ಭಟ್ಕಳ: ಕುತ್ತಿಗೆಗೆ ದುಪ್ಪಟ್ಟಾದಿಂದ ಬಿಗಿದು ಪತಿಯ ಕೊಲೆ
ಭಟ್ಕಳ, ಫೆ.17: ಎರಡನೇ ಮದುವೆಯಾಗಿರುವುದನ್ನು ಸಹಿಸಲಾಗದ ಪತ್ನಿಯೋರ್ವಳು ತನ್ನ ಗಂಡನನ್ನು ಕೊಲೆಗೈದಿರುವ ಘಟನೆ ತಾಲೂಕಿನ ಆಝಾದ್ ನಗರದಲ್ಲಿ ಶುಕ್ರವಾರ ನಡೆದಿದೆ.
ಆಝಾದ್ ನಗರ ನಿವಾಸಿ ಮುಹಮ್ಮದ್ ನಾಸಿರ್ ಖಲಿಫಾ ಮಸ್ತಾನ್(35) ಕೊಲೆಯಾದ ವ್ಯಕ್ತಿ. ಆತನ ಮೊದಲ ಪತ್ನಿ ರೇಶ್ಮಾಖಾನ್ ಕೊಲೆಮಾಡಿದಾಕೆ ಎಂದು ತಿಳಿದು ಬಂದಿದೆ.
ಕೊಲೆ ಮಾಡಿರುವುದಾಗಿ ಒಪಿ್ಪದ ಪತ್ನಿ
ನಾಸಿರ್ ತನ್ನ ಕೊರಳಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹಾಗೂ ಸ್ಥಳೀಯರನ್ನು ರೇಶ್ಮಾಖಾನ್ ಮತ್ತು ಆಕೆ ಸಂಬಂಧಿಕರು ನಂಬಿಸಿದ್ದರು. ಆದರೆ, ತನ್ಝೀಮ್ ಸಂಸ್ಥೆಯ ಮುಖಂಡರ ಒತ್ತಡಕ್ಕೆ ಮಣಿದ ಪೊಲೀಸರು ರೇಶ್ಮಾರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಗಂಡ ನಾಸಿರ್‌ನನ್ನು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮುಹಮ್ಮದ್ ನಾಸಿರ್ ಖಲಿಫಾ ಮಸ್ತಾನ್ ಇಬ್ಬರು ಹೆಂಡತಿಯರನ್ನು ಹೊಂದಿದ್ದರು. ಎರಡನೆ ಮದುವೆಯಾಗಿರುವ ಬಗ್ಗೆ ಮೊದಲನೇ ಪತ್ನಿ ರೇಶ್ಮಾಖಾನ್ ಮತ್ತು ಮುಹಮ್ಮದ್ ನಾಸಿರ್ ಖಲಿಫಾ ಮಸ್ತಾನ್ ಅವರ ಮಧ್ಯೆ ಹಲವು ಬಾರಿ ಜಗಳಗಳು ನಡೆದಿದ್ದವು ಎನ್ನಲಾಗಿದೆ. ಆದರೆ, ನಾಸಿರ್ ಶುಕ್ರವಾರ ಮೊದಲನೇ ಪತ್ನಿಯ ಮನೆಯಲ್ಲಿದ್ದ ವೇಳೆ ಪತ್ನಿ ರೇಶ್ಮಾಖಾನ್ ನಾಸಿರ್‌ನ ಕುತ್ತಿಗೆಗೆ ದುಪ್ಪಟ್ಟಾದಿಂದ ಬಿಗಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.