×
Ad

​34 ವರ್ಷಗಳ ಬಳಿಕ ಆರ್‌ಟಿಸಿ ಭಾಗ್ಯ

Update: 2017-02-15 23:06 IST

ಮಡಿಕೇರಿ, ಫೆ.15: ಕಾಫಿ ಸಾಗುವಳಿ ಮಾಡಿದ ಜಾಗಕ್ಕೆ ಸಂಬಂಧಿಸಿದಂತೆ ಆರ್‌ಟಿಸಿ ನೀಡಲು ಕಂದಾಯ ಇಲಾಖೆ ಸುಮಾರು 34 ವರ್ಷಗಳ ಕಾಲ ನಿರಂತರ ಸತಾಯಿಸಿದ ಪ್ರಸಂಗವನ್ನು ಬಿಚ್ಚಿಟ್ಟಿರುವ ನಾಪೊಕ್ಲು ಗ್ರಾಮದ ಬೆಳೆೆಗಾರ ಕುಲ್ಲೇಟಿರ ಜಿ. ನಾಣಯ್ಯ, ಜಿಲ್ಲಾಡಳಿತ ಗ್ರಾಮ ಮಟ್ಟದಲ್ಲಿ ಕಂದಾಯ ಅದಾಲತ್ ನಡೆಸುವ ಮೂಲಕ ಕಡತಗಳ ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಂದಾಯ ಇಲಾಖೆಯಲ್ಲಿ ಲಂಚ ನೀಡದೇ ಮತ್ತು ದಲ್ಲಾಳಿಗಳ ಮಧ್ಯಸ್ಥಿಕೆ ಇಲ್ಲದೇ ಯಾವುದೇ ಕಡತಗಳು ವಿಲೇವಾರಿಯಾಗುವುದಿಲ್ಲವೆಂದು ಆರೋಪಿಸಿದ್ದಾರೆ. ತಾವು ಒಂದೇ ಒಂದು ರೂಪಾಯಿ ಲಂಚ ನೀಡದೆ ಆರ್‌ಟಿಸಿ ಪಡೆಯಲು 34 ವರ್ಷಗಳೇ ಬೇಕಾಯಿತು’ ಎಂದು ಬೇಸರ ವ್ಯಕ್ತಪಡಿಸಿದರು.


ಕುಟುಂಬದ ಆಸ್ತಿಯಿಂದ ತನ್ನ ಅನುಭವ ಸ್ವಾಧೀನದಲ್ಲಿರುವ ಅಂದಾಜು 1.5 ಎಕರೆ ಸಾಗುವಳಿ ಮಾಡಿದ ಭೂಮಿಯನ್ನು ಸರ್ವೇ ಮಾಡಿ, ದುರಸ್ತಿ ಮತ್ತು ಕಂದಾಯಕ್ಕೆ ಒಳಪಡಿಸಿ, ಆರ್‌ಟಿಸಿ ಮಾಡಿಕೊಡಬೇಕೆಂದು ಸೂಕ್ತ ದಾಖಲಾತಿಗಳೊಂದಿಗೆ 1982ರ ಸೆ.10 ರಂದು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ನಿರಂತರವಾಗಿ ಕಚೇರಿಗೆ ಬಂದು ಹೋದರೂ ಯಾವುದೇ ಕಾರಣ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದರೇ ಹೊರತು ಅರ್ಜಿ ವಿಲೆೇವಾರಿ ಮಾಡುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ.


ಲಂಚವನ್ನು ನೀಡದೆ ನಿರಂತರವಾಗಿ ದೂರು ದುಮ್ಮಾನಗಳ ಮೂಲಕ ಜಿಲ್ಲಾಡಳಿತದ ಗಮನವನ್ನು 34 ವರ್ಷಗಳ ಕಾಲ ಸೆಳೆಯುತ್ತಾ ಬಂದಿದ್ದು, 2016ರ ಜುಲೈ 20 ರಂದು ನಾಪೊಕ್ಲುವಿನಲ್ಲಿ ನಡೆದ ಕಂದಾಯ ಅದಾಲತ್‌ನಲ್ಲಿ ಮತ್ತೊಮ್ಮೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದೆ. ಕೇವಲ 1.50 ಎಕರೆ ಜಾಗಕ್ಕೆ ಸುಮಾರು 90ಕ್ಕೂ ಅಧಿಕ ದಾಖಲೆಗಳ ಕ್ರೋಡೀಕರಣ ಮಾಡಿಕೊಳ್ಳಬೇಕಾದ ದುಃಸ್ಥಿತಿ ಬಂದ ನಂತರ 2017 ಜನವರಿಯಲ್ಲಿ ಆರ್‌ಟಿಸಿ ಲಭಿಸಿದೆ. ಇಷ್ಟು ವರ್ಷಗಳ ಕಾಲ ಕಡತ ವಿಲೆೇವಾರಿಯಾಗದೇ ಬಾಕಿ ಉಳಿದಿರುವುದಕ್ಕೆ ತಾವು ಲಂಚ ನೀಡದಿರುವುದೇ ಕಾರಣವೆಂದು ಕಲ್ಲೇಟಿರ ಜಿ. ನಾಣಯ್ಯ ಆರೋಪಿಸಿದರು.


ತಮ್ಮ ಪ್ರಕರಣ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಈ ರೀತಿಯ ಪರಿಸ್ಥಿತಿ ಯಾರಿಗೂ ಎದುರಾಗಬಾರದೆಂದರು. ಜಿಲ್ಲಾಡಳಿತ ಪ್ರತಿ ಗ್ರಾಮಗಳಲ್ಲಿ ಕಂದಾಯ ಅದಾಲತ್‌ಗಳನ್ನು ನಡೆಸಬೇಕೆಂದು ತಿಳಿಸಿದರು. 2011 ರಲ್ಲಿ ತಾವು ಮತ್ತೊಂದು ಜಾಗಕ್ಕೆ ಸಂಬಂಧಿಸಿದ ಅರ್ಜಿ ಸಲ್ಲಿಸಿದ್ದು, ಇಲ್ಲಿಯವರೆಗೆ ವಿಲೇವಾರಿಯಾಗಿಲ್ಲ. ಈ ಕಡತಕ್ಕೂ 34 ವರ್ಷಗಳು ಬೆೇಕಾಗಬಹುದೆಂದು ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News