ವಿಜ್ಞಾನವನ್ನರಿತಾಗ ವೌಢ್ಯದಿಂದ ಹೊರಬರಲು ಸಾಧ್ಯ: ಸಾಹಿತಿ ನಾ.ಡಿಸೋಜ

Update: 2017-02-09 14:53 GMT

ಸೊರಬ, ಫೆ.9: ಆಧುನಿಕತೆ ಮತ್ತು ವಿಜ್ಞಾನವನ್ನು ಸರಿಯಾಗಿ ಅರ್ಥ ಮಾಡಿಕೊಂಡಾಗ ಮೌಢ್ಯವನ್ನು ಬಿಟ್ಟು ಬದುಕಲು ಸಾಧ್ಯವಿದೆ ಎಂದು ಸಾಹಿತಿ ನಾ. ಡಿಸೋಜ ತಿಳಿಸಿದರು.

ತಾಲೂಕಿನ ಕಮರೂರಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ಮತ್ತು ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವಿಜ್ಞ್ಞಾನ ಮತ್ತು ವೈಜ್ಞಾನಿಕ ನಡವಳಿಕೆಗಾಗಿ ಯುವಜನತೆ ಧ್ಯೇಯದೊಂದಿಗೆ ನಡೆದ ರಾಜ್ಯ ಮಟ್ಟದ ಎನ್ನೆಸ್ಸೆಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಆಚಾರ ವಿಚಾರ, ನಂಬಿಕೆಗಳಲ್ಲಿ ಆಧುನಿಕತೆಯನ್ನು ಮೈಗೊಡಿಸಿಕೊಂಡಿದ್ದೇವೆ ಎಂಬ ಭ್ರಮೆಯಲ್ಲಿ ಮೂರ್ಖತನದಿಂದ ಬದುಕುತ್ತಿದ್ದೇವೆ. ಆಧುನಿಕತೆ ಮತ್ತು ವಿಜ್ಞಾನವನ್ನು ಸರಿಯಾಗಿ ಅರ್ಥ ಮಾಡಿಕೊಂಡಾಗ ಮೌಢ್ಯವನ್ನು ಬಿಟ್ಟು ಬದುಕಲು ಸಾಧ್ಯವಿದೆ. ನಮ್ಮಲ್ಲಿ ಸ್ಪಷ್ಟವಾದ ನಂಬಿಕೆ ಇಲ್ಲದಿರುವ ಕಾರಣದಿಂದ ನಮ್ಮ ಸುತ್ತ-ಮುತ್ತ ನಡೆಯುವ ಪ್ರತಿಯೊಂದು ಆಗು ಹೋಗುಗಳಿಗೂ ಇಲ್ಲದಿರುವ ಅರ್ಥವನ್ನು ಕಲ್ಪಿಸುತ್ತೇವೆ ಎಂದರು.

ಪೂರ್ವಜರು ಅರ್ಥ ಪೂರ್ಣವಾಗಿ ಬದುಕಿದ್ದರು. ಇಂದು ನಮ್ಮ ಜೀವನದಲ್ಲಿ ಅರ್ಥಪೂರ್ಣ ಬದುಕು ಇದೆಯೇ ಎಂದು ನೋಡಿಕೊಳ್ಳಬೇಕು. ಹಿಂದಿನ ಕಾಲದಲ್ಲಿ ವಿಚಿತ್ರ ರೋಗಗಳಿಗೆ ತುತ್ತಾಗುತ್ತಿದ್ದರು. ಪ್ರಕೃತಿ ವಿಕೋಪ ಉಂಟಾಗುತ್ತಿತ್ತು. ತೋಟ, ಗದ್ದೆಗಳಿಗೆ ಆನೆ ಮುಂತಾದ ಪ್ರಾಣಿಗಳ ದಾಳಿಯಾಗುತ್ತಿತ್ತು. ಆದರೂ ಅವರ ಬದುಕು ಹಸನಾಗಿತ್ತು ಎಂದರು.

ಕಾಲೇಜಿನ ಪ್ರಾಂಶುಪಾಲ ಡಿ.ಎಸ್. ರವಿಶಂಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದಲ್ಲಿ ಸರಕಾರಿ ಪಾಲಿಟಿಕ್ನಿಕ್ ಕಾಲೇಜಿಗೆ ಮೊಟ್ಟ ಮೊದಲ ಬಾರಿಗೆ ರಾಜ್ಯ ಮಟ್ಟದ ಎನ್ನೆಸ್ಸೆಸ್ ಶಿಬಿರ ನಡೆಸಲು ಅವಕಾಶ ದೊರೆತಿರುವುದು ಹೆಮ್ಮೆಯ ವಿಷಯ ಎಂದರು.

 ಈ ಸಂದರ್ಭದಲ್ಲಿ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಗುರುಪ್ರಸಾದ್ ಎಂ. ಹೂಗಾರ್, ಉಪನ್ಯಾಸಕರಾದ ಜಿ. ಜಯಣ್ಣ, ಯು. ಅರುಣ್, ಎನ್. ನಂದನ್, ಎಚ್.ಎಸ್. ಚಂದ್ರಶೇಖರ್, ಜಾವೀದ್ ಇಕ್ಬಾಲ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News