ಬಿಎಸ್‌ವೈ-ಅನಂತ್ ವಿರುದ್ಧ ಲೋಕಾಯುಕ್ತಕ್ಕೆ ದೂರು
ಬೆಂಗಳೂರು, ಫೆ.15: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಪಕ್ಷದ ಹೈಕಮಾಂಡ್‌ಗೆ ಕಪ್ಪ ನೀಡಿರುವುದಾಗಿ ಒಪ್ಪಿಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ್‌ಕುಮಾರ್ ವಿರುದ್ಧ ಲೋಕಾಯುಕ್ತ ಹಾಗೂ ಎಸಿಬಿಗೆ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಸಿ.ಎಂ.ಧನಂಜಯ್ ದೂರು ಸಲ್ಲಿಸಿದ್ದಾರೆ.
ಬುಧವಾರ ಲೋಕಾಯುಕ್ತ ಕಚೇರಿಯಲ್ಲಿ ದೂರು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಚೇರಿಯಲ್ಲಿ ಯಡಿಯೂರಪ್ಪ ಹಾಗೂ ಅನಂತ್‌ಕುಮಾರ್ ನಡುವೆ ನಡೆದಿರುವ ಸಂಭಾಷಣೆಯ ಪ್ರಕಾರ, ಬಿಜೆಪಿ ಹೈಕಮಾಂಡ್‌ಗೆ ಲಂಚದ ರೂಪದಲ್ಲಿ ಇವರು ಹಣವನ್ನು ಪಾವತಿಸಿದ್ದಾರೆ ಎಂದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಹಾಗೂ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದಲ್ಲಿಯೂ ದೂರು ನೀಡಿ ಐಪಿಸಿ ಸೆಕ್ಷನ್ 355 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಕೂಡಲೆ ಇವರಿಬ್ಬರೂ ತಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಲೋಕಾಯುಕ್ತ ಹಾಗೂ ಎಸಿಬಿ ಅಧಿಕಾರಿಗಳು ಬಿಜೆಪಿ ಕಚೇರಿಯನ್ನು ಮುಟ್ಟುಗೋಲು ಹಾಕಿಕೊಂಡು, ಇವರಿಬ್ಬರ ನಡುವೆ ನಡೆದಿರುವ ಸಂಭಾಷಣೆಗೆ ಸಂಬಂಧಿಸಿದ ಹೆಚ್ಚಿನ ಸಾಕ್ಷಾಧಾರಗಳನ್ನು ಸಂಗ್ರಹಿಸಿಕೊಳ್ಳಬೇಕು. ಇಲ್ಲದಿದ್ದರೆ, ಇವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಸಾಕ್ಷಾಧಾರಗಳನ್ನು ನಾಶ ಮಾಡಬಹುದಾಗಿದೆ ಎಂದು ಧನಂಜಯ್ ಹೇಳಿದರು.
ನೈತಿಕ ಹೊಣೆಹೊತ್ತು ಯಡಿಯೂರಪ್ಪ ಹಾಗೂ ಅನಂತ್‌ಕುಮಾರ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡದಿದ್ದರೆ, ಜನತಾ ನ್ಯಾಯಾಲಯದಲ್ಲಿ ಇವರಿಬ್ಬರ ಮುಖವಾಡವನ್ನು ಕಳಚಲಾಗುವುದು. ‘ಅಂದೂ ಭ್ರಷ್ಟರು, ಇಂದೂ ಭ್ರಷ್ಟರೂ’ ಎಂಬ ಘೋಷವಾಕ್ಯದಡಿ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.