ಯಡಿಯೂರಪ್ಪ ರಾಜ್ಯ ಕಂಡ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ: ಸಿದ್ದರಾಮಯ್ಯ
ಗುಂಡ್ಲುಪೇಟೆ, ಫೆ.12: ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಅತ್ಯಂತ ಕಡು ಭ್ರಷ್ಟ ಹಾಗೂ ಡೊಂಗಿ ಮುಖ್ಯಮಂತ್ರಿ ಎಂದರೆ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿ ಗ್ರಾಮದಲ್ಲಿ ನಡೆದ ರಾಜ್ಯ ಸರಕಾರದ ಸಹಕಾರ ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿವಂಗತ ಮಹದೇವಪ್ರಸಾದ್‌ರವರ ಮಹಾ ಸ್ಮರಣೆ ಮತ್ತು ಸೇವಾ ಪಥ ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿಯಂತ್ರಣ ಮಾಡುವ ಸಲುವಾಗಿ ಸ್ಟೀಲ್ ಬ್ರಿಡ್ಜ್ ಯೋಜನೆಗೆ ಸರಕಾರ ಮುಂದಾಗಿದೆ ವಿನಃ ಬೇರ್ಯಾವ ಉದ್ದೇಶದಿಂದಲ್ಲ, ಪ್ರಚಾರಕ್ಕಾಗಿ ಹಾಗೂ ಅಧಿಕಾರಕ್ಕಾಗಿ ಪರಿತಪಿಸುತ್ತಿರುವ ಯಡಿಯೂರಪ್ಪ ಜನರನ್ನು ಮರಳು ಮಾಡುವ ಸಲುವಾಗಿ ಡೊಂಗಿತನ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಜರಿದರು.
ಯಡಿಯೂರಪ್ಪನವರ ಮೇಲೆ ಆರೋಪಗಳು ಇನ್ನೂ ಮುಗಿದಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರಕಾರ ಇರುವುದರಿಂದ ಯಡಿಯೂರಪ್ಪ ಹೊರಗಿದ್ದಾರೆ ಇಲ್ಲದಿದ್ದರೆ ಜೈಲಿನಲ್ಲಿರಬೇಕಾಗಿತ್ತು. ತನ್ನ ಮೇಲೆ ಯಾವುದೇ ಖಾಸಗಿ ದುರು ದಾಖಲಾಗಿಲ್ಲ. ಆಡಳಿತದಲ್ಲಿ ನಾವು ಪ್ರಾಮಾಣಿಕವಾಗಿದ್ದೇವೆ. ರಾಜ್ಯದಲ್ಲಿ ಈವರೆಗಿನ ನಾಲ್ಕು ವರ್ಷಗಳ ಆಡಳಿತದಲ್ಲಿ ಸರಕಾರದ ಮೇಲೆ ಯಾವುದೇ ರೀತಿಯ ದೂರುಗಳು ದಾಖಲಾಗಿಲ್ಲ ಎಂದು ಹೆಮ್ಮೆಯಿಂದ ಹೇಳಿದರು.
ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ರವರ ಡೈರಿಯಲ್ಲಿ ಲಂಚದ ಹಣ ದಾಖಲಾಗಿದೆ ಎಂದು ಹೇಳುವ ಬಿಜೆಪಿಯವರು ಗೋವಿಂದರಾಜುರವರನ್ನು ವಿಚಾರಿಸಲಿ. ಏನೆಂದು ಗೊತ್ತಾಗುತ್ತದೆ. ಮಾತನಾಡಬೇಕಾದರೂ ಸಭ್ಯತೆ ಶುದ್ದತೆಯಿಂದ ಆರೋಪ ಮಾಡಿದರೆ ಒಳ್ಳೆಯದು. ಇಲ್ಲದಿದ್ದರೆ ಅವರ ನೈಜತೆಯನ್ನು ಅವರೇ ಬೀದಿಗೆ ಎಳೆದು ಕೊಳ್ಳುವರು ಎಂದು ಯಡಿಯೂರಪ್ಪನವರನ್ನು ಜರಿದರು.