×
Ad

ಅಪಘಾತ: ಓರ್ವ ಸಾವು; ಇಬ್ಬರಿಗೆ ಗಾಯ

Update: 2017-02-11 22:44 IST


ಚನ್ನಗಿರಿ, ಫೆ.11: ಸಿಲಿಂಡರ್ ತುಂಬಿದ್ದ ಲಾರಿಯೊಂದು ಚಾಲಕನ ನಿರ್ಲಕ್ಷ್ಯದಿಂದಾಗಿ ಮರಕ್ಕೆ ಢಿಕ್ಕಿ ಹೊಡೆದ್ದು, ಲಾರಿಯಲ್ಲಿದ್ದ ಸಿಲಿಂಡರ್‌ಗಳು ಉರುಳಿ ದಾರಿಹೋಕರ ಮೈಮೇಲೆ ಬಿದ್ದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಇಬ್ಬರು ಬಾಲಕಿಯರಿಗೆ ಗಂಭೀರ ಗಾಯಗಳಾದ ಘಟನೆ ತಾಲೂಕಿನ ಗಾಣದಕಟ್ಟೆ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ.
ಮೃತನನ್ನು ತಾಲೂಕಿನ ವಡ್ನಾಳ್ ಗ್ರಾಮದ ಬಸವರಾಜ್(45) ಎಂದು ಗುರುತಿಸಲಾಗಿದೆ. ಜೋಳದಾಳ್ ಗ್ರಾಮದ 9ನೆ ತರಗತಿಯ ವಿದ್ಯಾರ್ಥಿಗಳಾದ ಕವನಾ ಹಾಗೂ ಅಕ್ಷತಾ ಗಂಭೀರವಾಗಿ ಗಾಯಗೊಂಡ ಬಾಲಕಿಯರು.
ಭದ್ರಾವತಿಯಿಂದ ಚಿತ್ರದುರ್ಗದ ಕಡೆಗೆ ಸಿಲಿಂಡರ್ ತುಂಬಿದ ಲಾರಿ ಸಾಗುತ್ತಿತ್ತು. ಈ ವೇಳೆ ಚಾಲಕನ ಅಜಾಗರೂಕತೆಯಿಂದಾಗಿ ಲಾರಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬಸವರಾಜ್ ಹಾಗೂ ಗ್ರಾಮದ ಮಕ್ಕಳು ರಸ್ತೆ ಪಕ್ಕ ನಡೆದು ಹೋಗುತ್ತಿದ್ದಾಗ ಸಿಲಿಂಡರ್‌ಗಳು ಮೈಮೇಲೆ ಬಿದ್ದಿವೆ ಎನ್ನಲಾಗಿದೆ.
ಘಟನೆಯಲ್ಲಿ ಬಸವರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡ ವಿದ್ಯಾರ್ಥಿನಿಯರಿಗೆ ಪ್ರಥಮ ಚಿಕಿತ್ಸೆ ನೀಡಿ ನಂತರ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಚಾಲಕ ಹಾಗೂ ಕ್ಲೀನರ್ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಚನ್ನಗಿರಿ ಪಿಎಸ್ಸೈ ವೀರಬಸಪ್ಪಕುಸಲಾಪುರ, ಸಿಪಿಐ ಆರ್. ಆರ್. ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News