×
Ad

ಭೂಗತ ಪಾತಕಿ ಹೆಬ್ಬೆಟ್ಟು ಮಂಜನಿಗಾಗಿ ಶೋಧ

Update: 2017-02-11 19:06 IST

ಶಿವಮೊಗ್ಗ, ಫೆ. 11: ಇತ್ತೀಚೆಗೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಮಂಡಗದ್ದೆ ಸಮೀಪದ ಲಿಂಗಾಪುರದ ತೋಟವೊಂದರಲ್ಲಿ ರಿವಾಲ್ವಾರ್-ಗುಂಡುಗಳ ಸಮೇತ ಪೊಲೀಸರಿಗೆ ಸಿಕಿಬಿದಿದ್ದ ಕುಖ್ಯಾತ ಭೂಗತ ಪಾತಕಿ ಹೆಬ್ಬೆಟ್ಟು ಮಂಜನ ಇಬ್ಬರು ಸಹಚರರನ್ನು ಬೆಂಗಳೂರು ಪೊಲೀಸರು ವಿಚಾರಣೆ ನಡೆಸಿ, ಮಾಹಿತಿ ಕಲೆ ಹಾಕಿದ್ದಾರೆನ್ನಲಾಗಿದೆ.

ಮೂಲತಃ ಶಿವಮೊಗ್ಗದವನಾದ ಪ್ರಸ್ತುತ ಕೇರಳದ ಮಲಪುರಂ ಜಿಲ್ಲೆಯ ಅದಮಹಲ್ ಎಂಬ ಪ್ರದೇಶದಲ್ಲಿ ನೆಲೆಸಿರುವ, ಹೆಬ್ಬೆಟ್ಟು ಮಂಜನ ಬಾಲ್ಯ ಸ್ನೇಹಿತ ಅಶ್ರಫ್(37) ಹಾಗೂ ಈತನ ಸ್ನೇಹಿತ ಶಿವಮೊಗ್ಗ ನಗರದ ಆರ್‌ಎಂಎಲ್ ನಗರ 2ನೆ ಹಂತದ ನಿವಾಸಿ, ಟೈರ್ ವ್ಯಾಪಾರಿ ನದೀಂ(42) ಎಂಬಾತನನ್ನು ಶಿವಮೊಗ್ಗ ಅಪರಾಧ ಪತ್ತೆ ದಳ (ಡಿ.ಸಿ.ಬಿ.) ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು.

ಅವರ ಬಳಿಯಿದ್ದ 9 ಎಂ.ಎಂ. ಮಾದರಿಯ 3 ಪಿಸ್ತೂಲ್, 7.62 ಎಂ.ಎಂ.ನ 1 ಪಿಸ್ತೂಲ್, 9 ಎಂ.ಎಂ. ಪಿಸ್ತೂಲ್‌ಗೆ ಬಳಸುವ 38 ಹಾಗೂ 7.62 ಎಂ. ಎಂ. ಪಿಸ್ತೂಲ್‌ಗೆ ಬಳಕೆ ಮಾಡುವ 10 ಜೀವಂತ ಗುಂಡುಗಳು, 1 ಖಾಲಿ ಮ್ಯಾಗಜಿನ್ ಹಾಗೂ ಮಾರುತಿ ರಿಟ್ಝ್ ಕಾರನ್ನು ವಶಕ್ಕೆ ಪಡೆದುಕೊಂಡಿದ್ದರು. ಆರೋಪಿಗಳ ವಿರುದ್ಧ ತೀರ್ಥಹಳ್ಳಿಯ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದರು.

ವಿಚಾರಣೆ: ಮೋಸ್ಟ್ ವಾಟೆಂಡ್ ಪಾತಕಿಗಳ ಪಟ್ಟಿಯಲ್ಲಿರುವ ಹೆಬ್ಬೆಟ್ಟು ಮಂಜನು ಪ್ರಸ್ತುತ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. ಈತ ಸಿಂಗಾಪುರದಲ್ಲಿ ನೆಲೆಸಿದ್ದಾನೆ ಎಂಬ ಮಾಹಿತಿಗಳಿವೆ. ಈತನ ಬಂಧನಕ್ಕೆ ಈಗಾಗಲೇ ಬೆಂಗಳೂರು ಪೊಲೀಸರು ರೆಡ್ ಕಾರ್ನರ್ ನೋಟೀಸ್ ಜಾರಿಗೊಳಿಸಿದ್ದಾರೆ. ಈ ನಡುವೆ ವಿದೇಶದಲ್ಲಿಯೇ ಕುಳಿತು ಆತ ಬೆಂಗಳೂರಿನ ರೌಡಿ ಕೊರಂಗು ಕೃಷ್ಣನ ಹತ್ಯೆ ನಡೆಸಲು ಸಂಚು ರೂಪಿಸಿದ್ದ ವಿಷಯ ಶಿವಮೊಗ್ಗ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿತ್ತು.

ಈ ವಿಷಯ ಅರಿತ ಬೆಂಗಳೂರು ಪೊಲೀಸ್ ತಂಡವು ಇತ್ತೀಚೆಗೆ ಶಿವಮೊಗ್ಗಕ್ಕೆ ಆಗಮಿಸಿ ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿ, ಹೆಬ್ಬೆಟ್ಟು ಮಂಜನ ಚಲನವಲನಗಳ ಬಗ್ಗೆ ಹಾಗೂ ಬೆಂಗಳೂರಿನಲ್ಲಿ ಆತ ಹೊಂದಿರುವ ಸಹಚರರ ಸಂಪರ್ಕ ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಮಾಹಿತಿ ಕಲೆ ಹಾಕಿದೆ ಎಂದು ತಿಳಿದುಬಂದಿದೆ.

ಶೋಧ: ಪ್ರಸ್ತುತ ಮಾಳೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಬ್ಬೆಟ್ಟು ಮಂಜ ಸೇರಿದಂತೆ ಶಿವಮೊಗ್ಗ, ಬೆಂಗಳೂರು, ಮಂಗಳೂರು, ಒರಿಸ್ಸಾದ ಬೆಹರಾಮ್‌ಪುರದ ತಲಾ ಓರ್ವರ ವಿರುದ್ಧ ದೂರು ದಾಖಲಾಗಿದೆ. ಇವರೆಲ್ಲರೂ ತಲೆಮರೆಸಿಕೊಂಡಿದ್ದು, ಇವರ ಬಂಧನಕ್ಕೆ ಡಿ.ಸಿ.ಬಿ. ಪೊಲೀಸ್ ತಂಡ ತೀವ್ರ ಕಾರ್ಯಾಚರಣೆ ನಡೆಸುತ್ತಿದೆ.

 ಮಾಹಿತಿ ಕಲೆ ಹಾಕುತ್ತಿದ್ದಾರೆ: ಎಸ್ಪಿ ಅಭಿನವ್ ಖರೆ

  ಇತ್ತೀಚೆಗೆ ಬಂಧಿಸಲಾದ ಹೆಬ್ಬೆಟ್ಟು ಮಂಜನ ಸಹಚರರನ್ನು ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಹೆಬ್ಬೆಟ್ಟು ಮಂಜನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆಗಮಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆಯವರು ಶನಿವಾರ ಶಿವಮೊಗ್ಗ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News