×
Ad

ಪೊಲೀಸರ ಕೊಲೆಗೆ ಯತ್ನ, ಕರ್ತವ್ಯಕ್ಕೆ ಅಡ್ಡಿ: ಆರೋಪಿಗಳಿಗೆ ಶಿಕ್ಷೆ

Update: 2017-02-17 22:45 IST

ಚಿಕ್ಕಮಗಳೂರು, ಫೆೆ.17: ಅಕ್ರಮ ದನ ಸಾಗಣೆ ಮಾಡುತ್ತಿದ್ದರೆನ್ನಲಾದ ಐವರು ಆರೋಪಿಗಳು ಪೊಲೀಸರ ಮೇಲೆ ವಾಹನ ಹತ್ತಿಸಿ ಕೊಲೆಗೆ ಪ್ರಯತ್ನಿಸಿದ ಹಿನ್ನೆಲೆಯಲ್ಲಿ 2ನೆ ಜಿಲ್ಲಾ ಸತ್ರ ನ್ಯಾಯಾಲಯವು ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶ ನೀಡಿದೆ.
 2014ರ ಸೆ.10ರಂದು ಮೂಡುಬಿದಿರೆ ನಿವಾಸಿ ಆರೋಪಿಗಳಾದ ಅಬ್ದುಲ್ ರಝಾಕ್, ಶರೀಫ್, ಅಬ್ದುಲ್ ರಶೀದ್, ಅಲ್ತಾಫ್ ಮುಹಮ್ಮದ್ ಎಂಬವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಪಿಕ್‌ಅಪ್‌ವಾಹನದಲ್ಲಿ ಅಕ್ರಮ ದನ ಸಾಗಾಟ ಮಾಡಲು ಪ್ರಯತ್ನಿಸಿದ್ದರು.

ಕೊಪ್ಪದ ಅಲ್ಲಮಕ್ಕಿ ಗ್ರಾಮದಲ್ಲಿ ಗುತ್ಯಮ್ಮ ದೇವಸ್ಥಾನದ ಬಳಿ ಮಲಗಿದ್ದ 3 ಜಾನುವಾರುಗಳನ್ನು ಅಕ್ರಮವಾಗಿ ಪಿಕ್‌ಅಪ್ ವಾಹನಕ್ಕೆ ತುಂಬಿಕೊಂಡು ವೇಗವಾಗಿ ಹೋಗುತ್ತಿದ್ದಾಗ ಪೊಲೀಸರು ಹಿಂಬಾಲಿಸಿದರು.


ಜಯಪುರ ಹಾಗೂ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸ್ ಬ್ಯಾರಿಕೇಡ್ ಇಟ್ಟು ತಡೆಯಲು ಯತ್ನಿಸಿದಾಗ ಬ್ಯಾರಿಕೇಡ್‌ಗಳನನು ಕೆಡವಿ ಪರಾರಿಯಾಗಿದ್ದರು. ಅಲ್ಲದೇ ವಾಹನವನ್ನು ನಿಲ್ಲಿಸದೇ ಪರಾರಿಯಾಗಲು ರಸ್ತೆ ಮಾರ್ಗವಾಗಿ ತೆರಳಿದ್ದರು. ಈ ಸಮಯದಲ್ಲಿ ಬಾಳೂರು ಕಾಳಿಕಟ್ಟೆ ಎಂಬಲ್ಲಿ ಮೂರು ದನಗಳನ್ನು ಕೆಳಗೆ ಹಾಕಿ ಪರಾರಿಯಾಗಿದ್ದರು. ಈ ವೇಳೆ 2 ಜಾನುವಾರುಗಳು ಮೃತಪಟ್ಟಿದ್ದು, ಒಂದು ತೀವ್ರ ಗಾಯಗೊಂಡಿತ್ತು.


ನಂತರ ಕಳಸ ಭಾಗದ ಕೈಮರ ಎಂಬಲ್ಲಿ ಚೆಕ್‌ಪೋಸ್ಟ್ ಬಳಿ ಕಳಸ ಪೊಲೀಸರು ಪಿಕ್‌ಅಪ್ ವಾಹನವನ್ನು ತಡೆಯಲು ಪ್ರಯತ್ನಿಸಿದಾಗ ಸಂಜೆ 6:15ರ ಸಮಯದಲ್ಲಿ ಪೊಲೀಸರ ಮೇಲೆ ವಾಹನ ಹತ್ತಿಸಿ ಕೊಲೆಗೆ ವಿಫಲ ಯತ್ನ ನಡೆಸಿದ್ದರು. ಈ ವೇಳೆ ಪೊಲೀಸರು ಆರೋಪಿಗಳನ್ನು ಸೆರೆ ಹಿಡಿದಿದ್ದರು. ಕಳಸ ಪೊಲೀಸರು ಮೊಕದ್ದಮೆ ದಾಖಲಿಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಈ ಸಂಬಂಧ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು.

ಈ ಸಂಬಂಧ ವಿಚಾರಣೆ ನಡೆಸಿದ 2ನೆ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಡಿ.ಕಂಬೈಗೌಡ ಪ್ರಕರಣದ ನಾಲ್ವರು ಆರೋಪಿಗಳಿಗೆ 307ರ ಕಲಂ ಅನ್ವಯ 2 ವರ್ಷಗಳ ಶಿಕ್ಷೆ ಹಾಗೂ ತಲಾ 5 ಸಾವಿರ ರೂ. ದಂಡ, ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಕಲಂ 352 ಅಪರಾಧಕ್ಕೆ 5 ಸಾವಿರ ರೂ. ದಂಡ, ದಂಡ ಕೊಡಲು ತಪ್ಪಿದರೆ 3 ತಿಂಗಳ ಸೆರೆವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಎ.ಎಂ. ಸುರೇಶ್‌ಕುಮಾರ್ ಮೊಕದ್ದಮೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News