ಮಾಜಿ ಪ್ರೇಯಸಿಯ ಸೆಕ್ಸ್ ವೀಡಿಯೋ ಅಂತರ್ಜಾಲದಲ್ಲಿ ಅಪ್ ಲೋಡ್ ಮಾಡಿದ ಟೆಕ್ಕಿ ಬಂಧನ

Update: 2017-02-17 10:26 GMT

ಬೆಂಗಳೂರು, ಫೆ.17: ತನ್ನ ಮಾಜಿ ಪ್ರೇಯಸಿಯನ್ನೊಳಗೊಂಡ ಸೆಕ್ಸ್ ಟೇಪ್ ಒಂದನ್ನು ಅಶ್ಲೀಲ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿದ ಆರೋಪದ ಮೇಲೆ ನಗರದ ಮಾನ್ಯತಾ ಟೆಕ್ ಪಾರ್ಕ್ ನಲ್ಲಿನ ಕಂಪೆನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ 29 ವರ್ಷದ ಯುವಕನನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಹೇಮಂತ್‌ ನಗರದ ಖಾಸಗಿ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಕಲಿಯುತ್ತಿದ್ದ ಚಿಕ್ಕಮಗಳೂರು ಮೂಲದ ಯುವತಿಯೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮೂರು ತಿಂಗಳ ಹಿಂದೆ ಅವರಿಬ್ಬರು ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಲು ನಿರ್ಧರಿಸಿದ ಸಮಯದಲ್ಲಿ ಆತ ಯುವತಿಯೊಂದಿಗೆ ಎರಡು ವರ್ಷಗಳ ಹಿಂದೆ ಚಿತ್ರೀಕರಿಸಿದ್ದ ಸೆಕ್ಸ್ ವೀಡಿಯೋವನ್ನು ಬಹಿರಂಗಪಡಿಸುವುದಾಗಿ ಬೆದರಿಸಿದ್ದನೆ. ಅಲ್ಲದೆ, ಆಕೆಗೆ ಕಾಲೇಜು ಬದಲಾಯಿಸಿ ಚಿಕ್ಕಮಗಳೂರಿಗೆ ಹಿಂದಿರುಗುವಂತೆಯೂ ಒತ್ತಾಯಿಸಿದ್ದನೆಂದು ಯುವತಿ ದೂರಿದ್ದಾಳೆ.

ಎರಡು ವಾರಗಳ ಹಿಂದೆ ಆತ ಆ ವೀಡಿಯೋವನ್ನು ಪೋರ್ನ್ ವೆಬ್ ಸೈಟ್ ಒಂದರಲ್ಲಿ ಅಪ್ ಲೋಡ್ ಮಾಡಿದ್ದು, ಯುವತಿಗೆ ತಿಳಿಯುತ್ತಿದ್ದಂತೆಯೇ ಆಕೆ ಚಿಕ್ಕಮಗಳೂರು ಪೊಲೀಸರಿಗೆ ದೂರು ನೀಡಿದ್ದಾಳೆ. ಕೂಡಲೇ ಹೇಮಂತ್ ನನ್ನು ಆತನ ಕಚೇರಿಯಿಂದ ಬಂಧಿಸಲಾಯಿತು. ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News