3.07ಲಕ್ಷ ರೂ.ಗಳಿಗಿಂತ ಒಂದು ಪೈಸೆ ಹೆಚ್ಚಿಗೆ ಸಿಕ್ಕಿದ್ದು ಸಾಬೀತು ಮಾಡಿದರೆ ಬಿಎಸ್‌ವೈ ಮನೆಯಲ್ಲಿ ಜೀತ ಮಾಡುವೆ
ಬೆಳಗಾವಿ, ಫೆ. 20: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಮ್ಮ ನಿವಾಸದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ 3.07 ಲಕ್ಷ ರೂ.ಗಳಿಗಿಂತ ಒಂದು ಪೈಸೆ ಹೆಚ್ಚಿನ ಮೊತ್ತ ಪತ್ತೆಯಾಗಿರುವುದು ಸಾಬೀತು ಮಾಡಿದರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮನೆಯಲ್ಲಿ ಜೀತದಾಳಾಗಿ ದುಡಿಯಲು ಸಿದ್ಧ ಎಂದು ಸಣ್ಣ ಕೈಗಾರಿಕೆ ಸಚಿವ ರಮೇಶ್ ಜಾರಕಿಹೊಳಿ ಸವಾಲು ಹಾಕಿದ್ದಾರೆ.
ಸೋಮವಾರ ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಐಟಿ ದಾಳಿಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಹೆಚ್ಚಿಗೆ ಪ್ರತಿಕ್ರಿಯೆ ನೀಡದಂತೆ ನನ್ನ ವಕೀಲರು ಸಲಹೆ ಮಾಡಿದ್ದು, ಈ ಬಗ್ಗೆ ಹೆಚ್ಚಿಗೆ ಮಾತನಾಡುವುದಿಲ್ಲ ಎಂದು ನಿರಾಕರಿಸಿದರು.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಗೆ ಸಂಬಂಧಿಸಿದಂತೆ ಈಗಲೂ ಮತ್ತು ಮುಂದೆಯೂ ತಾನು ಬದ್ಧ. ವಿನಾಕಾರಣ ತನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ. ತನ್ನ ಮನೆಯಲ್ಲಿ 3.07ಲಕ್ಷ ರೂ.ಗಳಷ್ಟೇ ಪತ್ತೆಯಾಗಿದ್ದು ಎಂದು ಸ್ಪಷ್ಟಣೆ ನೀಡಿದರು.
ಭೀಕರ ಸ್ವರೂಪದ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಕೊರತೆ ಸೃಷ್ಟಿಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ಅವರು, ಹದಿನೈದು ದಿನಗಳಿಗೆ ಒಮ್ಮೆ ಸಭೆ ನಡೆಸಿ ಪರಿಶೀಲನೆ ನಡೆಸಲಾಗುವುದು ಎಂದರು
ಬೇಸಿಗೆಯಲ್ಲಿ ಕುಡಿಯುವ ನೀರಿನ ಸೃಷ್ಟಿಯಾಗುವ ಸಾಧ್ಯತೆಯಿದ್ದು, ಕೃಷ್ಣಾ ನದಿಗೆ ನೀರು ಹರಿಸುವಂತೆ ಕೋರಿ ಮಹಾರಾಷ್ಟ್ರಕ್ಕೆ ನಿಯೋಗ ಕೊಂಡೊಯ್ಯಲಾಗುವುದು ಎಂದ ಅವರು, ಬರ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರಕಾರ ಎಲ್ಲ ಕ್ರಮ ವಹಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.