ಅಧಿಕಾರಿಗಳಿಂದ ಮಂಡಕ್ಕಿ ಭಟ್ಟಿಗಳ ಮೇಲೆ ದಾಳಿ: 4 ಮಕ್ಕಳ ಬಿಡುಗಡೆ
ದಾವಣಗೆರೆ, ಫೆ.8: ನಗರದ ಭಾಷಾ ನಗರ, ಆಝಾದ್ ನಗರ, ಮಾಗನಹಳ್ಳಿ ರಸ್ತೆಯ ಮಂಡಕ್ಕಿ ಭಟ್ಟಿ ಹಾಗೂ ಅವಲಕ್ಕಿ ಭಟ್ಟಿಗಳಿಗೆ ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಲು ಅಧಿಕಾರಿಗಳು ದಾಳಿ ನಡೆಸಿ 4 ಮಕ್ಕಳನ್ನು ಕೆಲಸದಿಂದ ಬಿಡುಗಡೆ ಗೊಳಿಸಿದ್ದಾರೆ. ಜಿಲ್ಲಾಧಿಕಾರಿ ನಿರ್ದೇಶನ ಹಾಗೂ ಮಾರ್ಗದರ್ಶನದಂತೆ ತಹಶೀಲ್ದಾರ್, ಬಳ್ಳಾರಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಮತ್ತು ಕಾರ್ಮಿಕ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಮಿಕ ಇಲಾಖೆ, ಕಂದಾಯ, ಸಾರ್ವಜನಿಕ ಶಿಕ್ಷಣ, ಮಹಾ ನಗರ ಪಾಲಿಕೆ, ಪೊಲೀಸ್ ಇಲಾಖೆ, ಸರಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಮತ್ತು ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಸ್ಥೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನೊಳಗೊಂಡ 2 ತಂಡಗಳನ್ನು ರಚಿಸಿಕೊಂಡು ಅಧಿಕಾರಿಗಳು ದಾಳಿ ನಡೆಸಿದರು.
ದಾಳಿಯಲ್ಲಿ ಪತ್ತೆ ಹಚ್ಚಲಾದ 4 ಮಕ್ಕಳಲ್ಲಿ, 3 ಗಂಡು ಹಾಗೂ ಓರ್ವ ಬಾಲಕಿಯಿದ್ದು, ಈ ಮಕ್ಕಳನ್ನು ಎಚ್.ಕೆ ರೋಷನ್, ಪೋವಾ ಇಂಡಸ್ಟ್ರೀಸ್, ಮಾಗನಹಳ್ಳಿ ರಸ್ತೆ, ಅವಲಕ್ಕಿ ಭಟ್ಟಿಯಲ್ಲಿ ಕೆಲಸಕ್ಕೆ ನಿಯೋಜಿಸಲಾಗಿತ್ತು. ಇವರನ್ನು ಕೆಲಸದಿಂದ ಬಿಡುಗಡೆ ಗೊಳಿಸಿ, ಪುನರ್ವಸತಿ ಹಾಗೂ ಮುಂದಿನ ಕ್ರಮಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ನೀಡಲಾಯಿತು.
14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ಕೆಲಸಕ್ಕೆ ಹಾಗೂ 14 ರಿಂದ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಉದ್ಯಮಗಳಲ್ಲಿ ನೇಮಕ ಮಾಡುವುದನ್ನು ಬಾಲ, ಕಿಶೋರಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ 2016ರ ತಿದ್ದುಪಡಿ ಕಾಯ್ದೆಯಡಿ ನಿಷೇಧಿಸಲಾಗಿದೆ. ಕಾಯ್ದೆಯನ್ನು ಉಲ್ಲಂಘಿಸಿ ನೇಮಕ ಮಾಡಿಕೊಂಡಲ್ಲಿ 6 ತಿಂಗಳಿ ನಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 20,000 ರೂ.ಯಿಂದ 50,000ವರೆಗೆ ದಂಡ ಪಾವತಿಸ ಬೇಕಾಗುತ್ತದೆ.
ಮಾಲಕರು 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ಕೆಲಸಕ್ಕೆ ಹಾಗೂ 14 ರಿಂದ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಉದ್ಯಮಗಳಲ್ಲಿ ನೇಮಕ ಮಾಡಿಕೊಂಡಿರುವುದು ಕಂಡುಬಂದಲ್ಲಿ, ಸಾರ್ವಜನಿಕರು ಮಕ್ಕಳ ಸಹಾಯವಾಣಿ ಸಂಖ್ಯೆ 1098, ಕಾರ್ಮಿಕ ಇಲಾಖೆ ದೂರವಾಣಿ ಸಂಖ್ಯೆ: 08192 237332, 230094 ಹಾಗೂ ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಸ್ಥೆ ದೂರವಾಣಿ ಸಂಖ್ಯೆ: 08192 256626ಗೆ ಸಂಪರ್ಕಿಸಬೇಕೆಂದು ಸಹಾಯಕ ಕಾರ್ಮಿಕ ಆಯುಕ್ತರು ಹಾಗೂ ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನಾ ಸಂಸ್ಥೆಯ ಸದಸ್ಯ ಕಾರ್ಯದರ್ಶಿಗಳು ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.