​ಮೂಡಲಪಾಯ ನೇಪಥ್ಯದ ಅಂಚಿಗೆ ಸರಿಯುತ್ತಿದೆ: ನಾ.ಡಿಸೋಜ ಆತಂಕ

Update: 2017-02-12 17:41 GMT

ಸಾಗರ,ಫೆ.12: ಮಲೆನಾಡು ಭಾಗದ ಅತ್ಯಂತ ಶ್ರೀಮಂತ ಜನಪದ ಕಲೆಯಾಗಿರುವ ಮೂಡಲಪಾಯವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಇನ್ನಷ್ಟು ಪರಿಣಾಮಕಾರಿ ಕೆಲಸ ಮಾಡಬೇಕು ಎಂದು ಸಾಹಿತಿ ಡಾ. ನಾ.ಡಿಸೋಜ ತಿಳಿಸಿದರು. ಇಲ್ಲಿನ ಗುರುಭವನದಲ್ಲಿ ಶನಿವಾರ ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡಮಿ ಹಾಗೂ ಜನಪದ ಕಣಜದ ಕರ್ನಾಟಕ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಮೂಡಲಪಾಯ ಬಯಲಾಟ ತರಬೇತಿ ಕಾರ್ಯಾಗಾರವನ್ನು ಮೃದಂಗ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಅತ್ಯಂತ ಮನಮೋಹಕ ಕಲೆಯಾಗಿರುವ ಮೂಡಲಪಾಯ ನೇಪಥ್ಯದ ಅಂಚಿಗೆ ಸರಿಯುತ್ತಿದೆ. ಮಲೆನಾಡಿನ ಜನರು ಬ್ಯಾಡಗಿ, ಹಾವೇರಿಯಂತಹ ಕಡೆಗಳಿಗೆ ಅಡಿಕೆ ವ್ಯಾಪಾರಕ್ಕೆ ಹೋದಾಗ ಮೂಡಲಪಾಯವನ್ನು ಕಲಿತುಕೊಂಡು ಬಂದು, ಇಲ್ಲಿ ಜನಪ್ರಿಯಗೊಳಿಸಿದರು. ಆಧುನಿಕ ಕಲೆಗಳಿಗೆ ಮಾರುಹೋದ ಜನರು ನಂತರದ ದಿನಗಳಲ್ಲಿ ಕೆಲೆಯನ್ನು ಮರೆತುಬಿಟ್ಟಿರುವುದು ವಿಪರ್ಯಾಸ ಎಂದರು.

ಪ್ರತಿಯೊಂದು ಕಲೆಯೂ ಪ್ರಾದೇಶಿಕ ಭಿನ್ನತೆ ಹಾಗೂ ಭೌಗೋಳಿಕ ವಿಶೇಷತೆಯನ್ನು ಹೊಂದಿರುತ್ತದೆ. ಇಂತಹ ಕಲೆಗಳ ಸತ್ವವನ್ನು ಅರಿತುಕೊಂಡು ಅದನ್ನು ನಮ್ಮದಾಗಿಸಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಮೂಡಲಪಾಯ ಕಲೆ ಸುಧಾರಣೆಗೊಳಿಸುವ ನಿಟ್ಟಿನಲ್ಲಿ ವಿದ್ವಾಂಸರು, ಕಲಾವಿದರು, ಕಲಾಪ್ರೇಕ್ಷರು ಹೆಚ್ಚಿನ ಚಿಂತನೆ ನಡೆಸಬೇಕು ಎಂದರು. ಜನಪದ ವಿದ್ವಾಂಸ ಎನ್. ಹುಚ್ಚಪ್ಪ ಮಾಸ್ತರ್ ಮಾತನಾಡಿ, ಒಂದು ಕಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅತ್ಯಂತ ವೈಭವತೆಯನ್ನು ಕಂಡುಕೊಂಡಿದ್ದ ಮೂಡಲಪಾಯ ಕಲೆ ಇಂದು ಜನರಿಂದ ಮರೆಯಾಗುತ್ತಿದೆ. ಬೇರೆಬೇರೆ ಆಧುನಿಕ ದೃಶ್ಯ ಮಾಧ್ಯಮಗಳತ್ತ ಜನರು ಆಕರ್ಷಿತರಾಗುತ್ತಿದ್ದಾರೆ.

ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹೊಸ ಸಂಸ್ಕೃತಿ ಹುಟ್ಟು ಹಾಕಲು ಇಂತಹ ಕಾರ್ಯಾಗಾರಗಳ ಅಗತ್ಯತೆ ಹೆಚ್ಚು ಇದೆ ಎಂದರು. ಜನಪದ ಕಣಜ ಕರ್ನಾಟಕದ ಕಾರ್ಯಾಧ್ಯಕ್ಷ ದೇವೇಂದ್ರ ಬೆಳೆಯೂರು ಅಧ್ಯಕ್ಷತೆ ವಹಿಸಿದ್ದರು. ಮೂಡಲಪಾಯ ಕಲಾವಿದ ಕುಮ್ಮೂರು ರಂಗಪ್ಪ ಸೊರಬ ಹಾಜರಿದ್ದರು. ಶಿವಾನಂದ ಕುಗ್ವೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮೂಡಿಗೆರೆ: ನಾಳೆ ಯೋಧರಿಗೆ ನಮನ
ಮೂಡಿಗೆರೆ, ಫೆ.12: ದೇಶ ಕಾಯುತ್ತಿರುವ ಹಾಗೂ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸುವ ‘ಯೋಧರಿಗಾಗಿ ನಮನ’ ಕಾರ್ಯಕ್ರಮವನ್ನು ಫೆ.14ರಂದು ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ಹರಿಓಂ ಸೇವಾ ಸಂಸ್ಥೆಯ ಆನಂದ್ ಕಣಚೂರು ತಿಳಿಸಿದ್ದಾರೆ.


ಅಂದು ಬೆಳಗ್ಗೆ 11 ಗಂಟೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು. ತಾಲೂಕಿನಲ್ಲಿ ನಿವೃತ್ತಿ ಹೊಂದಿದ ಎಲ್ಲಾ ಯೋಧರು ಹಾಗೂ ಯೋಧರ ಕುಟುಂಬಸ್ಥರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News