×
Ad

ಉಕ್ಕಿನ ಸೇತುವೆ ನಿರ್ಮಾಣದಲ್ಲಿ ಸಿಎಂಗೆ 65 ಕೋಟಿ ರೂ. ಲಂಚ: ಬಿಎಸ್‌ವೈ ಆರೋಪ

Update: 2017-02-12 19:37 IST

ಬೆಂಗಳೂರು, ಫೆ.12: ಉಕ್ಕಿನ ಸೇತುವೆ ನಿಮಾರ್ಣದ ಕಾಮಗಾರಿಯನ್ನು 150 ಕೋಟಿ ರೂ.ಗೆ ಲಂಚಕ್ಕೆ ನಿಗದಿಗೊಳಿಸಿದ್ದು, ಈಗಾಗಗಲೇ 65 ಕೋಟಿ ರೂ.ಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಕೈ ಸೇರಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಗಂಭೀರ ಆರೋಪ ಮಾಡಿದ್ದಾರೆ.

    ರವಿವಾರ ನಗರದ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಉಕ್ಕಿನ ಸೇತುವೆ ನಿರ್ಮಾಣದಲ್ಲಿ 150 ಕೋಟಿ ರೂ.ಲಂಚ ನಿಗದಿಯಾಗಿರುವ ಮಾಹಿತಿ ಸಿಎಂ ಆಪ್ತ, ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದ ರಾಜು ಅವರಿಂದ ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿರುವ ಡೈರಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

 ಮುಂದಿನ ದಿನಗಳಲ್ಲಿ ಸಾಕ್ಷಾಧಾರಗಳನ್ನು ಬಿಡುಗಡೆಗೊಳಿಸಲಾಗುವುದು. ಈ ಕುರಿತು ಸ್ಪಷ್ಟವಾದರೆ ಕೂಡಲೆ ತಮ್ಮ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲು ಸಿದ್ದರಿದ್ದಿರಾ ಎಂದು ಸವಾಲು ಹಾಕಿದ ಯಡಿಯೂರಪ್ಪ, ಉಕ್ಕಿನ ಸೇತುವೆ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟ. ಹೀಗಾಗಿ ಹಸಿರು ಪೀಠ, ಜನರ ವಿರೋಧದ ನಡುವೆ ತರಾತುರಿಯಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇಷ್ಟಾದರೂ ಪುರಾವೆಗಳನ್ನ್ನು ಕೇಳುವುದು ಸಲ್ಲ. ಇದರಲ್ಲಿ ಭ್ರಷ್ಟಾಚಾರ ನಡೆದಿರುವುದು, ಡೈರಿ ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿರುವುದು ಸಿಎಂಗೂ ಗೊತ್ತಿದೆ ಎಂದರು.

ಅಧಿವೇಶನದಲ್ಲಿ ಪ್ರಸ್ತಾಪ:  ವಿಧಾನ ಮಂಡಲದ ಅಧಿವೇಶನದಲ್ಲಿ ಬಿಜೆಪಿ ಪಕ್ಷ ಈ ಆರೋಪದ ಕುರಿತು ನಿಳುವಳಿ ಸೂಚನೆ ಮೂಲಕ ಮಂಡಿಸಲಿದ್ದಾರೆ. ಈ ವೇಳೆ ವಿಧಾನ ಪರಿಷತ್ ಸದಸ್ಯ ಗೋವಿಂದ ರಾಜು ಮತ್ತು ಮುಖ್ಯಮಂತ್ರಿಗಳು ಉತ್ತರಿಸಲಿ. ಆಗ ಎಲ್ಲ ಬಣ್ಣ ಬಯಲಾಗಲಿದೆ ಎಂದರು.

  ಕಾಂಗ್ರೆಸ್‌ನ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಧ್ಯೆ ವಿಧಾನ ಪರಿಷತ್ ಸದಸ್ಯ ಗೋವಿಂದ್‌ರಾಜ್ ಪೋಸ್ಟ್ ಮ್ಯಾನ್ ಕೆಲಸ ಮಾಡಿದ್ದಾರೆ. ಡೈರಿಯಲ್ಲಿನ ಎಲ್ಲ ಅಂಶಗಳನ್ನು ಮುಂದಿನ ದಿನಗಳಲ್ಲಿ ಜನರ ಮುಂದೆ ಬಿಚ್ಚಿಡುತ್ತೇನೆ. ಡೈರಿ ಬಹಿರಂಗಗೊಂಡರೆ ಕಾಂಗ್ರೆಸ್ ಸರಕಾರ ಮನೆಗೆ ಹೋಗುವುದು ಖಚಿತ ಎಂದು ಹೇಳಿದರು.

ಕೈ ನಾಯಕರಿಂದಲೇ ಸುಳಿವು: ಉಕ್ಕಿನ ಸೇತುವೆ ನಿರ್ಮಾಣದಲ್ಲಿ ಮುಖ್ಯಮಂತ್ರಿಗಳು ಲಂಚ ಪಡೆದಿರುವ ಕುರಿತು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರು ಮತ್ತು ಪ್ರಮಾಣಿಕ ಅಧಿಕಾರಿಗಳೇ ಖುದ್ದು ನನಗೆ ತಿಳಿಸಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದರು.

ಕಾನೂನು ಹೋರಾಟ:    ಹೈಕಮಾಂಡ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಸಾವಿರ ಕೋಟಿ ರೂ ಲಂಚ ನೀಡಿದ್ದಾರೆ ಎಂಡು ತಾನೂ ಮಾಡಿರುವ ಆರೋಪದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿರುವುದು ಸ್ವಾಗತಾರ್ಹ. ಈ ಕಾನೂನು ಹೋರಾಟ ಎದುರಿಸಲು ಸಿದ್ಧನಿದ್ದೇನೆ ಎಂದು ಸ್ಪಷ್ಟಪಡಿಸಿದರು. ಶಾಸಕ ರವಿ ಸುಬ್ರಹ್ಮಣ್ಯ, ಬಿಜೆಪಿ ಮುಖಂಡರಾದ ಲೆಹರ್ ಸಿಂಗ, ರಾಮಚಂದ್ರೇಗೌಡ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News