×
Ad

ಸಂತ ಸೇವಾಲಾಲ್ ಜಯಂತ್ಯುತ್ಸವ ಮಾಲಧಾರಿಗಳಿಂದ ಹೊನ್ನಾಳಿ ಠಾಣೆಗೆ ಕಲ್ಲು

Update: 2017-02-15 22:51 IST

ಹೊನ್ನಾಳಿ, ಫೆ.15: ತಾಲೂಕಿನ ಸೂರಗೊಂಡನ ಕೊಪ್ಪದಲ್ಲಿ ಸಂತ ಸೇವಾಲಾಲ್ ಜಯಂತ್ಯುೀತ್ಸವದಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದ ಮಾಲಾಧಾರಿಗಳ ಮೇಲೆ ಪೊಲೀಸ್ ಪೇದೆಯೊಬ್ಬರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ, ಮಾಲಧಾರಿಗಳು ಹೊನ್ನಾಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.


 ಬೆಳಗ್ಗೆ ಮಾಲಧಾರಿಗಳು ಹೊನ್ನಾಳಿ ಪಟ್ಟಣದಲ್ಲಿ ಸಾಗುತ್ತಿದ್ದ ವೇಳೆ ರಸ್ತೆ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಪೇದೆ ನಾಗಭೂಷಣ್ ಮಾಲಾಧಾರಿಗಳಿಗೆ ತಿಳಿ ಹೇಳಿದ್ದಾರೆ. ಅಲ್ಲದೆ, ರಸ್ತೆ ಬದಿ ಸಾಗುವಂತೆ ನೂಕಿದ್ದಾರೆ ಎಂದು ಮಾಲಧಾರಿಗಳು ಆರೋಪಿಸಿದ್ದಾರೆ. ಇದರಿಂದ ಆಕ್ರೋಶ ಗೊಂಡ ಮಾಲಧಾರಿಗಳು ಹೊನ್ನಾಳಿ ಪೊಲೀಸ್ ಠಾಣೆಗೆ ಆಗಮಿಸಿ ಪೇದೆ ಮೇಲೆ ಕ್ರಮಕೈಗೊಳ್ಳಬೇಕು. ಅವರನ್ನು ಈ ಕೂಡಲೇ ಅಮಾನತುಗೊಳಿಸಬೇಕೆಂದು ಪಟ್ಟು ಹಿಡಿದು, ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದರು ಎನ್ನಲಾಗಿದೆ.


ಪೇದೆಯನ್ನು ಅಮಾನತುಗೊಳಿಸಿರುವ ಆದೇಶ ಪ್ರತಿ ತೋರಿಸಿದರೂ ಪ್ರತಿಭಟನಾಕಾರರು ಪಟ್ಟು ಸಡಿಲಿಸಲು ಮುಂದಾಗದ ಕಾರಣ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿ, ಸುಮಾರು 6ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಮುಜರಾಯಿ ಖಾತೆ ಸಚಿವ ರುದ್ರಪ್ಪ ಲಮಾಣಿ, ಮುಖಂಡರಾದ ಹೀರ್ಯಾನಾಯ್ಕ್ಕಾ, ಎಸ್ಪಿ ಭೀಮಾಶಂಕರ್ ಎಸ್. ಗುಳೇದ್, ಗ್ರಾಮಾಂತರ ಡಿವೈಎಸ್ಪಿ ನೇಮೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಪೂರ್ವ ವಲಯ ಐಜಿಪಿ ಭೇಟಿ
 ಐಜಿಪಿ ಡಾ.ಎಂ.ಎ. ಸಲೀಮ್ ಅವರು ಮಾಲಧಾರಿಗಳ ಪ್ರತಿಭಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಎರಡು ಪೊಲೀಸ ತುಕಡಿಗಳನ್ನು ಹೊನ್ನಾಳಿಗೆ ಕರೆಸಲಾಗಿದೆ. ಶಿವಮೊಗ್ಗ ಎಸ್ಪಿಅಭಿನವ ಖರೆ ಸ್ಥಳಕ್ಕೆ ಭೇಟಿ ಮಾಡಿ ಶಾಂತಿ ವಾತಾವರಣ ನಿರ್ಮಾಣ ಮಾಡಿದ್ದಾರೆ. ಈ ಘಟನೆ ಕುರಿತು ವಿಡಿಯೋ ಆಧರಿಸಿ ತನಿಖೆ ನಡೆಸಲು ಆದೇಶ ನೀಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News