆಂದು ಹೇಳಿಕೊಂಡ ಕೆಲ ವಿದ್ಯಾರ್ಥಿಗಳು ಫೆ.3ರಂದು ಮತ್ತೆ ಕಾಲೇಜ್‌ನ ತರಗತಿಯೊಳಗೆ ಏಕಾಏಕಿ ನುಗ್ಗಿ ಬುರ್ಕಾ ಧರಿಸಿದ್ದ ವಿದ್ಯಾರ್ಥಿನಿಯರನ್ನು ಕುರಿತು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದರೂ ಕೂಡ ಇದುವರೆಗೂ ಯಾವುದೇ ಪ್ರಕರಣವನ್ನು ದಾಖಲಿಸಿಕೊಂಡಿಲ್ಲ. ತಕ್ಷಣವೇ ಎಫ್‌ಐಆರ್ ದಾಖಲು ಮಾಡಿಕೊಳ್ಳಬೇಕೆಂದು ಎ.ಎಂ.ಫಯಾಜ್‌ರವರು ಆಗ್ರಹಿಸಿದ್ದಾರೆ.
ಬೆದರಿಸಿದ್ದಾರೆ: ಗೋಷ್ಠಿಯಲ್ಲಿ ಉಪಸ್ಥಿತರಿದ್ದ ವಿದ್ಯಾರ್ಥಿನಿಯರಾದ ಉಮೇ ಸಲ್ಮಾ ಹಾಗೂ ಉಮೇಹಾನಿ ಮಾತನಾಡಿ, ಕೆಲವು ವಿದ್ಯಾರ್ಥಿಗಳು ಕಾಲೇಜ್‌ನ ತರಗತಿಗಳಿಗೆ ನುಗ್ಗಿ ನಮ್ಮನ್ನು ಬೆದರಿಸಿದ್ದಾರೆ. ಬುರ್ಕಾ ತೆಗೆದು ಹಾಕುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮಹಿಳೆಯರ ಮೇಲೆ ಈ ರೀತಿಯ ದೌರ್ಜನ್ಯ ಆಗುತ್ತಿರುವುದು ಖಂಡನೀಯವಾಗಿದೆ. ಈ ಬಗ್ಗೆ ನಾವು ವೀಡಿಯೋ ಕೂಡ ಮಾಡಿ ದೂರು ಕೊಟ್ಟಿದ್ದೇವೆ. ನಮ್ಮನ್ನು ಬೆದರಿಸಲಾಗಿದೆ. ನಾವು ಮುಂದೆ ಕಾಲೇಜಿಗೆ ಹೋಗುವುದು ಹೇಗೆ? ನಮ್ಮ ಶಿಕ್ಷಣದ ಗತಿ ಏನು? ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದೊಂದು ಗಂಭೀರ ವಿಷಯವಾಗಿದ್ದು ಪೊಲೀಸರು, ಶಿಕ್ಷಣ ಇಲಾಖೆ ಮಧ್ಯ ಪ್ರವೇಶಿಸಿ ಪರಿಹಾರ ಕಲ್ಪಿಸಬೇಕು. ನಮಗೆ ನ್ಯಾಯ ಒದಗಿಸಬೇಕು. ಕಾಲೇಜ್‌ನಲ್ಲಿ ಭಯಮುಕ್ತ ವಾತಾವರಣ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ. ಗೋಷ್ಠಿಯಲ್ಲಿ ಅರೀಫ್‌ವುಲ್ಲಾ ಸೇರಿದಂತೆ ಇತರೆ ವಿದ್ಯಾರ್ಥಿನಿಯರಿದ್ದರು.