ಬರ ನಿರ್ವಹಣೆ ನಮ್ಮ ಹೊಣೆ, ಅದಕ್ಕಾಗಿ ಎಷ್ಟೇ ಬೆಲೆ ತೆರಲು ಸಿದ್ದ: ಮುಖ್ಯಮಂತ್ರಿ ಸಿದ್ದರಾಮಯ್ಯ
ಅರಸೀಕೆರೆ, ಫೆ.18: ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ ರಾಜ್ಯದ ಯಾವುದೇ ಗ್ರಾಮವೂ ಕುಡಿಯುವ ನೀರಿನ ಸಮಸ್ಯೆ ಎದುರಿಸಬಾರದು. ಒಂದು ವೇಳೆ ಈ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸದಿದ್ದಲ್ಲಿ ಆಯಾಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದ್ದಾರೆ.
ಅರಸೀಕೆರೆಯಲ್ಲಿಂದು ಸುಮಾರು 530 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಿಲಾನ್ಯಾಸ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರ ಮುಂದುವರೆದಿದೆ ಕಳೆದ ಎರೆಡು ವರ್ಷ ರಾಜ್ಯದ ಪಾಲಿಗೆ ಸವಾಲಿನ ದಿನಗಳು 160 ತಾಲ್ಲೂಕುಗಳು ಬರ ಎದುರಿಸುತ್ತಿವೆ. ಕರಾವಳಿ ಮಲೆನಾಡಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಿದೆ. ಆದರೆ ಜನರ ರಕ್ಷಣೆ ನಮ್ಮ ಹೊಣೆ ಎಷ್ಟೇ ಬೆಲೆ ತೆತ್ತಾದರು ಅದನ್ನು ನಿಭಾಯಿಸುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು.
ಬರ ಪೀಡಿತ ತಾಲ್ಲೂಕುಗಳ ನೀರು ಪೂರೈಕೆಗಾಗಿ ತಲಾ 1.35 ಕೋಟಿ ರೂಪಾಯಿಯಂತೆ ಅನುದಾನ ಒದಗಿಸಿದೆ. ಕುಡಿಯುವ ನೀರು ಪೂರೈಕೆಗೆ ಯಾವುದೇ ಅನುದಾನದ ಕೊರತೆ ಇಲ್ಲ ಈಗಾಗಲೆ 250 ಕೋಟಿ ರೂಪಾಯಿಗಳು ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಇದೆ. ಅದು ಮುಗಿದ ತಕ್ಷಣ ಇನ್ನಷ್ಟು ಹಣ ಬಿಡುಗಡೆ ಮಾಡಲಾಗುವುದು ಎಂದರು.
ಜನ ಜಾನುವಾರುಗಳ ರಕ್ಷಣೆ ನಮ್ಮ ಹೊಣೆ, ನೀರನ್ನು ಎಲ್ಲಿಂದಾದರೂ ತಂದು ಕೊಡಲೇ ಬೇಕು, ಕೊಳವೆ ಬಾವಿ ಕೊರೆಸಿ ಅಥವಾ ಟ್ಯಾಂಕರ್‌ಗಳ ಮೂಲಕ ಅಥವಾ ಇನ್ನಾವುದೇ ಮೂಲದಿಂದಾದರೂ ನೀಡಲೆಬೇಕು. ಮೇವು ಸಂಗ್ರಹಣೆಗೆ 22 ಕೋಟಿ ರೂಪಾಯಿ ಅಗತ್ಯ ಎಂದು ಪಶು ಸಂಗೋಪನಾ ಸಚಿವರು ತಿಳಿಸಿದ್ದಾರೆ. ಎಷ್ಟೇ ಅನುದಾನವಾದರೂ ನೀಡಲು ಸಿದ್ದ. ಪ್ರತಿ ಕೆ.ಜಿ ಮೇವಿಗೆ ಖರೀದಿ ಮತ್ತು ಸಾಗಾಟ ವೆಚ್ಚ ಸೇರಿ 15 ರೂಪಾಯಿ ವೆಚ್ಚವಾಗಲಿದೆ ಅದನ್ನು ಕೇವಲ 2 ರೂಪಾಯಿ ವೆಚ್ಚದಲ್ಲಿ ರೈತರಿಗೆ ನೀಡುವಂತೆ ತಿಳಿಸಲಾಗಿದೆ.
ರಾಜ್ಯದಲ್ಲಿ ಮುಂಗಾರು ಹಿಂಗಾರುಗಳ ವೈಫಲ್ಯ ಹಾಗೂ ಪ್ರವಾಹದಿಂದ ರಾಜ್ಯದ ರೈತರು ಉಟ್ಟಾರೆ 27000 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ. ರಾಜ್ಯ ಸರ್ಕಾರ ಕೇಂದ್ರಕ್ಕಾಗಿ ನೆರವಿನ ಮೋರೆ ಇಟ್ಟಿದ್ದು ಈವರಗೆ 450 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.
ಮಳೆ ವೈಫಲ್ಯದ ಹಿನ್ನಲೆಯಲ್ಲಿ ಜನರು ಗುಳೆ ಹೋಗುವುದನ್ನು ತಪ್ಪಿಸಲು ಮಹಾತ್ಮಗಾಂಧೀ ರಾಷ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಿಗಧಿತ 6 ಕೋಟಿ ಮಾನವ ದಿನಗಳನ್ನು ಮೀರಿ 10 ಕೋಟಿ ಮಾನವ ದಿನಗಳ ಕೆಲಸ ಸೃಜಿಲಾಗುತ್ತಿದೆ. ಇದಕ್ಕಾಗಿ ಕೇಂದ್ರದ ಅನುದಾನ ಬರುವ ವರೆಗೆ ಕಾಯದೆ 1,155 ಕೋಟಿ ರೂಪಾಯಿಗಳನ್ನು ಮುಂಗಡವಾಗಿ ರಾಜ್ಯ ಸರಕಾರ ಬಿಡುಗಡೆ ಮಾಡಿದೆ ಎಂದರು.
ರಾಜ್ಯದ ಜಲಾಶಯಗಳು ಅರ್ಧದಷ್ಟು ತುಂಬಿಲ್ಲ. ಲಭ್ಯವಿರುವ ನೀರು ಕುಡಿಯುವ ಉದ್ದೇಶಕ್ಕೆ ಪೂರೈಸಲು ಸಾಕಾಗುವುದಿಲ್ಲ . ಮೇ ಕೊನೆಯವರೆಗೆ ನೀರು ಕೊಡಲು 3 ಟಿ. ಎಂ.ಸಿ ನೀರಿನ ಕೊರತೆ ಅಗುತ್ತಿದೆ . ಅಗತ್ಯ ಬಿದ್ದರೆ ಜಲಾಶಯದಲ್ಲಿರುವ ಡೆಡ್ ಸ್ಟೊರೇಜ್ ಅನ್ನು ಮೇಲೆತ್ತಿ ಶುದ್ಧೀಕರಿಸಿ ಕೊಡಲು ಯೋಚಿಸುವುದಿಲ್ಲ ಎಂದು ಸಿ.ಎಂ ಹೇಳಿದರು.
ಅರಸೀಕೆರೆಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಲ್ಲಾ ಕ್ಷೇತ್ರಗಳಿಗೂ ಇದೇ ಆಧ್ಯತೆ ನಿಡಲಾಗುತ್ತದೆ ಎಂದು ಅರಸೀಕೆರೆ ಶಾಸಕರ ಪರಿಶ್ರ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು
ಶ್ರವಣಬೆಳಗೊಳದಲ್ಲಿ ನಡೆಯುವ ಮಹಾ ಮಸ್ತಕಾಭಿಷೇಕ ಯಶಸ್ವಿಗೆ ರಾಜ್ಯ ಸರ್ಕಾರದಿಂದ ಅಗತ್ಯವಿರುವ ಎಲ್ಲಾ ನೆರವನ್ನು ನೀಡಲಾಗುವುದು ಎಂದು ಅವರು ಹೇಳಿದರು.
ರೈತರ ಸಾಲ ಮನ್ನಾ ಸುಲಭದ ವಿಚಾರವಲ್ಲ 52,000ಕೋಟಿ ಒಟ್ಟಾರೆ ಸಾಲ ಇದೆ. ಇದರಲ್ಲಿ 42,000 ಕೋಟಿ ಸಾಲ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಮಾಡಲಾಗಿದೆ. ಕೇಂದ್ರ ಸರಕಾರ ಅರ್ಧದಷ್ಟನ್ನು ಮನ್ನಾ ಮಾಡಿದಲ್ಲಿ ಉಳಿದ ಹಣ ರಾಜ್ಯ ಸರಕಾರ ಭರಿಸಲು ಸಿದ್ದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ರಾಜ್ಯದ ರೈತಾಪಿ ವರ್ಗದ ಹಿತಕಾಯುವುದು ನಮ್ಮ ಕರ್ತವ್ಯ. ಅದಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ರಾಜ್ಯದಲ್ಲಿ ಒಂದು ಲಕ್ಷ ಕೃಷಿ ಹೊಂಡಗಳನ್ನು ತೆಗೆಯಲಾಗಿದೆ. ಅಲ್ಲದೆ 2,500 ಪಾಲಿಹೌಸ್‌ಗಳಿಗೆ ನೆರವು ನೀಡಲಾಗಿದೆ. ಅನ್ನ ಭಾಗ್ಯ ಯೋಜನೆ ಬರಗಾಲದಲ್ಲಿ ಬಡ ಜನತೆ ಗುಳೆ ಹೋಗುವುದನ್ನು ನಿಯಂತ್ರಿಸಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಮಾತನಾಡಿ, ರಾಜ್ಯದಲ್ಲೇ ಜಲಕ್ಷಾಮವಿದೆ ನೀರನ್ನು ಎಚ್ಚರಿಕೆಯಿಂದ ಬಳಬೇಕು. ಕಾವೇರಿ ನ್ಯಾಯಾಧೀಕರಣದ ತೀರ್ಪು 3 ತಿಂಗಳಲ್ಲಿ ಹೊರಬರಬಹುದು ಅದನ್ನು ಎದುರಿಸಲು ಸಿದ್ದರಾಗಬೇಕು. ಜಲಾಶಯಗಳ ಮೇಲಿನ ಅವಲಂಬನೆ ಹೆಚ್ಚುತ್ತಿದೆ ಜಲ ಸಂರಕ್ಷಣೆ ಬಗ್ಗೆ ಕಾಳಜಿ ಅಗತ್ಯ ಎಂದರು.
ಅಂತರಜಲದ ಸಮಸ್ಯೆ ನಮ್ಮನ್ನು ಕಾಡುತ್ತಿದೆ ರೈತರು ನಿರಂತರ ಬರದಿಂದ ಬೆಸತ್ತಿದ್ದಾರೆ ಅವರಲ್ಲಿ ಆತ್ಮ ವಿಶ್ವಾಸ ತುಂಬುವ ಕೆಲಸವನ್ನು ಮಾಡಬೇಕಿದೆ. ಹಾಸನ ನಗರ ಬೆಳೆಯುತ್ತಿದೆ ಸುತ್ತಮುತ್ತಲ ಪ್ರದೇಶಗಳು ಸೇರ್ಪಡೆಗೊ0ಂಡಿದೆ 3 ಲಕ್ಷಜನಸಂಖ್ಯೆಯೂ ಮೀರುತ್ತದೆ ಹಾಗಾಗಿ ಹಾಸನ ನಗರ ಸಭೆಯನ್ನು ಮಹಾನಗರಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಬೇಕು ಎಂದು ಮುಖ್ಯ ಮಂತ್ರಿಯವರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎ.ಮಂಜು ಅವರು ಮನವಿ ಮಾಡಿದರು.
ಶ್ರವಣಬೆಳಗೊಳದಲ್ಲಿ 2018 ರ ಫೆಬ್ರವರಿಯಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿದ್ದು ಜಿಲ್ಲಾಡಳಿತದಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 500 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅದನ್ನು ಮುಂದಿನ ಬಜೆಟ್‌ನಲ್ಲಿ ಒದಗಿಸುವಂತೆ ಅವರು ಕೋರಿದರು.
ಜಿಲ್ಲೆಯ ಬರಪರಿಸ್ಥಿತಿ ನಿರ್ವಹಣೆಗೆ ಕ್ಷೇತ್ರವಾರು 1.35 ಕೋಟಿ ರೂಪಾಯಿ ನೀಡಲಾಗಿದೆ .ಆದರೆ ಇನ್ನಷ್ಟು ಹೆಚ್ಚಿನ ಅನುದಾನ ಒದಗಿಸುವಂತೆ ಸಚಿವರು ಮನವಿ ಮಾಡಿದರು.
ಶಾಸಕರಾದ ಕೆ.ಎಂ. ಶಿವಲಿಂಗೇಗೌಡ ಅವರು ಮಾತನಾಡಿ, ಅರಸೀಕೆರೆಗೆ ನೀರು ತರುವಲ್ಲಿ ಮುಖ್ಯ ಮಂತ್ರಿಅವರು ಸಹಕಾರ ನೀಡಿದ್ದಾರೆ .ಇಸ್ರೇಲ್ ತಂತ್ರಜ್ಣಾನ ಬಳಸಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ನೇರವಾಗಿ ನದಿಯಿಂದಲೇ ನೀರು ಸರಬರಾಜಾಗುತ್ತದೆ . ಅಲ್ಲದೆ ಕ್ಷೇತ್ರದ ಒಟ್ಟಾರೆ ಅಭಿವೃದ್ದಿಗೆ ಅವರ ಸಹಕಾರ ಮರೆಯಲಾಗದು ,ಮುಂದಿನ ದಿನಗಳಲ್ಲಿ ಕ್ಷೇತ್ರದ ಚಿತ್ರಣ ಬದಲಾಗಲಿದೆ ಎಂದರು.
ಎತ್ತಿನ ಹೊಳೆ ಯೋಜನೆಯಿಂದಲೂ ಅರಸೀಕೆರೆ ತಾಲೂಕಿಗೆ ನೀರು ಕೊಡಲೇ ಬೇಕೆಂದು ಪಟ್ಟು ಹಿಡಿದ ಕಾರಣ ಯೋಜನಾ ವಲಯಕ್ಕೆ ಸೇರ್ಪಡೆಗೊಳಿಸಲಾಗಿದೆ ಇನ್ನಷ್ಟು ಅಭಿವೃದ್ದಿ ಕಾಮಗಾರಿಗಳು ಕ್ಷೇತ್ರದಲ್ಲಿ ಆಗಬೇಕಿದೆ ಇದಕ್ಕೆ ರಾಜ್ಯ ಸರ್ಕಾರದ ನೆರವು ಅಗತ್ಯವಿದೆ ಎಂದು ಹೇಳಿದರು .
ಜಿಲ್ಲಾ ಪಂಚಾಯತತ್ ಅದ್ಯಕ್ಷೆ ಶ್ವೇತಾ ದೇವರಾಜ್ ,ಶಾಸಕರಾದ ಹೆಚ್.ಡಿ ರೇವಣ್ಣ ,ಬಾಲಕೃಷ್ಣ ,ಗೋಪಾಲಸ್ವಾಮಿ, ಮಲೆನಾಡು ಅಭಿವೃದಿ ಮಂಡಳಿ ಅಧ್ಯಕ್ಷ ಹೆಮ್ಮಿಗೆ ಮೋಹನ್ ,ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಆರ್ ವೆಂಕಟೇಶ್, ಅರಸೀಕೆರೆ ನಗರ ಸಭೆ ಅಧ್ಯಕ್ಷರು ವಿವಿಧ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹಾಜರಿದ್ದರು.