‘ಚಲೋ ತುಮಕೂರು’ ಸ್ವಾಭಿಮಾನಿ ಸಂಕಲ್ಪ ನಡಿಗೆಗೆ ಚಾಲನೆ
ತುಮಕೂರು, ಫೆ.16: ಗುಬ್ಬಿಯಲ್ಲಿ ಅಭಿಷೇಕ್ ಎಂಬ ದಲಿತ ಯುವಕನ ಮೇಲಿನ ಅಮಾನವೀಯ ಹಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ನಡೆಯುತ್ತಿರುವ ದಲಿತ ದೌರ್ಜನ್ಯವನ್ನು ಖಂಡಿಸಿ ದಲಿತ ದಮನಿತರ ವೇದಿಕೆ ಹಾಹೂ ದಲಿತ ಪ್ರಗತಿಪರರ ಒಕ್ಕೂಟದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ‘ಚಲೋ ತುಮಕೂರು’ ಮಾನವತಾ ಸಮಾವೇಶ’ ಹಾಗೂ ‘ಸ್ವಾಭಿಮಾನಿ ಸಂಕಲ್ಪ ನಡಿಗೆ’ಗೆ ತುಮಕೂರಿನಲ್ಲಿ ಇದೀಗ ಚಾಲನೆ ದೊರೆತಿದೆ.
ಗುಬ್ಬಿಯಿಂದ ಸ್ವಾಭಿಮಾನಿ ಸಂಕಲ್ಪ ನಡಿಗೆ’ಯಲ್ಲಿ ನೂರಾರು ಬೈಕ್ ಸವಾರರು ಪಾಲ್ಗೊಂಡು ಬೈಕ್ ರ್ಯಾಲಿ ಮೂಲಕ ಭೀಮಾಸಂದ್ರಕ್ಕೆ ಆಗಮಿಸಿದ್ದಾರೆ. ಭೀಮಾಸಂದ್ರದಿಂದ ಮಾನವತಾ ಸಮಾವೇಶ ನಡೆಯುವ ಜಿಲ್ಲಾ ಕೇಂದ್ರ ಗ್ರಂಥಾಲಯದ ಆವರಣಕ್ಕೆ ಬೃಹತ್ ಮೆರವಣಿಗೆ ನಡೆಯುತ್ತಿದೆ. ಮೆರವಣಿಗೆಯಲ್ಲಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿರುವ ಸಾವಿರಾರು ಮಂದಿ ಭಾಗವಹಿಸಿದ್ದಾರೆ.
ಗುಬ್ಬಿ ಗೇಟ್‌ನಿಂದ ಸಾವಿರಾರು ಸಂಖ್ಯೆಯಲ್ಲಿ ಹೋರಾಟಗಾರರು ಸಂಕಲ್ಪ ನಡಿಗೆಯ ಮೂಲಕ ಸಮಾವೇಶ ನಡೆಯುತ್ತಿರುವ ಮೈದಾನಕ್ಕೆ ತೆರಳುತ್ತಿದ್ದಾರೆ.
ಕೆಲ ದಿನಗಳ ಹಿಂದೆ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಅಭಿಷೇಕ್ ಎಂಬ ದಲಿತ ಯುವಕನನ್ನು ಬೆತ್ತಲೆಗೊಳಿಸಿ, ಕೊರಳಿಗೆ ಚಪ್ಪಲಿ ಹಾರ ಹಾಕಿ ಮನಬಂದಂತೆ ಬಡಿದು ಸಾಯುವ ಸ್ಥಿತಿಯಲ್ಲಿ ಸ್ಮಶಾನವೊಂದರ ಬಳಿ ಎಸೆದು ಹೋಗಲಾಗಿತ್ತು. ಹಲ್ಲೆ ನಡೆಸಿದವರ ಮೇಲೆ ದೂರು ದಾಖಲಾಗಿ ಬಂಧಿತರಾಗಿದ್ದರೂ ಕಿಡ್ನಾಪ್ ಮಾಡಿ, ಕೊಲೆ ಬೆದರಿಕೆ ನಡೆಸಿರುವ ಬಗ್ಗೆ ಪ್ರಕರಣಗಳನ್ನು ದಾಖಲಿಸಿರಲಿಲ್ಲ. ಅದಲ್ಲದೆ ಇತ್ತೀಚೆಗೆ ಜಮಖಂಡಿಯಲ್ಲಿ ಹಸಿವಿನಿಂದ ದೇವಸ್ಥಾನದಲ್ಲಿ ಪ್ರಸಾದ ತಿಂದ 15 ವರ್ಷದ ದಲಿತ ಬಾಲಕನನ್ನು ಅಡುಗೆ ಸೌಟಿನಿಂದಲೇ ಬಡಿದು ಹತ್ಯೆಗೈಯಲಾಗಿದೆ. ಗುಡಿಬಂಡೆಯಲ್ಲಿ ಮುರಳಿ ಎಂಬ 9ನೆ ತರಗತಿ ಬಾಲಕನನ್ನು ಮೇಲ್ಜಾತಿ ಹುಡುಗಿಯನ್ನು ಮಾತಾಡಿಸಿದ್ದಕ್ಕೆ ಥಳಿಸಿ, ಆತನ ದೇಹ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಸಿಕ್ಕಿತು. ಲಕ್ಕವಳ್ಳಿಯಲ್ಲಿ ಸುಡು ಗಾಡು ಸಿದ್ದ ಮಹಿಳೆಯ ಮೇಲೆ ಅತ್ಯಾಚಾರ ಪ್ರಯತ್ನ ನಡೆದು ಆಕೆಯ ಇಡೀ ಕುಟುಂಬವನ್ನೇ ಜೀವಂತ ಸುಡುವ ಪ್ರಯತ್ನ ನಡೆದಿತ್ತು. ಇಂತಹ ನೂರಾರು ಘಟನೆಗಳು ನಿರಂತರವಾಗಿ ನಡೆಯುತ್ತಿದ್ದರೂ ನಮ್ಮ ವ್ಯವಸ್ಥೆ ಮೂಕವಾಗಿದೆ. ಈ ದೌರ್ಜನ್ಯ ಘಟನೆಗಳಲ್ಲಿ ನ್ಯಾಯ ಎಂಬುದು ಮರೀಚಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ನಾಡಿನಲ್ಲಿ ಜಾತಿ ದೌರ್ಜನ್ಯಗಳು ಕೊನೆಗೊಳ್ಳಲಿ, ಮನುಷ್ಯರು ಪರಸ್ಪರ ಜಾತಿಜಾತಿಗಳಾಗಿ ನೋಡದೆ ಮನುಷ್ಯ ಮನುಷ್ಯರಾಗಿ ನೋಡುವಂತಾಗಲಿ, ನೊಂದ ಜೀವಗಳಿಗೆ ನ್ಯಾಯ ಸಿಗಲಿ, ಸಂವಿಧಾನದ ತತ್ವಗಳಾದ ಸಹೋದರತೆ, ಸಹಬಾಳ್ವೆಗಳು ನೆಲೆಗೊಳ್ಳಲಿ ಎಂಬ ಆಶಯದೊಂದಿಗೆ ಈ ಸಮಾವೇಶ ಆಯೋಜಿಸಲಾಗಿದೆ.