ಆನೆ ದಂತ ಸಾಗಾಟ : ಮಾಲು ಸಹಿತ ಇಬ್ಬರ ಬಂಧನ

Update: 2017-02-14 16:39 GMT

ಮಡಿಕೇರಿ ಫೆ.14 :ಆನೆ ದಂತ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಾಲು ಸಹಿತ ಬಂಧಿಸುವಲ್ಲಿ ವನ್ಯಜೀವಿ ವಿಭಾಗ ಯಶಸ್ವಿಯಾಗಿದ್ದು, ಮತ್ತೊಬ್ಬ ಅರೋಪಿ ಪರಾರಿಯಾಗಿದ್ದಾನೆ.

2 ವಾಹನ ಹಾಗೂ ಎರಡು ಆನೆ ದಂತಗಳನ್ನು ವಶಕ್ಕೆ ಪಡೆಯಲಾಗಿದ್ದು, ಚಾಮರಾಜನಗರದ ನಂಜುಂಡಸ್ವಾಮಿ (33), ಹೆಚ್.ಡಿ.ಕೋಟೆಯ ಮಹೇಶ್ (33) ಬಂಧಿತ ಆರೋಪಿಗಳು. ತೆರಾಲು ಗ್ರಾಮದ ಬೊಟ್ಟಂಗಡ ಮಂಜು (33) ತಲೆ ಮರೆಸಿಕೊಂಡಿದ್ದಾನೆ.

 ಬಂಧಿತ ಆರೋಪಿಗಳನ್ನು ಪೊನ್ನಂಪೇಟೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಸೋಮವಾರ ರಾತ್ರಿ ವನ್ಯಜೀವಿ ವಿಭಾಗದ ಡಿಸಿಎಫ್ ಮುಕ್ಕಾಟಿರ ಜಯ ನೇತೃತ್ವದ ತಂಡ ಬಾಳೆಲೆ- ಕಾನೂರು ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಸ್ವಿಫ್ಟ್ ಕಾರ್‌ನಲ್ಲಿ ಸಾಗಿಸುತ್ತಿದ್ದ ಎರಡು ಆನೆ ದಂತಗಳನ್ನು ವಶಕ್ಕೆ ಪಡೆದಿದ್ದಾರೆ. ಕಾರ್‌ನಲ್ಲಿದ್ದ ಮೂವರು ಆರೋಪಿಗಳಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಮಂಜು ಎಂಬಾತ ದಾಳಿ ಸಂದರ್ಭ ತಲೆ ಮರೆಸಿಕೊಂಡಿದ್ದಾನೆ. ದಂತ ಸಾಗಾಣೆಗೆ ಬಳಸಲಾಗುತ್ತಿತ್ತು ಎನ್ನಲಾದ ಮಾರುತಿ ವ್ಯಾನ್‌ವೊಂದನ್ನು ಕೂಡ ವಶಕ್ಕೆ ಪಡೆಯಲಾಗಿದೆ.

  ಅಂದಾಜು 1.4 ಮೀಟರ್ ಉದ್ದದ ಎರಡು ದಂತಗಳು ಒಟ್ಟು 22 ಕೆಜಿ ತೂಕವಿದೆ. ಕಾರ್ಯಾಚರಣೆಯಲ್ಲಿ ವನ್ಯಜೀವಿ ಡಿಸಿಎಫ್ ಮುಕ್ಕಾಟೀರ ಜಯ, ಶ್ರೀಮಂಗಲ ವನ್ಯಜೀವಿ ಆರ್‌ಎಫ್‌ಒ ವೀರಣ್ಣ, ಸಿಬ್ಬಂದಿ ಮನೋಹರ್, ರಾಕೇಶ್, ಹರೀಶ್ ಹಾಗೂ ಸುರೇಶ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News