ಪೊಲೀಸ್ ಬ್ಲಾಗ್ ಸಮರ್ಪಕ ಅಪ್‌ಡೇಟ್ ಆಗುತ್ತಿಲ್ಲ
ಶಿವಮೊಗ್ಗ, ಫೆ.15: ಜಿಲ್ಲೆಯ ನಾಗರಿಕರಿಗೆ ಪೊಲೀಸ್ ಇಲಾಖೆಯ ಮಾಹಿತಿ ರವಾನಿಸಲು ಹಾಗೂ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವರದಿಯಾಗುವ ಅಪರಾಧ ವರದಿಗಳ ಮಾಹಿತಿ ನೀಡಲು ರೂಪಿಸಲಾಗಿರುವ ಜಿಲ್ಲಾ ಪೊಲೀಸ್ ಇಲಾಖೆಯ ಅಧಿಕೃತ ಅಂತರ್ಜಾಲ ತಾಣದಲ್ಲಿ ಇತ್ತೀಚೆಗೆ ಸಮರ್ಪಕವಾಗಿ ಮಾಹಿತಿಗಳು ಅಪ್‌ಡೇಟ್ ಆಗುತ್ತಿಲ್ಲ. ಇದರಿಂದ ಅಪರಾಧ ವರದಿಗಳ ಮಾಹಿತಿ ಸಂಗ್ರಹಿಸಲು ಪತ್ರಕರ್ತರು ಪರದಾಡುವಂತಾಗಿದೆ!
ಪ್ರಸ್ತುತ ರಾಜ್ಯದ ಎಲ್ಲ ಜಿಲ್ಲಾ ಪೊಲೀಸ್ ಇಲಾಖೆಗಳು ತಮ್ಮದೇ ಆದ ಬ್ಲಾಗ್ ಅಥವಾ ವೆಬ್‌ಸೈಟ್ ಮೂಲಕ ದಿನಂಪ್ರತಿ ಜಿಲ್ಲಾ ವ್ಯಾಪ್ತಿಯಲ್ಲಿ ದಾಖಲಾಗುವ ಅಪರಾಧ ಕೃತ್ಯಗಳ ಮಾಹಿತಿ ಸೇರಿದಂತೆ ಇತರ ವಿವರಗಳನ್ನು ನಾಗರಿಕರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಿವೆ. ಅದರಂತೆ ಜಿಲ್ಲಾ ಪೊಲೀಸ್ ಇಲಾಖೆಯು ಪ್ರತ್ಯೇಕ ಬ್ಲಾಗ್ ರೂಪಿಸಿದ್ದು, ಈ ಬ್ಲಾಗ್‌ನಲ್ಲಿ ಅಪರಾಧ ವಿವರಗಳ ಮಾಹಿತಿ ಸೇರಿದಂತೆ ಇಲಾಖೆ ಆಯೋಜಿಸುವ ಕಾರ್ಯಕ್ರಮ ಮತ್ತಿತರ ವಿವರಗಳನ್ನು ಪ್ರಕಟಿಸಲಾಗುತ್ತಿದೆ. ಇದು ಪತ್ರಕರ್ತರಿಗೆ ಮಾತ್ರವಲ್ಲದೆ ನಾಗರಿಕರಿಗೂ ಅನುಕೂಲವಾಗುತ್ತಿದೆ.
ರವಿ ಡಿ. ಚೆನ್ನಣ್ಣವರ್‌ರು ಎಸ್ಪಿಯಾಗಿದ್ದ ವೇಳೆ, ಈ ಬ್ಲಾಗ್‌ನಲ್ಲಿ ದಿನಂಪ್ರತಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗುತ್ತಿದ್ದ ಅಪರಾಧ ಕೃತ್ಯಗಳ ವಿವರ ಪ್ರಕಟಿಸಲಾಗುತ್ತಿತ್ತು. ಬ್ಲಾಗ್ ಮೂಲಕ ಪತ್ರಕರ್ತರು ಸುಲಭವಾಗಿ ಅಪರಾಧ ವಿವರ ಹಾಗೂ ಇತರ ಮಾಹಿತಿಗಳನ್ನು ಸಂಗ್ರಹಿಸಿ ಸಾರ್ವಜನಿಕರ ಗಮನಕ್ಕೆ ತರುವ ಕೆಲಸ ಮಾಡುತ್ತಿದ್ದರು.
ಇದರಿಂದ ನಾಗರಿಕರು ಕೂಡ ಎಚ್ಚೆತ್ತುಕೊಳ್ಳಲು ಸಹಾಯಕವಾಗುತ್ತಿತ್ತು. ಆದರೆ ಇತ್ತೀಚೆಗೆ ಬ್ಲಾಗ್‌ನಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವರದಿಯಾಗುವ ಅಪರಾಧ ಕೃತ್ಯಗಳ ಮಾಹಿತಿ ಸಮರ್ಪಕವಾಗಿ ಅಪ್‌ಡೇಟ್ ಆಗುತ್ತಿಲ್ಲ. ಮಾಹಿತಿಯ ಆಧಾರದ ಮೇಲೆ ಪತ್ರಕರ್ತರು ಸಂಬಂಧಿಸಿದ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದರೆ ಸಮರ್ಪಕ ಮಾಹಿತಿ ಲಭ್ಯವಾಗುತ್ತಿಲ್ಲ. ‘ಯಾವುದೇ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮೇಲ್ಪಟ್ಟ ಪೊಲೀಸ್ ಅಧಿಕಾರಿಗಳು ಮಾತ್ರ ಪತ್ರಿಕೆಗಳಿಗೆ ಅಧಿಕೃತ ಮಾಹಿತಿ ನೀಡಬಹುದಾಗಿದೆ. ಉಳಿದಂತೆ ಕೆಳಹಂತದ ಅಧಿಕಾರಿಗಳು ಪತ್ರಿಕೆಗಳಿಗೆ ಮಾಹಿತಿ ನೀಡಲು ಅವಕಾಶವಿಲ್ಲವಾಗಿದೆ.
ಎಸ್ಪಿ ಬಳಿಯೇ ಮಾಹಿತಿ ಕೇಳಿ...’ ಎಂದು ಕೆಲ ಪೊಲೀಸ್ ಅಧಿಕಾರಿಗಳು ಪತ್ರಕರ್ತರಿಗೆ ನೇರವಾಗಿಯೇ ಹೇಳುತ್ತಿದ್ದಾರೆ. ‘ಮೊದಲೇ ನಮ್ಮ ಮೇಲೆ ಕರ್ತವ್ಯದ ಒತ್ತಡ ಹೆಚ್ಚಿದೆ. ಕೆಲ ಪ್ರಕರಣಗಳ ಬಗ್ಗೆ ಒಂದಿಬ್ಬರು ಪತ್ರಕರ್ತರಿಗೆ ಮಾಹಿತಿ ನೀಡಬಹುದು. ಆದರೆ ಸಾಲು ಸಾಲು ಪತ್ರಕರ್ತರು ಕರೆ ಮಾಡಿ ಮಾಹಿತಿ ಕೇಳುತ್ತಾರೆ. ಇಂತಹ ಸಂದರ್ಭದಲ್ಲಿ ಮಾಹಿತಿ ನೀಡುವುದು ಕಷ್ಟ ಸಾಧ್ಯವಾಗುತ್ತದೆ’ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಪೊಲೀಸ್ ಅಧಿಕಾರಿಯೋರ್ವರು ಹೇಳುತ್ತಾರೆ.
ಗಮನಹರಿಸಲಿ: ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಅವರು ಇಲಾಖೆಯ ಬ್ಲಾಗ್‌ನಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವರದಿಯಾಗುವ ಪ್ರಮುಖ ಅಪರಾಧ ಕೃತ್ಯಗಳ ವಿವರಗಳನ್ನು ಬ್ಲಾಗ್‌ನಲ್ಲಿ ಪ್ರಕಟಿಸಲು ಆದ್ಯ ಗಮನ ಹರಿಸಬೇಕಾಗಿದೆ. ಇದರಿಂದ ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಾಗರಿಕರು ಮಾಹಿತಿ ಹೊಂದಲು ಸಹಕಾರಿಯಾಗುತ್ತದೆ ಎನ್ನುವುದು ಕೆಲ ಪತ್ರಕರ್ತರ ಅಭಿಪ್ರಾಯ.