ಕಂಬಳ, ಹೋರಿ ಓಟ ಸ್ಪರ್ಧೆಗೆ ಇನ್ನು ಕಾನೂನಿನ ಅಭಯ
ಬೆಂಗಳೂರು, ಫೆ. 10: ‘ಕಂಬಳ, ಹೋರಿಗಳ ಓಟ ಅಥವಾ ಎತ್ತಿನಗಾಡಿ ಓಟ ಸ್ಪರ್ಧೆ’ಗೆ ಅವಕಾಶ ಕಲ್ಪಿಸುವ ಮಹತ್ವದ ‘ಪ್ರಾಣಿಗಳಿಗೆ ಹಿಂಸಾಚಾರ ಮಾಡುವುದನ್ನು ತಡೆಗಟ್ಟುವ (ಕರ್ನಾಟಕ ತಿದ್ದುಪಡಿ)ವಿಧೇಯಕ-2017’ನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಲಾಯಿತು.
ಶುಕ್ರವಾರ ವಿಧಾನಸಭೆ ಅಧಿಕೃತ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಕೆ.ಬಿ. ಕೋಳಿವಾಡ ಅವರು ವಿಧೇಯಕ ಮಂಡನೆಗೆ ಅವಕಾಶ ಕಲ್ಪಿಸಿದರು. ಪಶು ಸಂಗೋಪನಾ ಸಚಿವ ಎ.ಮಂಜು ವಿಧೇಯಕ ಮಂಡಿಸಿ, ಕಂಬಳ ಮತ್ತು ಹೋರಿ ಓಟದ ಮಹತ್ವವನ್ನು ವಿವರಿಸಿದರು.
ಪ್ರಾಣಿ ಹಿಂಸೆ ತಡೆಗಟ್ಟುವ (ಕರ್ನಾಟಕ ತಿದ್ದುಪಡಿ 2017 ವಿಧೇಯಕ) ಕಾಯ್ದೆ 1968ರಲ್ಲಿ ಜಾರಿಯಾಗಿತ್ತು. ಕಂಬಳ ಮತ್ತು ಹೋರಿಗಳ ಓಟ ಅಥವಾ ಎತ್ತಿನಗಾಡಿ ಓಟದ ಸ್ಪರ್ಧೆ ರಾಜ್ಯದ ಸಂಪ್ರದಾಯ, ಸಂಸ್ಕೃತಿ ಸಂರಕ್ಷಿಸಲು ಮತ್ತು ಉತ್ತೇಜಿಸಲು ಅವುಗಳಿಗೆ ಮಾನ್ಯತೆ ನೀಡುವ ದೃಷ್ಟಿಯಿಂದ 28ನೆ ಅಧಿನಿಯಮವನ್ನು ಸೇರಿಸಲಾಗಿದೆ ಎಂದರು.
ಕಂಬಳ, ಹೋರಿ ಓಟ, ಎತ್ತಿನ ಓಟದ ಸ್ಪಧೆಯ ಗಣನೀಯ ಪಾತ್ರವನ್ನು ಪರಿಗಣಿಸಿ ಹಾಗೂ ದೇಶಿ ಜಾನುವಾರು ತಳಿಗಳನ್ನು ಉಳಿಸಿಕೊಳ್ಳಬೇಕು, ಬೆಳೆಸುವುದನ್ನು ಖಚಿತಪಡಿಸಿಕೊಳ್ಳಲು ಕಂಬಳ, ಹೋರಿ ಓಟ ಅಥವಾ ಎತ್ತಿನಗಾಡಿ ಓಟದ ಸ್ಪರ್ಧೆಗೆ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ವಿವರ ನೀಡಿದರು.
1968ಕ್ಕೂ ಹಿಂದೆ ಪ್ರಾಣಿಗಳಿಗೆ ಅನಗತ್ಯ ತೊಂದರೆ ನೀಡದಿರಲು ಜಾರಿಗೆ ತರಲಾಗಿದ್ದ ಈ ಅಧಿನಿಯಮಕ್ಕೆ ಅನ್ವಯಿಸುವಂತೆ ವಿನಾಯಿತಿ ಅವಶ್ಯಕ ಎಂಬುದನ್ನು ಗುರುತಿಸಿ ಈ ಮಸೂದೆ ಮಂಡಿಸಿದ್ದು, ಸದನ ಅಂಗೀಕಾರ ನೀಡಬೇಕೆಂದು ಎ.ಮಂಜು ಸದಸ್ಯರಲ್ಲಿ ಮನವಿ ಮಾಡಿದರು.