×
Ad

ಭೂಗತ ಪಾತಕಿ ಹೆಬ್ಬೆಟ್ಟು ಮಂಜನಿಗೆ ಸೇರಿದ ನಾಲ್ಕು ಪಿಸ್ತೂಲ್, 48 ಗುಂಡುಗಳ ವಶ : ಇಬ್ಬರ ಸೆರೆ

Update: 2017-02-09 19:31 IST

ಶಿವಮೊಗ್ಗ, ಫೆ. 9: ಮೋಸ್ಟ್ ವಾಟೆಂಡ್ ಭೂಗತ ಪಾತಕಿ, ಪ್ರಸ್ತುತ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಶಿವಮೊಗ್ಗದ ಕುಖ್ಯಾತ ರೌಡಿ ಹೆಬ್ಬೆಟ್ಟು ಮಂಜನು ಬೆಂಗಳೂರಿನ ರೌಡಿ ಕೊರಂಗು ಕೃಷ್ಣನ ಹತ್ಯೆ ನಡೆಸಲು ತನ್ನ ಸಹಚರರ ಮೂಲಕ ಗುಪ್ತವಾಗಿ ಸಂಗ್ರಹಿಸಿಟ್ಟುಕೊಂಡಿದ್ದ ಭಾರೀ ಮೌಲ್ಯದ ವಿದೇಶಿ ಪಿಸ್ತೂಲ್‌ಗಳು, ಗುಂಡುಗಳನ್ನು ಶಿವಮೊಗ್ಗದ ಅಪರಾಧ ದಳ ಪೊಲೀಸ (ಡಿಸಿಬಿ)ರು ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ.

ಖಚಿತ ವರ್ತಮಾನದ ಮೇರೆಗೆ ಡಿಸಿಬಿ ಪೊಲೀಸ್ ತಂಡವು ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಸಮೀಪದ ಲಿಂಗಾಪುರದಲ್ಲಿರುವ ಗಫಾರ್‌ಖಾನ್ ಯಾನೆ ಮಥಾಯ್ ಎಂಬಾತನ ಅಡಕೆ ತೋಟದ ಮೇಲೆ ಬುಧವಾರ ಮಧ್ಯಾಹ್ನ ದಾಳಿ ನಡೆಸಿದೆ. ಈ ವೇಳೆ ಹೆಬ್ಬೆಟ್ಟು ಮಂಜನ ಅಣತಿಯಂತೆ ಪಿಸ್ತೂಲ್‌ಗಳನ್ನಿಟ್ಟುಕೊಂಡಿದ್ದ ಮೂಲತಃ ಶಿವಮೊಗ್ಗದ, ಪ್ರಸ್ತುತ ಕೇರಳದ ಮಲಪುರಂ ಜಿಲ್ಲೆಯ ಅದಮಹಲ್ ಎಂಬ ಪ್ರದೇಶದಲ್ಲಿ ನೆಲೆಸಿರುವ ಅಶ್ರಫ್ (37) ಹಾಗೂ ಈತನ ಸ್ನೇಹಿತ ಶಿವಮೊಗ್ಗ ನಗರದ ಆರ್‌ಎಂಎಲ್ ನಗರ 2 ನೇ ಹಂತದ ನಿವಾಸಿ, ಟೈರ್ ವ್ಯಾಪಾರಿ ನದೀಂ (42) ಎಂಬಾತನನ್ನು ಪೊಲೀಸರು ಬಂಂಧಿಸಿದ್ದಾರೆ.

ಅವರ ಬಳಿಯಿದ್ದ 9 ಎಂ.ಎಂ. ಮಾದರಿಯ 3 ಪಿಸ್ತೂಲ್, 7.62 ಎಂ.ಎಂ.ನ 1 ಪಿಸ್ತೂಲ್, 9 ಎಂ.ಎಂ. ಪಿಸ್ತೂಲ್‌ಗೆ ಬಳಸುವ 38 ಹಾಗೂ 7.62 ಎಂ. ಎಂ. ಪಿಸ್ತೂಲ್‌ಗೆ ಬಳಕೆ ಮಾಡುವ 10 ಜೀವಂತ ಗುಂಡುಗಳು, 1 ಖಾಲಿ ಮ್ಯಾಗಜಿನ್ ಹಾಗೂ ಮಾರುತಿ ರಿಟ್ಜ್ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಡಿಸಿಬಿ ದಳದ ಇನ್ಸ್‌ಪೆಕ್ಟರ್‌ಗಳಾದ ಕೆ. ಕುಮಾರ್, ಟಿ.ಕೆ.ಚಂದ್ರಶೇಖರ್, ಮುತ್ತಣ್ಣಗೌಡ ಮತ್ತವರ ಸಿಬ್ಬಂದಿಗಳಾದ ಜಗದೀಶ್, ನಾಗರಾಜ್, ಚೂಡಾಮಣಿ, ಚಂದ್ರಶೇಖರ್, ಮಹ್ಮದ್ ಹಬೀಬುಲ್ಲಾ, ಶ್ರೀಧರ್, ವೆಂಕಟೇಶ್, ಸತೀಶ್‌ರಾಜ್, ಶಿವಕುಮಾರ್, ರವಿಕುಮಾರ್, ನಾಗೇಶ್‌ರವರು ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆಯವರು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಬಗ್ಗೆ ಮಾಹಿತಿ ನೀಡಿದರು. ಈ ಸಂಬಂಧ ತೀರ್ಥಹಳ್ಳಿ ತಾಲೂಕು ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಹತ್ಯೆಗಾಗಿ ಸಿದ್ದತೆ:

ವಿದೇಶದಲ್ಲಿ ತಲೆಮರೆಸಿಕೊಂಡಿರುವ ಹೆಬ್ಬೆಟ್ಟು ಮಂಜನು ತನ್ನ ಎದುರಾಳಿ ರೌಡಿ ಕೊರಂಗು ಕೃಷ್ಣನ ಹತ್ಯೆ ಮಾಡಲು ನಿರ್ಧರಿಸಿದ್ದ. ಈ ಹಿನ್ನೆಲೆಯಲ್ಲಿ 6 ಪಿಸ್ತೂಲ್, 48 ಗುಂಡುಗಳನ್ನು ತನ್ನ ಸಹಚರರ ಮೂಲಕ ಖರೀದಿಸಿಟ್ಟಿದ್ದ ಅಂಶ ಪೊಲೀಸ್‌ರ ತನಿಖೆಯಿಂದ ಬೆಳಕಿಗೆ ಬಂದಿದೆ. 


ಸಂಗ್ರಹಿಸಿದ್ದು ಹೇಗೆ?:

ಹೆಬ್ಬೆಟ್ಟು ಸೂಚನೆಯಂತೆ ಆತನ ಬೆಂಗಳೂರಿನ ಸಹಚರ ಅಂಬರೀಷ್ ಎಂಬಾತನು 1 ಪಿಸ್ತೂಲ್ ಹಾಗೂ 10 ಗುಂಡುಗಳನ್ನು ಅಶ್ರಫ್‌ಗೆ ಕೊಟ್ಟಿದ್ದ. ಮತ್ತೊಂದೆಡೆ ಅಶ್ರಫ್‌ನು ತನ್ನ ಸಂಪರ್ಕ ಬಳಸಿ ಒರಿಸ್ಸಾದ ಬೆಹರಾಮ್‌ಪುರದಿಂದ ಜಾವೇದ್ ಎಂಬಾತನ ಮೂಲಕ 5 ಪಿಸ್ತೂಲ್ ಹಾಗೂ 38 ಗುಂಡುಗಳನ್ನು ಖರೀದಿಸಿದ್ದ. ಇದಕ್ಕಾಗಿ ಹೆಬ್ಬೆಟ್ಟು ಮಂಜ ಲಕ್ಷಾಂತರ ರೂ.ಗಳನ್ನು ಅಶ್ರಫ್‌ಗೆ ಕೊಟ್ಟಿದ್ದ.

ಆರು ಪಿಸ್ತೂಲ್ 48 ಗುಂಡುಗಳನ್ನು ತಾನು ಹೇಳುವವರಿಗೆ ನೀಡುವಂತೆ ಹೆಬ್ಬೆಟ್ಟು ಆಶ್ರಫ್‌ಗೆ ಸೂಚಿಸಿದ್ದ. ಆದರೆ ಹಣದಾಸೆಯಿಂದ ಅಶ್ರಫ್‌ನು ಹೆಬ್ಬೆಟ್ಟು ಮಂಜಗೆ ಗೊತ್ತಿಲ್ಲದಂತೆ ಎರಡು ಪಿಸ್ತೂಲ್‌ಗಳನ್ನು ತಲಾ 1.25 ಲಕ್ಷ ರೂ.ಗಳಂತೆ ಮಂಡಗದ್ದೆಯ ಅಡಕೆ ತೋಟದ ಮಾಲಕ ಗಫಾರ್‌ಖಾನ್ ಯಾನೆ ಮಥಾಯ್ ಹಾಗೂ ಮಂಗಳೂರಿನ ಚಿನ್ನದ ವ್ಯಾಪಾರಿ ಇಕ್ಬಾಲ್ ಎಂಬಾತನಿಗೆ ನಾಲ್ಕು ತಿಂಗಳ ಹಿಂದೆ ಮಾರಿಕೊಂಡಿದ್ದ.

ಉಳಿದ 4 ಪಿಸ್ತೂಲ್ ಹಾಗೂ 48 ಗುಂಡುಗಳನ್ನು ಕೂಡ ಮಾರಾಟ ಮಾಡಲು ನಿರ್ಧರಿಸಿದ್ದ. ಈ ಹಿನ್ನೆಲೆಯಲ್ಲಿ ತನ್ನ ಸ್ನೇಹಿತ ಆರ್.ಎಂ.ಎಲ್. ನಗರದ ನಿವಾಸಿ ನದೀಂನ ಜೊತೆ ಮಂಡಗದ್ದೆ ಸಮೀಪದ ಲಿಂಗಾಪುರದಲ್ಲಿರುವ ಗಫಾರ್‌ಖಾನ್ ಯಾನೆ ಮಥಾಯ್‌ಗೆ ಸೇರಿದ ಅಡಕೆ ತೋಟಕ್ಕೆ ಬುಧವಾರ ಪಿಸ್ತೂಲ್, ಗುಂಡುಗಳ ಸಮೇತ ಆಗಮಿಸಿದ್ದ. ಈ ಬಗ್ಗೆ ಖಚಿತ ವರ್ತಮಾನ ಪಡೆದ ಡಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದರು.

ತಲೆಮರೆಸಿಕೊಂಡಿರುವ ಬೆಂಗಳೂರು, ಮಂಗಳೂರು ಆರೋಪಿಗಳು: 
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಬ್ಬೆಟ್ಟು ಮಂಜ, ಅಶ್ರಫ್‌ನಿಂದ ಪಿಸ್ತೂಲ್ ಖರೀದಿಸಿದ ಮಂಡಗದ್ದೆಯ ಗಫಾರ್‌ಖಾನ್ ಯಾನೆ ಮಥಾಯ್, ಮಂಗಳೂರಿನ ಚಿನ್ನದ ವ್ಯಾಪಾರಿ ಇಕ್ಬಾಲ್, ಹೆಬ್ಬೆಟ್ಟು ಸಹಚರ ಬೆಂಗಳೂರಿನ ಅಂಬರೀಶ್ ಹಾಗೂ ಪಿಸ್ತೂಲ್ ಖರೀದಿಸಿಕೊಟ್ಟಿದ್ದ ಒರಿಸ್ಸಾ ರಾಜ್ಯದ ಬೆಹರಾಮ್‌ಪುರದ ಜಾವೇದ್‌ರವರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಆರೋಪಿಗಳಲ್ಲಿ ಹೆಬ್ಬೆಟ್ಟು ಮಂಜ ವಿದೇಶದಲ್ಲಿರುವುದರಿಮದ ಈತನ ಬಂಧನ ಕಷ್ಟ ಸಾಧ್ಯವಾಗಿದೆ. ಉಳಿದಂತೆ ಇತರ ಆರೋಪಿಗಳ ಬಂಧನಕ್ಕೆ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ದೇಶಕ್ಕೆ ವಾಪಾಸ್ ಆಗಲು ಹತ್ಯೆಯ ಸಂಚು: 

ವಿದೇಶದಲ್ಲಿ ತಲೆಮರೆಸಿಕೊಂಡಿರುವ ಹೆಬ್ಬೆಟ್ಟು ಮಂಜನಿಗೆ ದೇಶಕ್ಕೆ ವಾಪಾಸ್ ಆಗುವ ಬಯಕೆ ಉಂಟಾಗಿದೆ. ತನ್ನ ಎದುರಾಳಿ ಕೊರಂಗು ಕೃಷ್ಣನ ಹತ್ಯೆ ನಡೆಸಿದರೆ ಆರಾಮಾಗಿ ಕರ್ನಾಟಕದಲ್ಲಿರಬಹುದು ಎಂಬ ಹಿನ್ನೆಲೆಯಲ್ಲಿಯೇ ಕೊರಂಗು ಕೃಷ್ಣನ ಹತ್ಯೆಗೆ ಸಂಚು ರೂಪಿಸಿದ್ದ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News