×
Ad

ಗಾಂಜಾ ಮಾರಾಟ ಜಾಲ ಪತ್ತೆ : 9 ಜನರ ಬಂಧನ

Update: 2017-02-12 19:11 IST

ಸಬ್ ಇನ್‌ಸ್ಪೆಕ್ಟರ್ ಬಿ.ಸಿ.ಗಿರೀಶ್ ನೇತೃತ್ವದ ತಂಡದ ಕಾರ್ಯಾಚರಣೆ

ಶಿವಮೊಗ್ಗ, ಫೆ. 12: ಗಾಂಜಾ ಮಾರಾಟ ಜಾಲವೊಂದನ್ನು ಪತ್ತೆ ಹಚ್ಚಿರುವ ಶಿವಮೊಗ್ಗ ನಗರದ ತುಂಗಾನಗರ ಠಾಣೆ ಪೊಲೀಸರು ಒಂಬತ್ತು ಜನರನ್ನು ಬಂಧಿಸಿರುವ ಘಟನೆ ವರದಿಯಾಗಿದೆ.

ಜೆ. ಪಿ. ನಗರ 2 ನೆ ಕ್ರಾಸ್ ನಿವಾಸಿ ದಸ್ತಗೀರ್ (23), ಕುಂಬಾರ ಬೀದಿಯ ನಿವಾಸಿ ರಂಗ (28), ಇಲಿಯಾಸ್ ನಗರದ ಮುಹಮ್ಮದ್ ಯಾಸೀನ್(19), ಟಿಪ್ಪುನಗರದ ನಸ್ರುಲ್ಲಾ (45), ಸೀಗೆಹಟ್ಟಿಯ ಮುಸ್ತಾಫ (24), ಭದ್ರಾವತಿ ಚಾಮೇಗೌಡ ಲೈನ್ ನಿವಾಸಿ ಫಯಾಝ್ (34), ನೇತಾಜಿ ಸರ್ಕಲ್ ಜೆ. ಪಿ. ನಗರದ ನಿವಾಸಿಗಳಾದ ರಶೀದ್ ಬೇಗ್ (24), ನಾಸೀರ್ (22), ಮುಹಮ್ಮದ್ ಹುಸೇನ್ (23) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.

ಈ ವೇಳೆ ಉಳಿದ ಮೂವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಬಂಧಿತರ ಪತ್ತೆಗೆ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಬಂಧಿತ ಆರೋಪಿಗಳಿಂದ ಕಬ್ಬಿಣದ ರಾಡು, ದೊಣ್ಣೆ, ಖಾರದ ಪುಡಿ, ಚಾಕು, 1 ಕೆ.ಜಿ. 290 ಗ್ರಾಂ ತೂಕದ ಗಾಂಜಾ, 8 ಮೊಬೈಲ್, 2 ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಗಳು ಪೊಲೀಸರ ವಿಚಾರಣೆಯ ವೇಳೆ ಜೆ. ಪಿ. ನಗರದ ನಿವಾಸಿ ಕಣ್ಣ, ಟಿಪ್ಪುನಗರದ ಅಡ್ಡು ಹಾಗೂ ಸುಹೇಲ್ ಎಂಬವರು ಗಾಂಜಾ ಸರಬರಾಜು ಮಾಡುತ್ತಿದ್ದ ವಿಷಯವನ್ನು ಬಾಯ್ಬಿಟ್ಟಿದ್ದಾರೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಬ್ ಇನ್‌ಸ್ಪೆಕ್ಟರ್ ಬಿ.ಸಿ.ಗಿರೀಶ್ ಮತ್ತವರ ಸಿಬ್ಬಂದಿಗಳಾದ ಸೈಯದ್ ಇಮ್ರಾನ್, ಮರ್ದಾನ್ ಕಿರವಾಡಿ, ರಾಜು, ನಾರಾಯಣ ಸ್ವಾಮಿಯವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಾಳಿ: ಫೆ. 11 ರಂದು ಆರೋಪಿಗಳು ಗೋಪಾಳ - ಪುರದಾಳು ನಡುವಿನ ರಸ್ತೆಯ ತುಂಗಾ ಚಾನಲ್ ಸೇತುವೆಯ ನಿರ್ಜನ ಪ್ರದೇಶದಲ್ಲಿ ಕಬ್ಬಿಣದ ರಾಡು, ದೊಣ್ಣೆಗಳನ್ನು ಹಿಡಿದುಕೊಂಡು ಬೀಡುಬಿಟ್ಟು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಇದನ್ನು ಗಮನಿಸಿದ ಸಾರ್ವಜನಿಕರು ದರೋಡೆಕೋರರೆಂಬ ಶಂಕೆಯ ಮೇರೆಗೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ್ದ ಪೊಲೀಸರು ಎಲ್ಲ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ವಿಚಾರಣೆಗೊಳಪಡಿಸಿದಾಗ ಗಾಂಜಾ ಮಾರಾಟ ಜಾಲದವರೆಂಬುವುದು ಗೊತ್ತಾಗಿತ್ತು. ಜೊತೆಗೆ ಆರೋಪಿಗಳು ದರೋಡೆಗೆ ಹೊಂಚು ಹಾಕಿದ್ದ ಅಂಶವು ಗೊತ್ತಾಗಿತ್ತು. ಈ ಸಂಬಂಧ ಆರೋಪಿಗಳ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News