ಬುರ್ಖಾ ವಿವಾದ: ಸಮಸ್ಯೆ ಇತ್ಯರ್ಥ ಪಡಿಸುವಂತೆ ಎಸ್ಸೆಸ್ಸೆಫ್ ಆಗ್ರಹ
ಗಂಗಾವತಿ,ಫೆ.10: ಶಿವಮೊಗ್ಗದ ಖಾಸಗಿ ಕಾಲೇಜೊಂದರಲ್ಲಿ ಉಂಟಾಗಿರುವ ಬುರ್ಖಾ ವಿವಾದದ ಹಿಂದೆ ಕಾರ್ಯಪ್ರವೃತ್ತರಾಗಿರುವ ಕೋಮುಶಕ್ತಿಗಳ ವಿರುದ್ಧ ಕ್ರಮ ಕೈಗೊಂಡು ಸಮಸ್ಯೆಯನ್ನು ಇತ್ಯರ್ಥಪಡಿಸಬೇಕೆಂದು ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಆಗ್ರಹಿಸಿದೆ.
ಗಂಗಾವತಿಯಲ್ಲಿ ನಡೆದ ಎಸ್ಸೆಸ್ಸೆಫ್ ರಾಜ್ಯ ಸೆಕ್ರಟರಿಯೇಟ್ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಶಾಫಿ ಸಅದಿ ನಿರ್ಣಯವನ್ನು ಪ್ರಕಟಿಸಿದರು.
ಬುರ್ಖಾ ಮತ್ತು ಸ್ಕಾರ್ಫ್ ಧರಿಸುವುದು ಮುಸ್ಲಿಂ ಮಹಿಳೆಯರ ಧಾರ್ಮಿಕ ನಂಬಿಕೆಯ ಭಾಗವಾಗಿದೆ. ಪ್ರತಿಯೊಬ್ಬನಿಗೂ ಅವನವರ ಧರ್ಮದಂತೆ ಬದುಕಲು ಅವಕಾಶವನ್ನು ಸಂವಿಧಾನವೇ ಕೊಟ್ಟಿರುವಾಗ ಅದನ್ನು ತಡೆಯುವ ಕೆಲಸ ಮಾಡುವವರು ದೇಶದ್ರೋಹಿಗಳಾಗಿದ್ದಾರೆ. ಅವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು.
ಮುಸ್ಲಿಂ ಮಹಿಳೆಯರ ಶೈಕ್ಷಣಿಕ ಅಭಿವೃದ್ಧಿಗಾಗಿ ಸರಕಾರ ಮುಂದಿನ ಬಜೆಟ್ ನಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿ. ಧಾರ್ಮಿಕ ನಂಬಿಕೆಗೆ ತೊಡಕಾಗದೇ ಮುಸ್ಲಿಂ ಮಹಿಳೆಯರು ಶಿಕ್ಷಣ ಪಡೆಯುವಂತಾಗಲು ಧಾರ್ಮಿಕ ಅಲ್ಪಸಂಖ್ಯಾತ ಮಹಿಳೆಯರು ಎಂಬ ಪರಿಗಣನೆಯೊಂದಿಗೆ ಪ್ರತ್ಯೇಕ ಮಹಿಳಾ ಕಾಲೇಜ್ ಗಳನ್ನು ಸರಕಾರವೇ ಸ್ಥಾಪಿಸಲಿ ಎಂದು ಸಭೆಯು ಸರಕಾರವನ್ನು ಆಗ್ರಹಿಸಿತು. ಬುರ್ಖಾ ಧರಿಸುವುದು ಯಾರೊಂದಿಗೂ ಸೇಡು ತೀರಿಸುವುದಕ್ಕಲ್ಲ. ಅದು ಧಾರ್ಮಿಕ ನಂಬಿಕೆ.
ಕೇಸರಿ ಶಾಲು ಹೆಗಲಿಗೆ ಹಾಕುವುದು ಹಿಂದೂ ಧರ್ಮೀಯರ ಧಾರ್ಮಿಕ ನಂಬಿಕೆಯ ಭಾಗವಾಗಿದ್ದರೆ ಅದಕ್ಕೆ ಅಕ್ಷೇಪ ಇಲ್ಲ. ಆದರೆ ವಿವಾದಕ್ಕಾಗಿಯೇ ಶಾಲುಗಳನ್ನು ಕಾಲೇಜಿನೊಳಗೆ ತರುವುದು ಅಕ್ಷಮ್ಯ ಎಂದು ಸಭೆ ಅಭಿಪ್ರಾಯಪಟ್ಟಿತು.