×
Ad

ರೌಡಿ ಶೀಟರ್ ಬಚ್ಚಾನ ಹತ್ಯೆ ಪ್ರಕರಣ: 10 ಜನರ ಬಂಧನ

Update: 2017-02-11 19:04 IST

ಶಿವಮೊಗ್ಗ, ಫೆ. 11: ಇತ್ತೀಚೆಗೆ ಅಣ್ಣಾನಗರ ಬಡಾವಣೆ 4ನೆ ತಿರುವಿನಲ್ಲಿ ನಡೆದ ರೌಡಿ ಶೀಟರ್ ಅಯಾತ್ ಯಾನೆ ಬಚ್ಚಾನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಗಳಲ್ಲಿ 10 ಜನರನ್ನು ಬಂಧಿಸುವಲ್ಲಿ ದೊಡ್ಡಪೇಟೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಟಿಪ್ಪುನಗರ ಬಡಾವಣೆಯ ಖುರ್ರಂ(30)ನನ್ನು ಈಗಾಗಲೇ ಬಂಧಿಸಿದ್ದ ಪೊಲೀಸರು, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಉಳಿದಂತೆ ಫೆ.10 ರಂದು ನಗರದ ವಿವಿಧೆಡೆ ಉಳಿದ ಆರೋಪಿಗಳಾದ ಟಿಪ್ಪುನಗರ ಬಡಾವಣೆ ನಿವಾಸಿಗಳಾದ ಕೀಲಿ ಇಮ್ರಾನ್(30), ಅರ್ಬಾಸ್(19), ಮಿಳಘಟ್ಟದ ಶಾರೂಖ್ ಖಾನ್(19), ಕಾಲೇಜ್‌ವೊಂದರ ವಿದ್ಯಾರ್ಥಿಯಾದ ಶಾದಾಬ್(19), ಟ್ಯಾಂಕ್ ಮೊಹಲ್ಲಾ ಬಡಾವಣೆಯ ನಿವಾಸಿಗಳಾದ ಅಲ್ಯಾಜ್ ಅಶು (19), ಮುಹಮ್ಮದ್ ಸುಹೇಲ್ (19), ಬಾಪೂಜಿ ನಗರದ ಎಂ.ಡಿ.ಜೈದಾನ್ (19), ಮಿಳಘಟ್ಟದ ಅಸಾದ್‌ವುಲ್ಲಾಖಾನ್ (19) ಹಾಗೂ ಅಣ್ಣಾ ನಗರದ ಇರ್ಫಾನ್ (27) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.

ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಶನಿವಾರ ನಗರದ ಡಿ.ಎ.ಆರ್. ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆಯವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಬಂಧಿತರ ವಿವರ ನೀಡಿದರು.

ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಪ್ರಸ್ತುತ ತಲೆಮರೆಸಿಕೊಂಡಿದ್ದಾರೆ. ಇವರ ಬಂಧನಕ್ಕೆ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

 ಪ್ರಕರಣದ ಆರೋಪಿಗಳ ಪತ್ತೆಗೆ ದೊಡ್ಡಪೇಟೆ ಇನ್‌ಸ್ಪೆಕ್ಟರ್ ಕೆ.ಟಿ.ಗುರುರಾಜ್ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತ್ತು. ಈ ತಂಡದಲ್ಲಿದ್ದ ಸಬ್ ಇನ್‌ಸ್ಪೆಕ್ಟರ್ ಗಳಾದ ಅಭಯ್‌ಪ್ರಕಾಶ್ ಸೋಮನಾಳ್, ಅನಿತಾಕುಮಾರಿ ಮತ್ತವರ ಸಿಬ್ಬಂದಿಯಾದ ಎಎಸ್‌ಐ ಜಯಶೀಲ, ಶೇಖರ್, ಮಂಜುನಾಥ್, ಕಿರಣ್‌ಮೊರೆ, ಚಂದ್ರಶೇಖರ, ವಿಜಯ, ಪ್ರಸನ್ನ, ಫಾರೂಕ್, ಉಮೇಶ್, ಪ್ರದೀಪ್, ತಿಪ್ಪಣ್ಣರವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಬಚ್ಚಾನ ಹತ್ಯೆ ನಡೆದಿದೆ. ಬಂಧಿತ ಆರೋಪಿಗಳಾದ ಕೀಲಿ ಇಮ್ರಾನ್, ಮೋಟು ಖುರ್ರಂ ಹಾಗೂ ಬಚ್ಚಾ ಮತ್ತವರ ಕೆಲ ಕುಟುಂಬ ಸದಸ್ಯರ ನಡುವೆ ಗಲಾಟೆಯಾಗಿತ್ತು. ಈ ಕುರಿತಂತೆ ನಾಲ್ಕು ಪ್ರಕರಣಗಳು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದವು. ಪೊಲೀಸರು ಬಚ್ಚಾ ಹಾಗೂ ಕೀಲಿ ಇಮ್ರಾನ್, ಮೋಟು ಖುರ್ರಂ ಸೇರಿದಂತೆ ಅವರ ಸಹಚರರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ಇದರಲ್ಲಿ ಇತ್ತೀಚೆಗಷ್ಟೆ ಬಚ್ಚಾ, ಕೀಲಿ ಇಮ್ರಾನ್, ಮೋಟು ಖುರ್ರಂರವರು ನ್ಯಾಯಾಲಯದಿಂದ ಜಾಮೀನು ಪಡೆದು ಜೈಲ್‌ನಿಂದ ಹೊರಬಂದಿದ್ದರು. ಬಚ್ಚಾನ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ಕೀಲಿ ಇಮ್ರಾನ್ ಹಾಗೂ ಮೋಟು ಖುರ್ರಂನು ಇತರ ಸಹಚರರೊಂದಿಗೆ ಸೇರಿಕೊಂಡು ಫೆ.8ರಂದು ಸಂಜೆ ಅಣ್ಣಾನಗರ ಬಡಾವಣೆಯಲ್ಲಿ ಸಾರ್ವಜನಿಕರ ಎದುರಿನಲ್ಲಿಯೇ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿ ತಲೆ ಮರೆಸಿಕೊಂಡಿದ್ದರು. ಈ ಕುರಿತಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಪ್ಪನಂತೆ ಕೊಲೆಗೀಡಾದ ಮಗ

  ಕೊಲೆಗೀಡಾದ ರೌಡಿ ಅಯಾತ್ ಯಾನೆ ಬಚ್ಚಾನ ತಂದೆ ನಸ್ರು ಕೂಡ ರೌಡಿ ಆಸಾಮಿಯಾಗಿದ್ದ. 1998ನೆ ಇಸವಿಯಲ್ಲಿ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೈಪಾಸ್ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿತ್ತು. ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಡಿ ಬಶೀರ್, ಖಲೀಂ ಯಾನೆ ಸ್ಯಾಂಡಲ್ ಖಲೀಂ, ನ್ಯಾಮತ್, ಅಮಾನ್ ಹಾಗೂ ಇತರ 22 ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದರು.

ಇತ್ತೀಚೆಗೆ ಬಚ್ಚಾ, ನಸ್ರುವಿನ ಮೊದಲ ಹೆಂಡತಿ ಮಗ ಅಝರ್, ಅಕ್ಕನ ಮಗ ಮೋಹಿನ್ ಮತ್ತವರ ಸಹಚರರು ಅ.14, 2016ರಂದು ದಾಡಿ ಬಶೀರ್‌ಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈ ಮೂವರು ಆರೋಪಿಗಳ ಸಮೇತ ಒಟ್ಟಾರೆ 21 ಜನರನ್ನು ಬಂಧಿಸಿದ್ದರು. ಸುಮಾರು 20 ದಿನಗಳ ಹಿಂದೆ ನ್ಯಾಯಾಲಯದಿಂದ ಜಾಮೀನಿನ್ನು ಪಡೆದು ಬಚ್ಚಾ ಕಾರಾಗೃಹದಿಂದ ಹೊರಬಂದಿದ್ದ. ಆದರೆ ತನ್ನ ತಂದೆಯ ರೀತಿಯಲ್ಲೇ ಕೊಲೆಗೀಡಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ.

 ಗೂಂಡಾ ಕಾಯ್ದೆಯಡಿ ಬಂಧಿತನಾಗಿದ್ದ ಕೀಲಿ ಇಮ್ರಾನ್

 ರೌಡಿ ಬಚ್ಚಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಕೀಲಿ ಇಮ್ರಾನ್ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 14 ಪ್ರಕರಣಗಳು ದಾಖಲಾಗಿವೆ. 2016ರಲ್ಲಿ ಈತನ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಿ ಬಂಧಿಸಲಾಗಿತ್ತು. ನಂತರ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದ.

ನಂತರ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಪ್ರಕರಣವೊಂದರಲ್ಲಿ ಪೊಲೀಸರಿಂದ ಬಂಧಿತನಾಗಿ ಜೈಲು ಸೇರಿದ್ದ ಆರೋಪಿಯು ಇತ್ತೀಚೆಗಷ್ಟೆ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದ. ಇದೀಗ ಬಚ್ಚಾನ ಹತ್ಯೆ ಪ್ರಕರಣದಲ್ಲಿ ಮತ್ತೆ ಭಾಗಿಯಾಗಿ ಮತ್ತೆ ಜೈಲು ಪಾಲಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News