ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ

Update: 2017-02-09 15:03 GMT

ಹಾಸನ, ಫೆ.9: ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಮತ್ತು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಆಶ್ರಯದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಎರಡು ದಿನದ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಏರ್ಪಡಿಸಲಾಗಿತ್ತು.

ನಗರದ ಜಿಲ್ಲಾಧಕಾರಿ ಕಚೇರಿ ಆವರಣದಲ್ಲಿ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಹಾಗೂ ಜಿಲ್ಲಾಧಿಕಾರಿ ವಿ.ಚೈತ್ರ ಹಾಗೂ ಸಮ್ಮೇಳನಾಧ್ಯಕ್ಷೆ ಭಾರ್ಗವಿ ಉಜಿರೆ ಹಾಗೂ ಸಹ ಸರ್ವಾಧ್ಯಕ್ಷರಾದ ವಿವೇಕ್ ಹಾಸನ, ಗೌರಮ್ ಬಾಗಲಕೋಟೆ, ಅನನ್ಯ ಬೆಳ್ತಂಗಡಿ ಹಾಗೂ ಸುಬ್ರಹ್ಮಣ್ಯ ನಾವಡ ತುಮಕೂರು ಇವರುಗಳಿಗೆ ಮೈಸೂರು ಪೇಟ ತೊಡಿಸಿ ಮೆರವಣಿಗೆ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ವಿವಿಧ ಶಾಲೆಯ ಮಕ್ಕಳು ಕನ್ನಡ ಸಾಹಿತ್ಯ ಪರಂಪರೆಯ ಬಗ್ಗೆ ಸಿದ್ದಪಡಿಸಿದ್ದ ಸ್ಥಬ್ದಚಿತ್ರಗಳು ಮಕ್ಕಳಲ್ಲಿನ ಸಾಹಿತ್ಯಾಭಿರುಚಿಯನ್ನು ತೊರಿಸುವಂತಿತ್ತು. ನಗರದ ವಿಜಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯವನ್ನು ಪರಿಚಯಿಸುವ ಮಾಹಿತಿ ಹಾಗೂ ಕವಿಶೈಲದ ಸ್ಥಬ್ದಚಿತ್ರ ನೋಡುಗರ ಕಣ್ಮನ ಸೆಳೆಯಿತು, ಚನ್ನರಾಯಪಟ್ಟಣ ಪಟ್ಟಣದ ಜ್ಞಾನಸಾಗರ ಅಂತರಾಷ್ಟ್ರೀಯ ಪಬ್ಲಿಕ್ ಶಾಲೆಯ ಮಕ್ಕಳು ದಸರಾ ಉತ್ಸವದಲ್ಲಿ ಮಹಾರಾಜರು ಆನೆಯ ಅಂಬಾರಿ ನಡೆಸುವ ಕುರಿತು ಸಿದ್ದಪಡಿಸ್ದದ ಸ್ಥಬ್ದಚಿತ್ರ ಸುಂದರವಾಗಿತ್ತು.

ಇದಲ್ಲದೆ ನಗರದ ರಾಯಲ್ ಅಪೋಲೊ ಶಾಲೆ, ಸಂತ ಫಿಲೋವಿಂತ ಜೋಸೇಫ್ ಶಾಲೆ, ಹೋಲಿ ಕ್ರಾಸ್ ಶಾಲೆ, ಯುನೈಟೆಡ್ ಶಾಲೆ, ಬಾಲಕಿಯರ ಸರಕಾರಿ ಶಾಲೆ ಸ್ಥಬ್ದಚಿತ್ರಗಳನ್ನು ಪ್ರದರ್ಶಿಸಿದರು. ಆದಿಚುಂಚನಗಿರಿ ಶಾಲೆಯ ಮಕ್ಕಳು ಮೇರವಣಿಗೆಯಲ್ಲಿ ನಡೆಸಿಕೊಟ್ಟ ಬ್ಯಾಂಡ್‌ಸೆಟ್ ಹಾಗೂ ವಾದ್ಯ ಮೇರವಣಿಗೆ ಕಲೆಗಟ್ಟುವಂತೆ ಮಾಡಿತು. ಸುಮಾರು ಒಂದುವರೆ ಗಂಟೆಗಳ ಕಾಲ ನಡೆದ ಮಕ್ಕಳ ಮೇರವಣಿಗೆಯಲ್ಲಿ 5 ಸಾವಿರಕ್ಕೂ ಹೆಚ್ಚು ಶಾಲಾ ಮಕ್ಕಳು ಭಾಗವಹಿಸಿದ್ದರು. ಸೋಮನ ಕುಣಿತ, ವೀರಗಾಸೆ, ಯಕ್ಷಗಾನ, ವೀರಭದ್ರ ಕುಣಿತ, ನಂದೀಧ್ವಜ, ಪಟ್ಟದ ಕುಣಿತ, ಕೋಲಾಟ ಹೀಗೆ ಹತ್ತಾರು ಜಾನಪದ ಕಲಾ ಪ್ರಕಾರಗಳ ಪ್ರದರ್ಶನ ಗಮನ ಸೆಳೆಯಿತು. ಪುಟ್ಟ ಬಾಲಕನ ಪೂಜಾ ಕುಣಿತವನ್ನು ಯಾವುದೇ ಅಳುಕಿಲ್ಲದೆ ಮಾಡಿದ್ದು ಎಲ್ಲರ ಚಪ್ಪಾಳೆ ಗಿಟ್ಟಿಸಿತು.

ಮಲೆನಾಡು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಹೆಮ್ಮಿಗೆ ಮೋಹನ್, ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮಿಜಿ, ಉಪ ವಿಭಾಗಾಧಿಕಾರಿ ಡಾ:ಹೆಚ್.ಎಲ್.ನಾಗರಾಜ್ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ರವಿ ನಾಕಲಗೂಡು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಯಕರಹಳ್ಳಿ ಮಂಜೇಗೌಡ ಮತ್ತಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 ಪುಸ್ತಕ ಮಳಿಗೆ ಉದ್ಘಾಟನೆ: 

ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ವೇದಿಕೆ ಬಳಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಏರ್ಪಡಿಸಿದ್ದ ಮಾಹಿತಿ ಮಳಿಗೆ ಮತ್ತು ಇತರ ಮಳಿಗೆಗಳನ್ನು ಆದಿಚುಂಚನಗಿರಿ ಮಹಾ ಸಂಸ್ಥಾನದ ನಿರ್ಮಲಾನಂದ ಸ್ವಾಮೀಜಿಯವರು ಉದ್ಘಾಟಿಸಿದರು.

ಶಾಸಕ  ಎಚ್.ಎಸ್. ಪ್ರಕಾಶ್ ನಗರಸಭಾ ಅಧ್ಯಕ್ಷ  ಡಾ.ಎಚ್.ಎಸ್.ಅನಿಲ್ ಕುಮಾರ್ ಸಂಗೀತ ನಿರ್ದೇಶಕ  ಹಂಸಲೇಖ, ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ, ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥಸ್ವಾಮೀಜಿ  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News