ನಿಮಗೂ ಬರಬಹುದು ‘ಕೌನ್ ಬನೇಗಾ ಕರೋಡ್ ಪತಿ’ಯ ಕರೆ !

Update: 2017-02-09 13:58 GMT

ಗದಗ, ಫೆ.9: ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾದ ಶಿಕ್ಷಕರೇ ಇಲ್ಲಿ ಎಚ್ಚರ ತಪ್ಪಿದ್ದಾರೆ. ಹಣದಾಸೆ ವ್ಯಾಮೋಹಕ್ಕೆ ಒಳಗಾಗಿ ಬದುಕಿನ ಭದ್ರತೆಗೆ ಕೂಡಿಟ್ಟ ಹಣ ಕಳೆದುಕೊಂಡು ಅಕ್ಷರಶ: ಪರದಾಡುವಂತಾಗಿದೆ. ಕೋಟಿ ಹಣ ನಂಬಿ ಇದ್ದ ಲಕ್ಷಗಟ್ಟಲೇ ಹಣವನ್ನು ವಂಚಕರ ಬಾಯಿಗೆ ಹಾಕಿದ್ದಾರೆ. ಇದು ಧಿಡೀರ್ ಅಂತ ಅರಸೊತ್ತಿಗೆ ಬಯಸಲು ಹೋಗಿ ಕಂಗಾಲದ ವ್ಯಕ್ತಿಯ ಕಥೆ. ಗದಗನ ಬೆಟಗೇರಿ ನಿವಾಸಿ ಮುಹಮ್ಮದ್ ಇಕ್ಬಾಲ್ ಜಲ್ಲಿಗೇರಿ ಎಂಬವರು ವಂಚನೆಗೆ ಒಳಗಾದ ವ್ಯಕ್ತಿ. 2 ಕೋಟಿ ಹಣ ಡ್ರಾ ಆಗಿದೆ ಅನ್ನೋ ಫೋನ್ ಕರೆ ನಂಬಿ 17 ಲಕ್ಷ ಪಂಗನಾಮ ಹಾಕಿಸಿಕೊಂಡಿದ್ದಾರೆ. ‘ಇವರಿಗೆ ಎರಡು ವರ್ಷದ ಹಿಂದೆ ಒಂದು ದೂರವಾಣಿ ಕರೆ ಬರುತ್ತೆ. ಹಲೋ.. ನಾವು ಕೌನ್ ಬನೇಗಾ ಕರೋಡ್ ಪತಿಯಿಂದ ಕರೆ ಮಾಡ್ತಿದ್ದೇವೆ, ನಿಮಗೆ 25 ಲಕ್ಷ ಹಣ ಬಹುಮಾನ ಬಂದಿದೆ. ಕೂಡಲೇ ನಾವು ಹೇಳುವ ಬ್ಯಾಂಕಿನ ಖಾತೆಗೆ 18,300 ರೂ.ವನ್ನು ತುಂಬಿ, ನಿಮಗೆ ವಾರದಲ್ಲಿ ಬಹುಮಾನದ ಹಣದ ಚೆಕ್ ಬರುತ್ತೆ’ ಅನ್ನೋ ಧ್ವನಿ ಕೇಳ್ತಿದ್ದಂಗೆ ಇಕ್ಬಾಲ್ ಹಗಲು ಗನಸಲ್ಲೆ ಅವರು ಹೇಳಿದಷ್ಟು ಹಣ ಬ್ಯಾಂಕ್ ಖಾತೆಗೆ ಹಾಕಿದ್ದರು.

ಇಷ್ಟಕ್ಕೆ ಸುಮ್ಮನಾಗದ ವಂಚಕರು, ಹಂತ, ಹಂತವಾಗಿ ಆರಂಭದಲ್ಲಿ 25 ಲಕ್ಷ ರೂ. ಡ್ರಾ ಆಗಿದೆ. 2 ಕೋಟಿ ರೂ.ವರೆಗೂ ಹಣ ಗೆದ್ದಿದ್ದಿರಿ ಅಂತಾ ಮೂಗಿಗೆ ತುಪ್ಪ ಹಚ್ಚುತ್ತಲೆ ಬಂದಿದ್ದಾರೆ. ಇದನ್ನೆಲ್ಲಾ ನಂಬಿದ ಇಕ್ಬಾಲ್ ಮಾ.15, 2014 ರಿಂದ ಈತನಕ 103 ಬಾರಿ ಬ್ಯಾಂಕ್ ಮೂಲಕ ವಂಚಕರು ಹೇಳಿದಷ್ಟು ಹಣ ತುಂಬಿ ವಂಚನೆಗೆ ಒಳಗಾಗಿದ್ದಾರೆ. ಅಸಲಿಗೆ ಇಕ್ಬಾಲ್ ಒಬ್ಬ ಪ್ರೌಢ ಶಾಲೆ ಶಿಕ್ಷಕ. ವಂಚಕರ ಮಾತಿಗೆ ಮರಳಾಗಿರೋದು ಮಾತ್ರ ವಿಪರ್ಯಾಸ.

ಫೋನ್ ಕರೆ ನಂಬಿದ ಇಕ್ಬಾಲ್ ಕರ್ಪೋರೇಷನ್ ಬ್ಯಾಂಕ್, ಎಚ್.ಡಿ.ಎಫ್.ಸಿ, ಮುತ್ತೂಟ್ ಫೈನಾನ್ಸ್, ಸೇರಿದಂತೆ ಇತರ ಖಾಸಗಿ ಹಣಕಾಸು ಸಂಸ್ಥೆಗಳಲ್ಲೂ ಸಾಲ ಮಾಡಿದ್ದಾರೆ. ಈಗಾಗಲೇ ಮಾಡಿದ 18 ಲಕ್ಷ ರೂ. ಸಾಲಕ್ಕೆ ತಿಂಗಳಿಗೆ 50,000 ಹಣ ಬಡ್ಡಿ ಕಟ್ಟುತ್ತಿದ್ದಾರೆ. ತಿಂಗಳು ಮುಗಿಯುತಿದ್ದಂತೆೆ ಬರೋ ಸಂಬಳ ಬಡ್ಡಿ ಹಣಕ್ಕೂ ಸಾಕಾಗುತ್ತಿಲ್ಲ. ಇದರಿಂದ ಬದುಕು ಸಾಗಿಸಲು ಇಕ್ಬಾಲ್ ಪರದಾಡುತ್ತಿದ್ದಾರೆ. ಅದೆಷ್ಟೋ ಮಕ್ಕಳಿಗೆ ಶಿಕ್ಷಣ ನೀಡೋ ಶಿಕ್ಷಕನಿಗೆ ಮಗನ ಶಾಲೆಯ ಶುಲ್ಕವನ್ನು ಕಟ್ಟಲು ಆಗುತ್ತಿಲ್ಲ. ಇನ್ನು ಸಾಲಗಾರರ ಕಾಟ ಮತ್ತೊಂದೆಡೆ ಕಾಡುತ್ತಿದೆ. ಈ ಮಧ್ಯೆ ಇಕ್ಬಾಲ್ ಮೋಸ ಹೋಗಿದ್ದಾರೆಂದು ಗೊತ್ತಾದ ತಕ್ಷಣ ಇವರಿಗೆ 1 ಲಕ್ಷ ಹಣ ಸಾಲ ನೀಡಿದ ವ್ಯಕ್ತಿಯೊಬ್ಬರು ಇಕ್ಬಾಲ್ ವಿರುದ್ಧ ಚೆಕ್ ಬೌನ್ಸ್ ದೂರು ದಾಖಲಿಸಿದ್ದಾರೆ. ಇದ್ದ ಬಂಗಾರ ಾಗೂ ಸೈಟ್ ಮಾರಿ ಕಂಗಾಲಾಗಿದ್ದಾರೆ.

ಇನ್ನು ಈ ಬಗ್ಗೆ ಸಂಬಂಧಿಸಿದ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನಾಗಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ.

ವಿಕ್ರಂಸಿಂಗ್, ವಿಜಯ್ ಕುಮಾರ್, ರಾಜೇಶ್ ಪಾಂಡೆ, ಲಕ್ಷ್ಮೀಮಿತ್ತಲ್, ಪೂಜಾ ಎನ್ನೋ 5 ಜನ ನಿರಂತರವಾಗಿ ಕರೆ ಮಾಡಿದ್ದಾರೆ. ಇವರ ವರ್ತನೆ ಬಗ್ಗೆ ಅನುಮಾನಗೊಂಡು ಇಕ್ಬಾಲ್‌ಮುಂಬೈಗೆ ಹೋಗಿ ಕೌನ್ ಬನೇಗಾ ಕಾರೋಡ್ ಪತಿ ಕಾರ್ಯಾಲಯ ಹಾಗೂ ಏರಟೇಲ್‌ಆಫೀಸಿಗೂ ಹೋಗಿ ವಿಚಾರಿಸಿದ್ದಾರೆ ಆದರೆ ಈ ಬಗ್ಗೆ ಯಾವುದೇ ಸುಳಿವು ಸಿಗದ ಕಾರಣ ನಾನು ಮೋಸಹೋಗಿದೇೆಂದು ಇಕ್ಬಾಲ್‌ಗೆ ಮನವರಿಕೆಯಾಗಿದೆ.

ಇಂತಹ ಅದೆಷ್ಟೋ ಜನರು ವಂಚಕರಿಂದ ಮೋಸ ಹೊಗುತ್ತಿದ್ದಾರೆ. ಆದ್ದರಿಂದ ಪೊಲೀಸ್ ಇಲಾಖೆಯು ಕೊಡಲೇ ಇಂತಹ ವಂಚಕರ ಜಾಲವನ್ನು ಭೇದಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಆವಶ್ಯಕತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News