ರಾಜಪ್ಪ ದಳವಾಯಿ ಅವರ "ಧಾರಾಶಿಖೋ" ನಾಟಕ ಪ್ರದರ್ಶನ ರದ್ದು

Update: 2017-02-08 15:14 GMT

ತುಮಕೂರು, ಫೆ.8: ಹಿಂದೂ ಪರ ಸಂಘಟನೆಗಳ ಬೆದರಿಕೆ ಕರೆಯ ಹಿನ್ನೆಲೆಯಲ್ಲಿ ಲೇಖಕ ಡಾ.ರಾಜಪ್ಪ ದಳವಾಯಿ ಅವರು ರಚಿಸಿರುವ ಕೋಮು ಸೌಹಾರ್ದ ಸಾರುವ ದಾರಾಶೀಖೋ ನಾಟಕ ಪ್ರದರ್ಶನ ರದ್ದಾಗಿರುವ ಘಟನೆ ನಡೆದಿದೆ.

ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗಾಯಣ ಶಿವಮೊಗ್ಗ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾಲೇಜು ರಂಗೋತ್ಸವ. ನಾಟಕ ಮತ್ತು ಜಾನಪದ ನೃತ್ಯಗಳ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ಆಯ್ಕೆ ಮಾಡಿದ ನಾಟಕಗಳನ್ನು ಆಸಕ್ತ ಕಾಲೇಜುಗಳಿಗೆ ನೀಡಲಾಗಿತ್ತು. ತುಮಕೂರು ನಗರದ ಶ್ರೀಸಿದ್ದಾರ್ಥ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳು ಲೇಖಕ ಹಾಗೂ ಉಪನ್ಯಾಸಕ ಡಾ.ರಾಜಪ್ಪ ದಳವಾಯಿ ಅವರ ಧಾರಾಶಿಖೋ ನಾಟಕವನ್ನು ಕಲಿಕೆಗೆ ಆಯ್ಕೆ ಮಾಡಿಕೊಂಡು ನಿನಾಸಂ ಪದವಿಧರ ಚೇತನ್ ಮಾರ್ಗದರ್ಶನದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಅಭ್ಯಾಸ ಮಾಡಿದ್ದು, ಪ್ರದರ್ಶನಕ್ಕೆ ಸಿದ್ದತೆಗಳನ್ನು ಮಾಡಿಕೊಂಡಿದ್ದರು.

ನಿಗದಿಯಂತೆ ಫೆ.7 ಮತ್ತು 8ರಂದು ಜಿಲ್ಲಾ ಮಟ್ಟದ ಕಾಲೇಜು ರಂಗೋತ್ಸವ ನಾಟಕ ಮತ್ತು ಜಾನಪದ ನೃತ್ಯ ಪ್ರದರ್ಶನ ಏರ್ಪಾಡಾಗಿತ್ತು. ಫೆ.8ರ ಬೆಳಗ್ಗೆ 11 ಗಂಟೆಯಿಂದ 12:30ರ ವರೆಗೆ ಈ ನಾಟಕ ಪ್ರದರ್ಶನಗೊಳ್ಳಬೇಕಾಗಿತ್ತು. ಅಲ್ಲದೆ 20 ನಿಮಿಷಗಳ ಕಾಲ ತಮಟೆ ಕುಣಿತ ಜಾನಪದ ನೃತ್ಯಕ್ಕೆ ಸದರಿ ಕಾಲೇಜು ಹೆಸರು ನೊಂದಾಯಿಸಿಕೊಂಡಿತ್ತು. ಆದರೆ, ನಿಗದಿತ ಸಮಯಕ್ಕೆ ಕಾಲೇಜಿನ ತಂಡ ಸ್ಪರ್ಧೆಯಲ್ಲಿ ಪಾಲ್ಗೊಳ್ಳದೆ ಗೈರು ಹಾಜರಾಗಿದ್ದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಈ ಬಗ್ಗೆ ನಾಟಕದ ತರಬೇತುದಾರರಾದ ಚೇತನ್ ಅವರನ್ನು ಸಂಪರ್ಕಿಸಿದಾಗ ಕೆಲ ಹಿಂದೂಪರ ಸಂಘಟನೆಗಳ ಬೆದರಿಕೆ ಕರೆಯ ಹಿನ್ನೆಲೆಯಲ್ಲಿ ನಾಟಕದ ಪ್ರದರ್ಶನಕ್ಕೆ ವಿದ್ಯಾರ್ಥಿಗಳನ್ನು ಕಳುಹಿಸಲು ಕಾಲೇಜಿನ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿ ಹಿಂದೇಟು ಹಾಕಿದ ಪರಿಣಾಮ ಒಳ್ಳೆಯ ಸಂದೇಶದ ನಾಟಕ ಪ್ರದರ್ಶನವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದಷ್ಟೇ ನನ್ನ ಜವಾಬ್ದಾರಿಯಾಗಿತ್ತು. ಒಂದು ವೇಳೆ ತಂಡದ ನೇತೃತ್ವವನ್ನು ನಾನು ವಹಿಸಿದ್ದರೆ, ಬೀದಿಯಲ್ಲಾದರೂ ನಾಟಕ ಆಡಿಸುತ್ತಿದೆ. ವಿದ್ಯಾರ್ಥಿಗಳು ಬಹಳ ಇಷ್ಟ ಪಟ್ಟು ಕಲಿಯಲು ಆಸಕ್ತಿವಹಿಸಿದ್ದರು. ಈಗ ಅವರ ಪ್ರತಿಭೆಗೂ ವೇದಿಕೆ ಸಿಗದಂತಾಯಿತು ಎಂದು ವಿಷಾದಿಸಿದರು.

ಈ ಕುರಿತು ಪತ್ರಿಕೆಗೆ ಸ್ಪಷ್ಟನೆ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪ್ಪಿನಕಟ್ಟೆ, ಇದೊಂದು ಸ್ಪರ್ಧೆ. ಯಾವ ತಂಡ ಸ್ಪರ್ಧೆಗೆ ಬರುತ್ತದೆಯೋ ಆ ತಂಡವನ್ನು ಪರಿಗಣಿಸಲಾಗುತ್ತದೆ. ಯಾವುದೇ ಕಾರಣ ನೀಡದೆ ಶ್ರೀಸಿದ್ದಾರ್ಥ ಪದವಿ ಕಾಲೇಜಿನ ತಂಡ ಗೈರು ಹಾಜರಾಗಿದೆ ಎಂದರು.

ರಾಜ್ಯದ ಆರೂವರೆ ಕೋಟಿ ಜನರಿಗೆ ರಕ್ಷಣೆ ನೀಡಬೇಕಾದ ಗೃಹ ಮಂತ್ರಿಗಳಿಗೆ ಸೇರಿದ ಶ್ರೀಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರೇ ಒಂದು ಬೆದರಿಕೆ ಕರೆಗೆ ಹೆದರಿ ಕೋಮು ಸಾಮರಸ್ಯ ಬೀರುವ ನಾಟಕವೊಂದರ ಪ್ರದರ್ಶನಕ್ಕೆ ಹಿಂದೇಟು ಹಾಕಿದರೆ ಸಾಮಾನ್ಯ ಜನರ ಪಾಡೇನು ಎಂಬುದು ತಿಳಿಯದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News