×
Ad

ದಿಡ್ಡಳ್ಳಿ ಮೂಲನಿವಾಸಿಗಳ ಎತ್ತಂಗಡಿಯಿಲ್ಲ: ಎಚ್.ಆಂಜನೇಯ

Update: 2017-02-15 19:24 IST

ಬೆಂಗಳೂರು, ಫೆ.15: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ದಿಡ್ಡಳ್ಳಿಯ ಅರಣ್ಯಪ್ರದೇಶದಲ್ಲಿರುವ ಮೂಲ ನಿವಾಸಿಗಳನ್ನು ಎತ್ತಂಗಡಿ ಮಾಡುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಭರವಸೆ ನೀಡಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ದಿಡ್ಡಳ್ಳಿಯ ನಿರಾಶ್ರಿತ ಬುಡಕಟ್ಟು ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಿರಾಶ್ರಿತ ಕುಟುಂಬಗಳ ಪ್ರತಿನಿಧಿ ನಟ ಚೇತನ್ ಸೇರಿದಂತೆ ಇನ್ನಿತರೊಂದಿಗೆ ನಡೆದ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ದಿಡ್ಡಲ್ಳಿಯಲ್ಲಿ ತಲೆ ತಲಾಂತರಗಳಿಂದ ವಾಸ ಮಾಡುತ್ತಿರುವ ಮೂಲ ನಿವಾಸಿಗಳನ್ನು ಯಾವುದೆ ಕಾರಣಕ್ಕೂ ಎತ್ತಂಗಡಿ ಮಾಡುವುದಿಲ್ಲ. ಆದರೆ, ಇತ್ತೀಚೆಗೆ ನೂರಾರು ಮಂದಿ ಸ್ಥಳಕ್ಕೆ ಬಂದು ತಾವು ಇಲ್ಲೆ ವಾಸವಿರುವುದಾಗಿ ಪ್ರತಿಪಾದನೆ ಮಾಡುತ್ತಿದ್ದಾರೆ. ಹೊಸದಾಗಿ ವಲಸೆ ಬಂದವರಿಗೆ ಬೇರೆ ಕಡೆ ಕಂದಾಯ ಜಮೀನಿನಲ್ಲಿ ವಸತಿ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಆಂಜನೇಯ ಹೇಳಿದರು.

ಈಗ ಸಮಸ್ಯೆಗೆ ಕಾರಣವಾಗಿರುವ ಪ್ರದೇಶವು ದಾಖಲೆಗಳ ಪ್ರಕಾರಣ ಅರಣ್ಯ ಇಲಾಖೆಗೆ ಸೇರಿದೆ. ಆ ಪ್ರದೇಶದಲ್ಲಿ ಮರಗಳು ಬೆಳೆದಿದ್ದು, ಅರಣ್ಯವನ್ನು ನಾಶ ಮಾಡಿ ಮನೆಗಳನ್ನು ನಿರ್ಮಿಸಿಕೊಡಲು ಸಾಧ್ಯವಾಗುವುದಿಲ್ಲ. ಕಾನೂನು ಪ್ರಕಾರ ಅದಕ್ಕೆ ಅವಕಾಶವು ಇಲ್ಲ ಎಂದು ಅವರು ಹೇಳಿದರು.

ಮೂಲ ನಿವಾಸಿಗಳು ಎಂದು ಪ್ರತಿಪಾದನೆ ಮಾಡುತ್ತಿರುವವರಿಗೆ ವಸತಿ ಸೌಲಭ್ಯಕ್ಕಾಗಿ ಮೂರು ಕಡೆ ಸ್ಥಳವನ್ನು ಗುರುತಿಸಲಾಗಿದೆ. ಆದರೆ, ಅವರು ಇದಕ್ಕೆ ಸಹಮತ ವ್ಯಕ್ತಪಡಿಸುತ್ತಿಲ್ಲ. ರಾಜ್ಯ ಸರಕಾರವು ಇವರಿಗೆ ಸಕಲ ಸೌಲಭ್ಯಗಳು ಇರುವ ಬಡಾವಣೆಯನ್ನು ನಿರ್ಮಿಸಿ ಮನೆಗಳನ್ನು ಕಟ್ಟಿಸಿಕೊಡುತ್ತದೆ ಎಂದು ಆಂಜನೇಯ ತಿಳಿಸಿದರು.

ಶಾಲೆ, ಆಸ್ಪತ್ರೆ, ಅಡುಗೆ ಅನಿಲದ ಸಂಪರ್ಕ, ರಸ್ತೆ, ಬೀದಿ ದೀಪ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳು ಈ ಬಡಾವಣೆಗಳಲ್ಲಿ ನಿರ್ಮಿಸುವ ಮನೆಗಳಿಗೆ ಕಲ್ಪಿಸಲಾಗುತ್ತದೆ ಎಂದು ಆಂಜನೇಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News