×
Ad

ಶಿವಮೊಗ್ಗ: ಕಾಡ್ಗಿಚ್ಚಿನಿಂದ ಅಪಾರ ಪ್ರಮಾಣದ ಅರಣ್ಯ ಸಂಪತ್ತಿಗೆ ಹಾನಿ

Update: 2017-02-19 17:32 IST

ಶಿವಮೊಗ್ಗ, ಫೆ. 19: ಜಿಲ್ಲೆಯ ಸಾಗರ ತಾಲೂಕಿನ ಬೆಳಂದೂರು, ನಾಡವಳ್ಳಿ, ಚೆನ್ನಾಪುರ, ಕುಡಿಗೆರೆ ಗ್ರಾಮ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು ಅಪಾರ ಪ್ರಮಾಣದ ವನ್ಯ ಸಂಪತ್ತು ಬೆಂಕಿಗಾಹುತಿಯಾಗಿರುವ ವರದಿಗಳು ಬರುತ್ತಿವೆ.

ಕಾಡ್ಗಿಚ್ಚು ನಂದಿಸಲು ಅರಣ್ಯ ಇಲಾಖೆ, ಅಗ್ನಿಶಾಮಕ ದಳದವರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಲಭ್ಯ ಮಾಹಿತಿಯ ಪ್ರಕಾರ ನೂರಾರು ಎಕರೆ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಆವರಿಸಿದ್ದು, ಬೆಂಕಿ ನಂದಿಸಲು ಹರಸಾಹಸ ನಡೆಸುವಂತಾಗಿದೆ.

ಈ ಭಾಗದಲ್ಲಿ ತೀವ್ರವಾದ ಗಾಳಿ ಬೀಸುತ್ತಿದ್ದು, ಇದು ಕೂಡ ಕಾಡ್ಗಿಚ್ಚು ವೇಗವಾಗಿ ವ್ಯಾಪಿಸಲು ಕಾರಣವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಮಳೆ ಕಣ್ಮರೆಯಾಗಿ, ತೀವ್ರ ಸ್ವರೂಪದ ಬಿಸಿಲು ಬೀಳುತ್ತಿದೆ. ಇದರಿಂದ ಅರಣ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮರ-ಗಿಡ, ಪೊದೆ, ಹಸಿರು ಹುಲ್ಲು ಒಣಗಿ ನಿಂತುಕೊಂಡಿದೆ. ಇದರಿಂದ ಕಾಡ್ಗಿಚ್ಚು ಶರವೇಗದಲ್ಲಿ ಆವರಿಸಲು ಮುಖ್ಯ ಕಾರಣವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಿದ್ದಾರೆ.

ಆತಂಕ:

ಕಾಡ್ಗಿಚ್ಚಿನಿಂದ ವನ್ಯಪ್ರಾಣಿಗಳು ದಿಕ್ಕಾಪಾಲಾಗಿ ಓಡುತ್ತಿದ್ದು, ಸಮೀಪದ ಜನ ವಸತಿ ಪ್ರದೇಶಗಳಿಗೆ ನುಗ್ಗುವ ಆತಂಕ ಸ್ಥಳೀಯರದ್ದಾಗಿದೆ. ಮತ್ತೊಂದೆಡೆ ಕಾಡ್ಗಿಚ್ಚಿನಿಂದ ಅರಣ್ಯದಂಚಿನಲ್ಲಿರುವ ಅಡಕೆ, ಬಾಳೆ, ಕೃಷಿ ಗದ್ದೆಗಳಿಗೆ ಹಾನಿಯಾಗಿದೆ. ಇನ್ನೊಂದೆಡೆ ಬೆಳಂದೂರು ಗ್ರಾಮದಲ್ಲಿ ಹುಲ್ಲಿನ ಬಣವೆಯೂ ಬೆಂಕಿಗೆ ಆಹುತಿಯಾಗಿದ್ದು, ಸಾವಿರಾರು ರೂ. ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ.

ನಿರ್ಲಕ್ಷ್ಯ:

ಕಳೆದ ಮೂರ್ನಾಲ್ಕು ದಿನಗಳ ಹಿಂದೆಯೇ ಅರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು ಅರಣ್ಯ ಇಲಾಖೆಯು ಬೆಂಕಿ ನಂದಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಂಡಿರಲಿಲ್ಲ. ಇದರಿಂದ ಪ್ರಸ್ತುತ ಕಾಡ್ಗಿಚ್ಚು ಸಾವಿರಾರು ಎಕರೆ ಅರಣ್ಯ ಪ್ರದೇಶಕ್ಕೆ ಹಬ್ಬುವಂತಾಗಿದ್ದು, ಅರಣ್ಯದಂಚಿನಲ್ಲಿರುವ ಗ್ರಾಮಸ್ಥರು ಬೆಂಕಿಯ ಬಿಸಿಗೆ ತುತ್ತಾಗುವಂತಾಗಿದೆ. ತತ್‌ಕ್ಷಣವೇ ಸಮರೋಪಾದಿಯಲ್ಲಿ ಅರಣ್ಯಕ್ಕೆ ತಗುಲಿರುವ ಬೆಂಕಿ ನಂದಿಸಲು ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News