ಗುಂಡ್ಲುಪೇಟೆ ಮರು ಚುನಾವಣೆಗೆ ಗೀತಾ ಮಹದೇವ ಪ್ರಸಾದ್ ರವರೇ ಕಾಂಗ್ರೆಸ್ ಅಭ್ಯರ್ಥಿ: ಸಿದ್ದರಾಮಯ್ಯ
ಬಿಜಾಪುರ, ಫೆ.12: ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರದ ಮರು ಚುನಾವಣೆಗೆ ಗೀತಾ ಮಹದೇವ ಪ್ರಸಾದ್ ಅವರೇ ಕಾಂಗ್ರೆಸ್ ಅಭ್ಯರ್ಥಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಮಹದೇವ ಪ್ರಸಾದ್ ಅವರ ಹುಟ್ಟೂರು ಹಾಲಹಳ್ಳಿಯಲ್ಲಿ ಆಯೋಜಿಸಿದ್ದ ಮಹಾಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಮಹದೇವ ಪ್ರಸಾದ್ ಅವರ ನಿಧನ ಅನಿರೀಕ್ಷಿತ. ಚಿಕ್ಕ ವಯಸ್ಸಿನಲ್ಲೇ ಅವರು ಅಪಾರ ಜನ ಬೆಂಬಲ ಗಳಿಸಿದ್ದರು. ಇದಕ್ಕೆ ಕಾರಣ ಅವರಲ್ಲಿನ ಒಳ್ಳೆಯ ಗುಣ. ಅವರು ಇಂದು ನಮ್ಮೊಂದಿಗೆ ಇಲ್ಲ. ಆದರೆ ರಾಜ್ಯ, ಅದರಲ್ಲೂ ವಿಶೇಷವಾಗಿ ಚಾಮರಾಜನಗರ ಜಿಲ್ಲೆಯ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಇರುತ್ತಾರೆ.
ಮಹದೇವ ಪ್ರಸಾದ್ ಅವರ ನಿಧನದಿಂದ ವೈಯಕ್ತಿಕವಾಗಿ ಅಪಾರ ನಷ್ಟ ಉಂಟಾಗಿದೆ. ಅವರು ನನ್ನ ಆಪ್ತ ಮಿತ್ರರಾಗಿದ್ದರು. ಡಿಸೆಂಬರ್ 31ರಂದು ರಾತ್ರಿ ಒಂದು ಗಂಟೆಯವರೆಗೆ ನಮ್ಮೊಂದಿಗೆ ಇದ್ದು ಹೊಸ ವರ್ಷ ಆಚರಣೆ ಮಾಡಿದ್ದರು. ಇದ್ದಿದ್ದರೆ ಇನ್ನು 20-25 ವರ್ಷ ಸಕ್ರಿಯ ರಾಜಕಾರಣದಲ್ಲಿ ಇರುತ್ತಿದ್ದರು. ಮಹದೇವ ಪ್ರಸಾದ್ ಸೋಲಿಲ್ಲದ ಸರದಾರ ಆಗಿದ್ದರು. 5 ಬಾರಿ ವಿಧಾನಸಭೆ ಚುನಾಣೆ ಗೆದ್ದಿದ್ದರು ಎಂದು ನೆನಪಿಸಿಕೊಂಡರು.
ಜನರ ಪ್ರೀತಿ ಮತ್ತು ವಿಶ್ವಾಸ ಗಳಿಸುವುದು ಕಷ್ಟ. ಹಣ ಖರ್ಚು ಮಾಡಿ ಚುನಾವಣೆಗಳನ್ನು ಗೆಲ್ಲಲು ಆಗದು. ಜನಪರ ಕಾಳಜಿಯಿಂದ ಪ್ರಸಾದ್ ಅವರಿಗೆ ಗೆಲುವು ಸುಲಭವಾಗಿತ್ತು. ಒಬ್ಬ ಜನಪ್ರತಿನಿಧಿಗೆ ಇರಬೇಕಾದ ಎಲ್ಲ ಗುಣಗಳೂ ಅವರಲ್ಲಿತ್ತು. ದಾಪಂತ್ಯ ಜೀವನ ಮತ್ತು ಸಾರ್ವಜನಿಕ ಜೀವನದಲ್ಲಿ ಯಾರೊಂದಿಗೂ ಅವರು ಜಗಳವಾಡಿದವರಲ್ಲ ಎಂದರು.
ಪ್ರಸಾದ್ ಶಿಸ್ತಿನ ಮನುಷ್ಯ. ಜನರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸಬೇಕು ಎನ್ನುವುದು ಅವರಿಗೆ ಚೆನ್ನಾಗಿ ತಿಳಿದಿತ್ತು. ವಹಿಸಿದ ಕೆಲಸವನ್ನು ಶ್ರದ್ಧೆ ಮತ್ತು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಿದ್ದರು.
ಎಲ್ಲರನ್ನೂ ಪ್ರಸಾದ್ ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದರು. ಹೀಗಾಗಿ ಅವರ ಬಗ್ಗೆ ಯಾರಲ್ಲೂ ಅಪಸ್ವರ ಇರಲಿಲ್ಲ. ದೀರ್ ಕಾಲ ರಾಜಕಾರಣ ಮಾಡಿದ ಅನುಭವ ಅವರಿಗಿತ್ತು. ಅವರ ಸಾರಥ್ಯದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಎಲ್ಲ ಚುನಾವಣೆಗಳನ್ನು ಗೆದ್ದಿದ್ದೇವೆ.
ಚಾಮರಾಜನಗರದಲ್ಲಿ ಸಾವಿರಾರು ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಾಗಿವೆ. ಇದಕ್ಕೆ ಮಹದೇವ ಪ್ರಸಾದ್ ಅವರೇ ಕಾರಣ. ಗುಂಡ್ಲುಪೇಟೆಗೆ ಕಬಿನಿಯಿಂದ ಕುಡಿಯುವ ನೀರು ತರಲು ಪ್ರಸಾದ್ ಅವರು ಶ್ರಮಿಸಿದ್ದರು. ಕಬಿನಿ ಎರಡನೇ ಹಂತದ ಯೋಜನೆಗೆ ಸಂಬಂಧಿಸಿದ ಪ್ರಸ್ತಾವನೆ ಸರ್ಕಾರದ ಮುಂದಿದೆ. ಮಲೈ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವೂ ಅವರ ಪ್ರಯತ್ನದಿಂದಲೇ ಸಾಧ್ಯವಾಯಿತು.
ಮಹದೇವ ಪ್ರಸಾದ್ ಸದಾ ಜನರ ಮನಸ್ಸಿನಲ್ಲಿ ಉಳಿಯುವ ಅಪರೂಪದ ರಾಜಕಾರಣಿ. ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ, ಅವರು ಚಾಲನೆ ನೀಡಿದ ಅಭಿವೃದ್ಧಿ ಕಾಮಗಾರಿಗಳು ಮುಂದುವರಿಯಬೇಕಾದರೆ ಅವರ ಪತ್ನಿ ಗೀತಾ ಅವರು ಮರು ಚುನಾವಣೆಯಲ್ಲಿ ಗೆಲ್ಲಬೇಕು. ಅವರನ್ನು ಗೆಲ್ಲಿಸುವುದೇ ಮಹದೇವ ಪ್ರಸಾದ್ ಅವರಿಗೆ ಸಲ್ಲಿಸುವ ಗೌರವ ಎಂದು ಸಿದ್ದರಾಮಯ್ಯ ನುಡಿದರು.