×
Ad

ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪಠ್ಯಪುಸ್ತಕ ಮಾರುಕಟ್ಟೆಗೆ: ತನ್ವೀರ್ ಸೇಠ್

Update: 2017-02-11 20:26 IST

ಬೆಂಗಳೂರು, ಫೆ.11: ಮುಂದಿನ ಶೈಕ್ಷಣಿಕ ವರ್ಷದಿಂದಲೇ ಮಾರುಕಟ್ಟೆಯಲ್ಲಿ ಪಠ್ಯ ಪುಸ್ತಕ ಲಭ್ಯವಾಗುವ ವ್ಯವಸ್ಥೆ, ಆನ್‌ಲೈನ್‌ನಲ್ಲಿ ಪಠ್ಯ ಕ್ರಮ ಅಳವಡಿಕೆ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ದುಬಾರಿ ಬೆಲೆಗೆ ಪುಸ್ತಕ ಮಾರಾಟ ನಿಯಂತ್ರಣಕ್ಕೆ ಎಂಆರ್‌ಪಿ ದರ ನಿಗದಿ ಸೇರಿದಂತೆ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.

ಶನಿವಾರ ರಾಜಾಜಿನಗರದ ಖಾಸಗಿ ಹೊಟೇಲ್‌ನಲ್ಲಿ ಕರ್ನಾಟಕ ಪ್ರಕಾಶಕರ ಮತ್ತು ಪುಸ್ತಕ ವ್ಯಾಪಾರಿಗಳ ಸಂಘ ಆಯೋಜಿಸಿದ್ದ ಅಭಿನಂದನೆಯನ್ನು ಸ್ವೀಕರಿಸಿ ಅವರು ಮಾತನಾಡಿದರು.

ಇಂದಿನ ಶಿಕ್ಷಣ ವ್ಯವಸ್ಥೆ ಹೀನಾಯ ಹಂತ ತಲುಪಿದೆ. ಪಠ್ಯದ ಬದಲು ಶಿಕ್ಷಣವೇ ಮಾರಾಟವಾಗುವ ಹಂತ ತಲುಪಿದೆ. ಸರಕಾರ ಪ್ರತೀ ವರ್ಷ ಮೂರೂವರೆ ಕೋಟಿ ಪಠ್ಯ ಪುಸ್ತಕ ಮುದ್ರಿಸಿ ವಿತರಣೆ ಮಾಡುತ್ತಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲಿನ ಹಿಡಿತ ತಪ್ಪಿದೆ. ಇಂತಹ ಸನ್ನಿವೇಶದಿಂದ ಶಿಕ್ಷಣ ವ್ಯವಸ್ಥೆಯನ್ನು ಸರಿದಾರಿಗೆ ತರಲು ನಮ್ಮ ಇಲಾಖೆ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.

ಕೇವಲ 280 ರೂ.ಗೆ ಸಿಗಬೇಕಾದ ಪಠ್ಯ ಪುಸ್ತಕಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಯವರು 2 ರಿಂದ 3 ಸಾವಿರದವರೆಗೆ ಮಾರಾಟ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಲು ಖಾಸಗಿ ವ್ಯಾಪಾರಿಗಳೇ ಪಠ್ಯಪುಸ್ತಕವನ್ನು ಮಾರುಕಟ್ಟೆಯಲ್ಲಿ ಮಾರಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಿ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ಸ್ಪಷ್ಟ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

      ಪ್ರಥಮ ಮತ್ತು ದ್ವಿತೀಯ ಪಿಯುಸಿ ಪಠ್ಯ ಪುಸ್ತಕ ಮುದ್ರಣ ಮಾಡುವವರಿಗೆ ರಾಯಲ್ಟಿ ವಿಧಿಸುವುದು ಸರಿಯಲ್ಲ. ಪಠ್ಯ ಪುಸ್ತಕಗಳನ್ನು ಸರಕಾರವೇ ಮುದ್ರಿಸಬೇಕೇ ಅಥವಾ ಪ್ರಕಾಶಕರಿಗೆ ನೀಡಬೇಕೇ ಎಂಬ ಬಗ್ಗೆ ತೀರ್ಮಾನ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು.

       ಕರ್ನಾಟಕ ಶಿಕ್ಷಣ ನೀತಿಯಡಿ ಮಕ್ಕಳ ಜ್ಞಾನಾಭಿವೃದ್ಧಿ ಮಾಡಲು ಕಾಲಕಾಲಕ್ಕೆ ಪುಸ್ತಕ ಪರಿಷ್ಕರಣೆ ಮಾಡುವುದು ಅವಶ್ಯ. ವಿಜ್ಞಾನ, ಇತಿಹಾಸ, ಗಣಿತ ಪಠ್ಯಗಳಲ್ಲೂ ರಾಜ್ಯದ ಉಲ್ಲೇಖವಿರಬೇಕು. ಭಾಷೆ ವಿಷಯದಲ್ಲಿ ಆಯಾ ರಾಜ್ಯಗಳ ಸಾಹಿತಿಗಳು ಮತ್ತು ರಾಜ್ಯಕ್ಕೆ ಕೊಡುಗೆ ನೀಡಿದವರ ಉಲ್ಲೇಖವಿರುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

 ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ದುಬಾರಿ ಬೆಲೆಗೆ ಪಠ್ಯಪುಸ್ತಕ ಮಾರಾಟ ಮಾಡುವುದನ್ನು ತಪ್ಪಿಸಲು ಪುಸ್ತಕದ ಮೇಲೆ ಎಂಆರ್‌ಪಿ ದರ ಪ್ರಕಟಿಸಿದರೆ ಜನ ಮೋಸ ಹೋಗಲ್ಲ. ಇದರ ಜತೆಗೆ ಪಠ್ಯಪುಸ್ತಕಗಳ ಮೇಲೆ ಆಯಾ ವರ್ಷವನ್ನು ಮುದ್ರಿಸುವುದನ್ನು ಕೈ ಬಿಡಲಾಗುವುದು ಎಂದು ಹೇಳಿದರು.

 ಒಟ್ಟಾರೆ ಮಕ್ಕಳಿಗೆ ಯಾವುದೇ ತೊಂದರೆಯಿಲ್ಲದಂತೆ ಪಠ್ಯ ಪುಸ್ತಕ ಸಿಗುವಂತೆ ಶಿಕ್ಷಣ ಇಲಾಖೆಯಿಂದ ಎಲ್ಲ ವ್ಯವಸ್ಥೆ ಮಾಡುವುದರ ಜೊತೆಗೆ ಸಂಘದ ಪದಾಧಿಕಾರಿಗಳ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಹೇಳಿದರು.

 ಕಾರ್ಯಕ್ರಮದಲ್ಲಿ ಅಭಿಮಾನಿ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಟಿ.ವೆಂಕಟೇಶ್, ಕರ್ನಾಟಕ ಪ್ರಕಾಶಕರ ಮತ್ತು ಪುಸ್ತಕ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎ.ರಮೇಶ್, ಕಾರ್ಯದರ್ಶಿ ಪ್ರದೀಪ್, ಜಿಯಾಉದ್ದೀನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News