ಅನುಪಮಾ ಶೆಣೈ ಹೇಳಿಕೆ ಸದನದಲ್ಲಿ ಪ್ರತಿಧ್ವನಿ: ಆರೋಪ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ: ಪಿ.ಟಿ.ಪರಮೇಶ್ವರ್ ನಾಯ್ಕ್

Update: 2017-02-09 15:06 GMT

ಬೆಂಗಳೂರು, ಫೆ. 9: ‘ನನ್ನ ವರ್ಗಾವಣೆಗೆ ಪರಮೇಶ್ವರ್ ನಾಯ್ಕ 42ಲಕ್ಷ ರೂ. ಹಣ ಪಡೆದಿದ್ದರು’ ಎಂಬ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಆರೋಪ ಸಂಬಂಧ ಯಾವುದೇ ತನಿಖೆಗೆ ಸಿದ್ಧ. ಆರೋಪ ಸಾಬೀತುಪಡಿಸಿದರೆ ತಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆಂದು ಮಾಜಿ ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕಿ ಸವಾಲು ಹಾಕಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಒಂದು ವೇಳೆ ದಾಖಲೆ ಸಮೇತ ಆರೋಪ ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ನೀವು ರಾಜಕೀಯ ನಿವೃತ್ತಿ ಪಡೆಯುತ್ತೀರಾ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್‌ಗೆ ಸವಾಲೆಸೆದಿದ್ದು, ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಮೇಜುಕುಟ್ಟಿ ಸ್ವಾಗತಿಸಿದರು.

ಮಾಧ್ಯಮಗಳ ವರದಿಯನ್ನು ಆಧರಿಸಿ ಈ ಮನೆಯ ಸದಸ್ಯನ ವಿರುದ್ಧ ಸುಳ್ಳು ಆರೋಪ ಸಲ್ಲ. ಇದು ವಿಪಕ್ಷ ನಾಯಕರ ಸ್ಥಾನದ ಘನತೆಗೆ ಶೋಭೆ ತರುವುದಿಲ್ಲ. ಡಿವೈಎಸ್ಪಿ ಹುದ್ದೆ ಕಳೆದುಕೊಂಡ ಹತಾಶೆಯಿಂದ ಅನುಪಮಾ ಶೆಣೈ ಮನಸೋ ಇಚ್ಛೆ ಹೇಳಿಕೆ ನೀಡುತ್ತಿದ್ದಾರೆಂದು ಪರಮೇಶ್ವರ್ ನಾಯ್ಕಾ ವಾಗ್ದಾಳಿ ನಡೆಸಿದರು.

ವರ್ಗಾವಣೆಗೆ ತಾನು ಹಣ ಪಡೆದಿದ್ದೇನೆ ಎಂಬುದು ಸತ್ಯಕ್ಕೆ ದೂರ. ನನಗೂ, ಅವರು ಮಾಡಿರುವ ಆರೋಪಕ್ಕೂ ಯಾವುದೇ ಸಂಬಂಧವಿಲ್ಲ. ಸುಳ್ಳು ಆರೋಪ ಮಾಡುತ್ತಿದ್ದು, ಎಸಿಬಿ ತನಿಖೆ ಮಾತ್ರವಲ್ಲ, ಸಿಬಿಐ ತನಿಖೆಗೂ ತಾನು ಸಿದ್ಧ ಎಂದು ಪರಮೇಶ್ವರ್ ನಾಯ್ಕಿ ಪ್ರಕಟಿಸಿದರು.

ಆರಂಭಕ್ಕೆ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಿದ ಶೆಟ್ಟರ್, ಅನುಪಮಾ ಶೆಣೈ ವರ್ಗಾವಣೆಗೆ ಪಿ.ಟಿ.ಪರಮೇಶ್ವರ್ ನಾಯ್ಕೆ 42 ಲಕ್ಷ ರೂ.ಹಣ ಪಡೆದಿದ್ದಾರೆ ಎಂದು ಆರೋಪ ಸಂಬಂಧದ ಮಾಧ್ಯಮ ವರದಿ ಉಲ್ಲೇಖಿಸಿದರು. ಈ ಸಂಬಂಧ ಎಸಿಬಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಹೀಗಾಗಿ ಕೆಲಕಾಲ ಆಡಳಿತ ಮತ್ತು ವಿಪಕ್ಷ ಸದಸ್ಯರ ಮಧ್ಯೆ ಏರುಧ್ವನಿಯಲ್ಲಿ ಆರೋಪ-ಪ್ರತ್ಯಾರೋಪ, ತೀವ್ರ ವಾಗ್ವಾದ ನಡೆಯಿತು. ಈ ಮಧ್ಯೆ ಪ್ರತಿಕ್ರಿಯಿಸಿದ ಪರಮೇಶ್ವರ್ ನಾಯ್ಕಿ ‘ನಿಮಗೆ ನಾಚಿಕೆಯಾಗಬೇಕು’ ಎಂದು ವಿಪಕ್ಷ ಸದಸ್ಯರನ್ನು ಕೆರಳಿಸಿದರು.

ಈ ಹಂತದಲ್ಲಿ ಎದ್ದುನಿಂತ ವಿಶ್ವೇಶ್ವರ ಹೆಗಡೆ ಕಾಗೇರಿ, ಪರಮೇಶ್ವರ ನಾಯ್ಕ ಸದನದಲ್ಲೇ ಹೀಗೆ ವರ್ತಿಸುತ್ತಿದ್ದು, ಬಳ್ಳಾರಿಯಲ್ಲಿ ಏನೆಲ್ಲ ಮಾಡಿರಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ‘ನಿಮ್ಮಂಥ ವ್ಯಕ್ತಿಗಳಿಂದ ಹೇಗೆ ನಡೆದುಕೊಳ್ಳಬೇಕೆಂದು ತಾನು ಪಾಠ ಕಲಿಯಬೇಕಿಲ್ಲ. ನಿಮ್ಮ ಆಡಳಿತಾವಧಿಯಲ್ಲಿ ಏನೆಲ್ಲ ಮಾಡಿದ್ದೀರಿ ಎಂಬುದು ರಾಜ್ಯದ ಜನಕ್ಕೆ ಗೊತ್ತಿದೆ’ ಎಂದು ವಾಗ್ದಾಳಿ ಮುಂದುವರಿಸಿದರು.ಈ ವೇಳೆ ಮಧ್ಯಪ್ರವೇಶಿಸಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಅನುಪಮಾ ಶೆಣೈ ಆರೇಳು ತಿಂಗಳಿನಿಂದ ಹೇಳಿಕೆ ಮೇಲೆ ಹೇಳಿಕೆ ನೀಡುತ್ತಿದ್ದು, ಎಸಿಬಿಗೆ ದೂರು ನೀಡಿದ್ದು ತನಿಖೆ ನಡೆಯುತ್ತಿದೆ. ತನಿಖೆ ವರದಿ ಬರಲಿ, ವರದಿ ಬಂದ ಮೇಲೆ ಈ ವಿಚಾರ ಪ್ರಸ್ತಾಪ ಮಾಡಬಹುದಿತ್ತು ಎನ್ನುವ ಮೂಲಕ ಕಾವೇರಿದ ವಾತಾವರಣ ತಿಳಿಯಾಗಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News