×
Ad

ಬರಗಾಲ ಎದುರಿಸುವಲ್ಲಿ ಅಧಿಕಾರಿಗಳು ವಿಫಲ: ಈ.ಆರ್.ಮಹೇಶ್

Update: 2017-02-09 15:06 IST

ಚಿಕ್ಕಮಗಳೂರು, ಫೆ.9: ಮಳೆ ಇಲ್ಲದೆ ತಾಲೂಕಿನಲ್ಲಿ ಕುಡಿಯುವ ನೀರು ಮತ್ತು ಮೇವಿಗೆ ತುಂಬಾ ತೊಂದರೆಯಾಗಿದ್ದರೂ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡದೆ ನಿರ್ಲಕ್ಷ್ಯ ವಹಿಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಾಪಂ ಅಧ್ಯಕ್ಷ ಈ.ಆರ್.ಮಹೇಶ್ ತಿಳಿಸಿದರು.  ಅವರು ಇಲ್ಲಿನ ತಾಪಂ ಸಭಾಂಗಣದಲ್ಲಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕಿನ ಲಕ್ಯಾ, ಬೆಳವಾಡಿ, ಕಳಸಾಪುರ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯ ಜೊತೆಗೆ ಜನ-ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಂಟಾಗಿದೆ. ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡಿದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಸರಕಾರದಿಂದ ಖಾಸಗಿ ಬೋರ್‌ವೆಲ್ ಮಾಲಕರಿಗೆ ಗೌರವಧನವಾಗಿ ತಿಂಗಳಿಗೆ 12 ರಿಂದ 15 ಸಾವಿರ ಸಂದಾಯ ಮಾಡಿ ನೀರನ್ನು ತೆಗೆದುಕೊಳ್ಳಬಹುದೆಂದು ತಿಳಿಸಿದರು. ಟ್ರಾನ್ಸ್‌ಪೋರ್ಟ್ ವತಿಯಿಂದ ಚಿಕ್ಕಮಗಳೂರು ಕ್ಷೇತ್ರದಲ್ಲಿ 44, ಮೂಡಿಗೆರೆ 28 ಗ್ರಾಮ, ಶೃಂಗೇರಿ -4 ಗ್ರಾಮಗಳಲ್ಲಿ ನೂತನ ಬೋರ್‌ವೆಲ್ ಕಾಮಗಾರಿಗಳು ಪ್ರಗತಿಯಲ್ಲಿವೆ. ಎನ್.ಆರ್.ಡಿ.ಡಬ್ಲ್ಯೂ.ಪಿ ಯೋಜನೆಯಡಿ ಕಾಮಗಾರಿಗೆ ಅನುಮೋದನೆ ದೊರೆತಿದ್ದು, 53 ಅಂಗನವಾಡಿ ಕೇಂದ್ರಗಳಿಗೆ ಕುಡಿಯುವ ನೀರು, 3 ಚೆಕ್ ಡ್ಯಾಂ, 104 ಸ್ಕೀಮ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.

ರೈತರು ಮೇವು ಕೊಳ್ಳುವಾಗ ಎಚ್ಚರಿಕೆ ವಹಿಸಿ ಜಾನುವಾರು ಕಾರ್ಡ್ ಮಾಡಿಸಬೇಕು. ಕನಿಷ್ಟ 100 ಕೆ.ಜಿ. ಮೇವು ಅರ್ಹ ರೈತರಿಗೆ ನೀಡಬೇಕು. ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಸಣ್ಣಪುಟ್ಟ ಸಮಸ್ಯೆಗಳನ್ನು ತಕ್ಷಣ ಸರಿಪಡಿಸಿಕೊಳ್ಳಬೇಕು ಎಂದರು.

ತಾಪಂ ಉಪಾಧ್ಯಕ್ಷ ವೈ.ಜಿ.ಸುರೇಶ್ ಮಾತನಾಡಿ, ತಾಲೂಕಿನಾದ್ಯಂತ ದಡಾರ ಮತ್ತು ರುಬೆಲಾ ಮಾರಣಾಂತಿಕ ಕಾಯಿಲೆಯಾಗಿದ್ದು, ಇದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಸರಕಾರ ಉಚಿತ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಶಾಲೆಗಳು ಮತ್ತು ಸಾರ್ವಜನಿಕರು ಹೆಚ್ಚು ಸಹಕಾರ ನೀಡಿ ತಮ್ಮ ಮಕ್ಕಳಿಗೆ ಈ ಲಸಿಕೆಯನ್ನು ಹಾಕಿಸಿಕೊಳ್ಳಬೇಕೆಂದರು.  ಬಿದರೆ ಗ್ರಾಪಂ ಉಜನಿ-ಹೊಸಪೇಟೆ ಹಾಗೂ ಕಣತಿ ಶಾಲೆಗಳಿಗೆ ಭೇಟಿ ನೀಡಿದಾಗ ಶಿಕ್ಷಕರು ರಜೆ ತೆಗೆದುಕೊಂಡರೂ ಹಾಜರಾತಿಯಲ್ಲಿ ಸಹಿ ಮಾಡಿ ತೆರಳುತ್ತಿರುವುದು ಕಂಡು ಬಂತು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ಈ ರೀತಿ ಕಂಡುಬಂದಲ್ಲಿ ಅಂತಹ ಶಿಕ್ಷಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.  ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ಕಾರ್ಯನಿರ್ವಹಣಾಧಿಕಾರಿ ಸಿದ್ದಪ್ಪ, ಸದಸ್ಯರಾದ ಜಯಣ್ಣ, ಸುರೇಶ್, ಭವ್ಯನಟೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News