×
Ad

ದಿಡ್ಡಳ್ಳಿಯಲ್ಲೇ ನಿವೇಶನ ನೀಡಲು ದೊರೆಸ್ವಾಮಿ ಒತ್ತಾಯ

Update: 2017-02-14 17:40 IST

ಮಡಿಕೇರಿ ಫೆ.14 :ಗುಡಿಸಲುಗಳಲ್ಲಿ ನೆಲೆಸಿರುವ ನಿವೇಶನ ರಹಿತರಿಗೆ ದಿಡ್ಡಳ್ಳಿಯಲ್ಲಿಯೇ ನಿವೇಶನ ಒದಗಿಸಬೇಕೆಂದು ಒತ್ತಾಯಿಸಿರುವ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಕೇಂದ್ರದ ಅನುಮತಿಯ ಅಗತ್ಯವಿದ್ದರೆ ಆ ನಿಟ್ಟಿನಲ್ಲೂ ಸರಕಾರ ಪ್ರಯತ್ನ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿಡ್ಡಳ್ಳಿಯಲ್ಲಿರುವ ಗಿರಿಜನರಿಗೆ ಅಲ್ಲಿಯೇ ಜಾಗ ಒದಗಿಸಬೇಕೆನ್ನುವುದು ನಮ್ಮ ಪ್ರಮುಖ ಬೇಡಿಕೆಯಾಗಿದ್ದು, ಆದಷ್ಟು ಶೀಘ್ರ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದರು.

ಗಿರಿಜನರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಅವರೊಂದಿಗೆ ಮಾತುಕತೆ ನಡೆಸಬೇಕೆನ್ನುವ ಹಂತದಲ್ಲಿ ಆ ಪ್ರದೇಶಕ್ಕೆ ಪ್ರವೇಶಿಸದಂತೆ ನಿಷೇಧಾಜ್ಞೆಯ ಮೂಲಕ ನಿರ್ಬಂಧ ಹೇರಿರುವ ಜಿಲ್ಲಾಡಳಿತದ ಕ್ರಮ ಅತ್ಯಂತ ಬಾಲಿಶವಾಗಿದೆ. ದಿಡ್ಡಳ್ಳಿಗೆ ಆಗಮಿಸಿ ಯಾರೋ ಕಾನೂನು ಭಂಗ ಮಾಡಿ ಗದ್ದಲ ಮಾಡುತ್ತಾರೆ ಎಂದು ನಮ್ಮನ್ನು ಅಲ್ಲಿಗೆ ತೆರಳದಂತೆ ನಿಷೇಧಾಜ್ಞೆ ಹೇರಿ ನಿರ್ಬಂಧಿಸಿರುವ ಕ್ರಮ ಸರಿಯಲ್ಲ. ನಿಷೇದಾಜ್ಞೆ ಹೇರುವ ಮೂಲಕ ನಮ್ಮನ್ನು ದಿಡ್ಡಳ್ಳಿಗೆ ಹೋಗದಂತೆ ತಡೆಯವುದಕ್ಕೆ ನಾವೇನು ಹೊರಗಿನವರಲ್ಲ. ನಾವು ಭಾರತೀಯರು ಮತ್ತು ಕನ್ನಡಿಗರೇ ಆಗಿದ್ದೇವೆ ಎಂದು ದೊರೆಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

 ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಇತ್ತೀಚೆಗೆ, ಅರಣ್ಯ ಇಲಾಖೆಗೆ ಹಸ್ತಾಂತರಿಸಲ್ಪಟ್ಟು, ಅರಣ್ಯವೆಂದು ಪರಿವರ್ತನೆಯಾಗದಿರುವ ಸಿ ಮತ್ತು ಡಿ ದರ್ಜೆಯ ಭೂಮಿಯನ್ನು ಹಿಂದಕ್ಕೆ ಪಡೆಯುವುದಾಗಿ ತಿಳಿಸಿದ್ದಾರೆ. ಇಂತಹ ನಿರ್ಧಾರದಿಂದ ನಿರ್ವಸತಿಗರ ಪರವಾದ ನಮ್ಮ ಹೋರಾಟದಲ್ಲಿ ಅರ್ಧ ಯುದ್ಧವನ್ನು ಗೆದ್ದಂತಾಗಿದೆಯೆಂದು ತಿಳಿಸಿದರು. ನಾಮಕಾವಸ್ಥೆಯಲ್ಲಿರುವ ಡೀಮ್ಡ್ ಫಾರೆಸ್ಟ್ ಜಾಗವನ್ನು ಹಿಂದಕ್ಕೆ ಪಡೆಯುವುದಿದ್ದಲ್ಲಿ ಸ್ವಾಗತಿಸುವುದಾಗಿ ಹೇಳಿದ ದೊರೆಸ್ವಾಮಿ, ನಿಜಕ್ಕೂ ಅರಣ್ಯ ಪ್ರದೇಶವಾಗಿದ್ದಲ್ಲಿ ಅದನ್ನು ಉಳಿಸಿಕೊಳ್ಳುವುದು ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

 ಭೂಮಿ ಮತ್ತು ವಸತಿ ಹಕ್ಕುವಂಚಿತರ ಹೋರಾಟ ಸಮಿತಿಯ ಪ್ರಮುಖರಾದ ಎ.ಕೆ. ಸುಬ್ಬಯ್ಯ ಮಾತನಾಡಿ, ದಿಡ್ಡಳ್ಳಿಯ ಜಾಗವನ್ನು ಈ ಹಿಂದೆ ಅರಣ್ಯ ಇಲಾಖೆ ಮೀಸಲು ಅರಣ್ಯವೆಂದು ಹೇಳಲಾಗುತ್ತಿತ್ತು. ಆದರೆ ಪ್ರಸ್ತುತ ಅದು ಬಫರ್ ಝೋನ್‌ಗೆ ಇಳಿದಿದೆ ಎಂದು ವ್ಯಂಗ್ಯವಾಡಿದರು. ಗಿರಿಜನರಿಗೆ ದಿಡ್ಡಳ್ಳಿಯ ಜಾಗ ಒದಗಿಸಲು ಕೇಂದ್ರದ ಅನುಮತಿ ಬೇಕಿದ್ದರೆ, ಜಾಗ ಬಿಟ್ಟುಕೊಡಲು ಕೇಂದ್ರಕ್ಕೆ ಪತ್ರ ಬರೆಯುವಂತೆ ತಿಳಿಸಿದರು.

ಮುಖ್ಯಮಂತ್ರಿಗಳೊಂದಿಗೆ ಚರ್ಚೆಗೂ ಮುನ್ನವೆ ಜಿಲ್ಲೆಯ ವಿವಿಧೆಡೆಗಳಲ್ಲಿ ಜಾಗ ಗುರುತಿಸಿ ಗಿರಿಜನರನ್ನು ಅಲ್ಲಿಗೆ ಸ್ಥಳಾಂತರಿಸುವ ಪಿತೂರಿಯ ಹಿಂದೆ ಅರಣ್ಯ ಇಲಾಖೆ ಹಾಗೂ ಡೋಂಗಿ ಪರಿಸರವಾದಿಗಳ ಷಡ್ಯಂತ್ರ ಇದೆ ಎಂದು ಸುಬ್ಬಯ್ಯ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News