ಕ್ರಿಕೆಟ್ ಬೆಟ್ಟಿಂಗ್: ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷ ಕಾಂಚಾನ್ ಗೌಡ ಸಹಿತ 8ಕ್ಕೂ ಅಧಿಕ ಆರೋಪಿಗಳ ಬಂಧನ
ಚಿಕ್ಕಮಗಳೂರು, ಫೆ. 17: ಚಿಕ್ಕಮಗಳೂರಿನಲ್ಲಿ ಅತ್ಯಂತ ಕುತೂಹಲ ಕೆರಳಿಸಿರುವ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾಗಿದ್ದ ಬಿಜೆಪಿ ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷ ಸೇರಿದಂತೆ 4 ಮಂದಿಯನ್ನು ಶುಕ್ರವಾರ ಬಂಧಿಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಒಟ್ಟು 10 ಮಂದಿಯನ್ನು ಬಂಧಿಸಿದಂತಾಗಿದೆ.
ಚಿಕ್ಕಮಗಳೂರು ನಗರ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಕಾಂಚಾನ್ ಗೌಡ ಅಲಿಯಾಸ್ ರಾಕಿ (28), ಗ್ರೀನ್ ಹೋಟೆಲ್ ಮಾಲಕ ಹಾಗೂ ಪೈನಾನ್ಸ್ ಕೆಲಸಗಾರ ಗಿರೀಶ್(36), ವಿಜಯಪುರ ಬಡಾವಣೆಯ ಶಿವದತ್(43), ಬೆಂಗಳೂರು ರಾಜೇಶ್ವರಿ ನಗರ ಬಡಾವಣೆಯ ಚೇತನ್ ಅಲಿಯಾಸ್ ಚೇತನ್ ಶೇಟ್ ಅಲಿಯಾಸ್ ಸಂತು ಕಟ್ಟೆ(34) ಎಂಬವರನ್ನು ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದವರನ್ನು ಈ ವರೆಗೆ ಬಂಧಿಸಿರುವ ಪೊಲೀಸಸ್ ತಂಡ, ಬಂಧಿತರಿಂದ ಒಟ್ಟು 2.13 ಲಕ್ಷ ರೂ. ನಗದು, ಒಂದು ಲ್ಯಾಪ್‌ಟ್ಯಾಪ್, ಒಂದು ಕಾರು ಮತ್ತು 16 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಳಾಗಿದೆ ಎಂದು ಎಸ್ಪಿಕೆ. ಅಣ್ಣಾಮಲೈ ತಿಳಿಸಿದ್ದಾರೆ.
ಪ್ರಕರಣದ ಸಂಬಂಧ ಫೆ5ರಂದು ನಗರಸಭೆಯ ಬಿಜೆಪಿ ಸದಸ್ಯ ರವಿ ಕುಮಾರ್ ಅಲಿಯಾಸ್ ಕಾಯಿ ರವಿ(40), ಕೋಟೆ ಬಡಾವಣೆಯ ಪ್ರಶಾಂತ(34), ಹಿರೇಕೊಳಲೆಯ ಅಭಿಷೇಕ್(28), ನಾಯ್ಡು ಬೀದಿಯ ವೆಂಕಟೇಶ್(42), ಅಂಡೇಛತ್ರದ ಅಫ್ಝಲ್(30), ಮಾರ್ಕೆಟ್ ರಸ್ತೆಯ ಮೋಹನ(34) ಎಂಬ 6 ಮಂದಿ ಮಂದಿಯನ್ನು ಬಂಧಿಸಿ ಕಾರಾಗೃಹಕ್ಕೆ ಕಳುಹಿಸಲಾಗಿತ್ತು.
ಶುಕ್ರವಾರ ಬಂಧನಕ್ಕೊಳಗಾದ ಆರೋಪಿ ಕಾಂಚಾನ್ ಗೌಡ ಶಾಸಕ ಸಿ.ಟಿ.ರವಿ, ಸಂಸದೆ ಶೋಬಾ ಕರಂದ್ಲಾಜೆ ಹಾಗೂ ಸ್ವಾಮೀಜಿಯೋರ್ವರ ಜತೆ ನಿಂತು ತೆಗೆಸಿಕೊಮಡಿರುವ ಫೊಟೋಗಳು ಅಂತರ್ಜಾಲ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಈ ಪ್ರಕರಣದಲ್ಲಿ ಮೇಲಿಂದ ಮೇಲೆ ಬಿಜೆಪಿ ಮುಖಂಡರು ಸೆರೆಯಾಗುತ್ತಿರುವುದು ಶಾಸಕ ಸಿ.ಟಿ.ರವಿ ಸಹಿತ ಜಿಲ್ಲೆಯ ಬಿಜೆಪಿ ಮುಖಂಡರಿಗೆ ತೀವ್ರ ಇರಿಸು-ಮುರಿಸು ಉಂಟು ಮಾಡಿದೆ.
ಆರೋಪಿಗಳ ವಾಟ್ಸಾಪ್ ಗ್ರೂಪ್‌ಗಳಲ್ಲಿ ಕಂಡು ಬಂದಿರುವ ಸುಮಾರು 40 ಮಂದಿಯ ಹೆಸರುಗಳು ಮತ್ತು ಅವರ ವಿಳಾಸಗಳನ್ನು ತಿಳಿಯಲು ಮೊಬೈಲನ್ನು ಹೈದರಾಬಾದಿನ ಲ್ಯಾಬ್‌ಗೆ ಕಳುಹಿಸಲಾಗಿದೆ ಎಂದು ಇತ್ತೀಚೆಗೆ ಎಸ್ಪಿಕೆ.ಅಣ್ಣಾಮಲೈ ತಿಳಿಸಿದ್ದರು. ಅದರಂತೆ ಮುಂದುವರಿಯಲಿರುವ ಕಾರ್ಯಾಚರಣೆಯಲ್ಲಿ ಇನ್ನಷ್ಟು ದಂಧೆಕೋರರ ಬಂಧನ ನಡೆಯುವ ಸಾಧ್ಯತೆಗಳು ದಟ್ಟವಾಗಿದೆ.